ಟಿ. ಜಿ. ಶ್ರೀನಿಧಿ
ಕಂಪ್ಯೂಟರಿನೊಡನೆ ನಮ್ಮ ಒಡನಾಟದ ಬಹುಪಾಲು ಕೀಲಿಮಣೆ ಹಾಗೂ ಮೌಸ್ ಮೂಲಕವೇ ನಡೆಯುವುದು ಸಾಮಾನ್ಯ. ಮೊಬೈಲ್ ಫೋನುಗಳಲ್ಲೂ ಅಷ್ಟೇ: ಕರೆಮಾಡಬೇಕಾದ ಸಂಖ್ಯೆಯನ್ನು ಒತ್ತಲು, ಸಂದೇಶಗಳನ್ನು ಟೈಪ್ ಮಾಡಲು, ಆಪ್ ಬಳಸಲು ನಾವು ಕೀಲಿಮಣೆಯನ್ನೇ ಹೆಚ್ಚಾಗಿ ಬಳಸುತ್ತೇವೆ. ಕೀಲಿಮಣೆಯಿಲ್ಲದ ಸ್ಮಾರ್ಟ್ವಾಚ್ನಂತಹ ಸಾಧನಗಳಲ್ಲೂ ನಮ್ಮ ಕೆಲಸ ಸಾಗಬೇಕಾದರೆ ಪರದೆಯನ್ನು ಸ್ಪರ್ಶಿಸುವುದು, ಬೇಕಾದ ಸೌಲಭ್ಯವನ್ನು ಆಯ್ದುಕೊಳ್ಳುವುದು ಅನಿವಾರ್ಯ.
ಇದರ ಅರ್ಥ ಇಷ್ಟೇ, ಯಂತ್ರಗಳ ಜೊತೆಗಿನ ನಮ್ಮ ಸಂವಹನ ಇಂದಿಗೂ ಮೌಖಿಕವಲ್ಲದ (ನಾನ್-ವರ್ಬಲ್) ಮಾರ್ಗಗಳನ್ನೇ ಹೆಚ್ಚಾಗಿ ಅವಲಂಬಿಸಿದೆ. ಕೀಲಿಮಣೆಯ ಕೀಲಿಗಳನ್ನು ಒತ್ತುವುದು, ಟಚ್ ಸ್ಕ್ರೀನ್ ಮೇಲಿನ ಸಂಕೇತಗಳನ್ನು ಸ್ಪರ್ಶಿಸುವುದೆಲ್ಲ ಈ ಬಗೆಯ ಸಂವಹನದ್ದೇ ಉದಾಹರಣೆಗಳು.
ಹೀಗೇಕೆ? ಇತರ ಮನುಷ್ಯರೊಡನೆ ಮಾತನಾಡುವಂತೆ ನಾವು ಯಂತ್ರಗಳೊಡನೆ ಮಾತನಾಡುವುದು ಸಾಧ್ಯವಿಲ್ಲವೇ?
ಖಂಡಿತಾ ಸಾಧ್ಯವಿದೆ. ಇದನ್ನು ಸಾಧ್ಯವಾಗಿಸುವ ತಂತ್ರಜ್ಞಾನವೇ ಸ್ಪೀಚ್ ರೆಕಗ್ನಿಶನ್. ನಾವು ಏನು ಹೇಳುತ್ತಿದ್ದೇವೆ ಎಂದು ಗುರುತಿಸಿ, ಅದನ್ನು ಅರ್ಥೈಸಿಕೊಂಡು, ನಿರ್ದಿಷ್ಟ ಕೆಲಸ ಕೈಗೊಳ್ಳುವಂತೆ ಕಂಪ್ಯೂಟರಿಗೋ ಸ್ಮಾರ್ಟ್ಫೋನಿಗೋ ನಿರ್ದೇಶಿಸುವುದನ್ನು ಈ ತಂತ್ರಜ್ಞಾನ ಸಾಧ್ಯವಾಗಿಸುತ್ತದೆ.
ಸಾಧನಗಳನ್ನು, ತಂತ್ರಾಂಶಗಳನ್ನು ಹೆಚ್ಚು ಗ್ರಾಹಕ ಸ್ನೇಹಿಯಾಗಿಸುವಲ್ಲಿ, ಬಳಕೆದಾರರ ಉತ್ಪಾದಕತೆ ಹೆಚ್ಚಿಸುವಲ್ಲಿ ಈ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಮಿಲಿಟರಿ, ರೋಬಾಟಿಕ್ಸ್, ವೈದ್ಯಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸ್ಪೀಚ್ ರೆಕಗ್ನಿಶನ್ ಬಳಕೆಯಾಗುತ್ತದೆ. ದೈಹಿಕ ಸಮಸ್ಯೆಗಳಿಂದ ಕೀಬೋರ್ಡ್-ಮೌಸ್ ಇತ್ಯಾದಿಗಳನ್ನು ಬಳಸಲು ಸಾಧ್ಯವಿಲ್ಲದವರಿಗೂ ಇದು ಅನುಕೂಲಕರ.
ಧ್ವನಿರೂಪದ ಮಾಹಿತಿಯನ್ನು (ದೂರವಾಣಿ ಕರೆ, ಭಾಷಣ ಇತ್ಯಾದಿ) ಪಠ್ಯರೂಪಕ್ಕೆ ಪರಿವರ್ತಿಸುವಲ್ಲೂ ಈ ತಂತ್ರಜ್ಞಾನವನ್ನು ಬಳಸಬಹುದು. ನಮ್ಮ ಮಾತುಗಳನ್ನು ಬೇರೆಯವರಿಂದ ಬರೆಸಿದಂತೆಯೇ (ಉಕ್ತಲೇಖನ) ಕೆಲಸಮಾಡುವ ಇಂತಹ ತಂತ್ರಾಂಶಗಳನ್ನು 'ಸ್ಪೀಚ್ ಟು ಟೆಕ್ಸ್ಟ್' ತಂತ್ರಾಂಶಗಳೆಂದು ಕರೆಯುತ್ತಾರೆ. ಬೇರೊಬ್ಬ ವ್ಯಕ್ತಿ ಬರೆದುಕೊಳ್ಳುವ ಬದಲಿಗೆ ಕಂಪ್ಯೂಟರ್ ಅಥವಾ ಸ್ಮಾರ್ಟ್ಫೋನ್ ಇಲ್ಲಿ ಆ ಕೆಲಸ ಮಾಡುತ್ತದೆ ಎನ್ನುವುದಷ್ಟೇ ವ್ಯತ್ಯಾಸ.
ಆಂಡ್ರಾಯ್ಡ್ ಫೋನುಗಳಲ್ಲಿ ಲಭ್ಯವಿರುವ ಗೂಗಲ್ ಕೀಲಿಮಣೆ, ಲಿಪಿಕಾರ್ ಮುಂತಾದ ತಂತ್ರಾಂಶಗಳು ಕನ್ನಡದಲ್ಲೂ ಈ ಸೌಲಭ್ಯ ನೀಡುತ್ತಿವೆ. ಇಂಡಸ್ ಓಎಸ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಫೋನುಗಳಲ್ಲೂ ಈ ಸೌಲಭ್ಯ ಒದಗಿಸಲಾಗಿದೆ (ಲಿಪಿಕಾರ್ ಹಾಗೂ ಇಂಡಸ್ ಓಎಸ್ನ ತಂತ್ರಾಂಶಗಳಲ್ಲಿ ಧ್ವನಿಯನ್ನು ಗುರುತಿಸುವ ತಂತ್ರಜ್ಞಾನವನ್ನು ರೂಪಿಸಿದ್ದು ಬೆಂಗಳೂರು ಮೂಲದ liv.ai ಎಂಬ ಸಂಸ್ಥೆ. ಈ ಸಂಸ್ಥೆ ಕನ್ನಡವೂ ಸೇರಿದಂತೆ ಒಟ್ಟು ಒಂಬತ್ತು ಭಾರತೀಯ ಭಾಷೆಗಳಲ್ಲಿ ಸ್ಪೀಚ್ ಟು ಟೆಕ್ಸ್ಟ್ ತಂತ್ರಜ್ಞಾನವನ್ನು ರೂಪಿಸಿದೆ)
ಸ್ಮಾರ್ಟ್ಫೋನ್ - ಸ್ಮಾರ್ಟ್ವಾಚ್ ಮುಂತಾದ ಅನೇಕ ಸಾಧನಗಳಲ್ಲಿ ಈ ತಂತ್ರಜ್ಞಾನದ ಬಳಕೆ ಈಗಾಗಲೇ ಆಗುತ್ತಿದೆ. ಆಂಡ್ರಾಯ್ಡ್ನ 'ಓಕೆ ಗೂಗಲ್' ಹಾಗೂ ಗೂಗಲ್ ಅಸಿಸ್ಟೆಂಟ್, ಆಪಲ್ನ 'ಸಿರಿ', ಅಮೆಜಾನ್ನ 'ಅಲೆಕ್ಸಾ' ಹಾಗೂ ಮೈಕ್ರೋಸಾಫ್ಟ್ನ 'ಕೊರ್ಟಾನಾ' ಸ್ಪೀಚ್ ರೆಕಗ್ನಿಶನ್ ತಂತ್ರಜ್ಞಾನ ಬಳಸುತ್ತಿರುವ ಇಂತಹ ಸೌಲಭ್ಯಗಳಿಗೆ ಪ್ರಮುಖ ಉದಾಹರಣೆಗಳು. ನಿರ್ದಿಷ್ಟ ಆಪ್ ತೆರೆಯುವುದು, ದೂರವಾಣಿ ಕರೆ ಮಾಡುವುದು, ಸಂದೇಶ ಕಳುಹಿಸುವುದು, ಅಗತ್ಯ ಮಾಹಿತಿ ಹುಡುಕುವುದು, ಮಾಡಬೇಕಾದ ಕೆಲಸಗಳನ್ನು ಗುರುತಿಟ್ಟುಕೊಳ್ಳುವುದು - ಹೀಗೆ ಹಲವಾರು ಉದ್ದೇಶಗಳಿಗೆ ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ನಾವು ಹೇಳಿದ ಪದದ ಅರ್ಥವನ್ನೋ ಇತರ ಭಾಷೆಗಳಲ್ಲಿ ಅದರ ಅನುವಾದವನ್ನೋ ಪಡೆದುಕೊಳ್ಳಲೂ ಈ ಸೌಲಭ್ಯಗಳು ನೆರವಾಗುತ್ತವೆ ('good morning in Kannada' ಎಂದು ಗೂಗಲ್ ಅಸಿಸ್ಟೆಂಟ್ಗೆ ಹೇಳಿದರೆ 'ಶುಭೋದಯ' ನಮ್ಮೆದುರು ಕಾಣಿಸಿಕೊಳ್ಳುತ್ತದೆ, ಬೇಕಿದ್ದರೆ ಪ್ರಯತ್ನಿಸಿ ನೋಡಿ!).
ಗೂಗಲ್ ತಾಣದಲ್ಲಿ ಮಾಹಿತಿಗಾಗಿ ಹುಡುಕಾಡುವುದು ನಮಗೆ ಗೊತ್ತೇ ಇದೆಯಲ್ಲ, ಕೀವರ್ಡ್ ಅಥವಾ ಹುಡುಕುಪದಗಳನ್ನು ಟೈಪ್ ಮಾಡುವ ಬದಲಿಗೆ ಅವನ್ನು ಧ್ವನಿರೂಪದಲ್ಲೇ ಹೇಳುವುದು ಕೂಡ ಸಾಧ್ಯವಿದೆ. ನಿಮ್ಮ ಆಂಡ್ರಾಯ್ಡ್ ಮೊಬೈಲಿನ ಗೂಗಲ್ ಆಪ್ ತೆರೆದು ಅದರಲ್ಲಿರುವ ಮೈಕ್ ಚಿಹ್ನೆಯನ್ನು ಒತ್ತಿದರೆ ಸಾಕು, ಅದು ನಿಮ್ಮ ಮಾತು ಕೇಳಲು ಸಿದ್ಧವಾಗುತ್ತದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಇದೀಗ ನಾವು ಗೂಗಲ್ ಜೊತೆ ಮಾತನಾಡಬಹುದು!
(ನೆನಪಿಡಿ: ಕನ್ನಡದಲ್ಲಿ ಮಾತನಾಡಿದ್ದು ಗೂಗಲ್ಗೆ ಅರ್ಥವಾಗಬೇಕಾದರೆ ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಫೋನಿನ ಸೆಟಿಂಗ್ಸ್ > ಗೂಗಲ್ ಸೆಟಿಂಗ್ಸ್ > ಸರ್ಚ್ > ವಾಯ್ಸ್ > ಲ್ಯಾಂಗ್ವೇಜಸ್ ಅಡಿಯಲ್ಲಿ ಕನ್ನಡವನ್ನು ಆರಿಸಿಕೊಂಡಿರಬೇಕು; ಈ ಮೂಲಕ ಗೂಗಲ್ ಕೀಲಿಮಣೆಯಲ್ಲಿ ಕನ್ನಡ ಸ್ಪೀಚ್-ಟು-ಟೆಕ್ಸ್ಟ್ ಸೌಲಭ್ಯ ಬಳಸುವುದೂ ಸಾಧ್ಯವಾಗುತ್ತದೆ)
ಆಗಸ್ಟ್ ೨೦, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
1 ಕಾಮೆಂಟ್:
ನಾನು ಓದಿದ ಅತ್ಯುತ್ತಮ ಲೇಖನಗಳಲ್ಲೊಂದು. ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ