ಬುಧವಾರ, ನವೆಂಬರ್ 30, 2016

ನಿಮಗೆ 'ರುಪೇ' ಗೊತ್ತೇ?

ಟಿ. ಜಿ. ಶ್ರೀನಿಧಿ


ಪ್ರಪಂಚದಲ್ಲಿ ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡ್ ನೀಡುವ ಸಾವಿರಾರು ಬ್ಯಾಂಕುಗಳಿವೆ, ಲಕ್ಷಗಟ್ಟಲೆ ವ್ಯಾಪಾರಸ್ಥರಿದ್ದಾರೆ, ಕೋಟ್ಯಂತರ ಸಂಖ್ಯೆಯ ಗ್ರಾಹಕರಿದ್ದಾರೆ. ಕಾರ್ಡ್ ನೀಡುವ ಪ್ರತಿ ಬ್ಯಾಂಕಿನ ಸಂಪರ್ಕ ಪ್ರತಿಯೊಬ್ಬ ವ್ಯಾಪಾರಸ್ಥನಿಗೂ ಇರಬೇಕು ಎಂದರೆ ಅದು ಅಸಾಧ್ಯವೇ ಸರಿ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ, ವ್ಯಾಪಾರಸ್ಥ ಹಾಗೂ ಬ್ಯಾಂಕುಗಳ ನಡುವಿನ ಸಂಪರ್ಕ ಸೇತುವಿನಂತೆ ವೀಸಾ ಹಾಗೂ ಮಾಸ್ಟರ್‌ಕಾರ್ಡ್‌ನಂತಹ ಸಂಸ್ಥೆಗಳು ಕೆಲಸಮಾಡುತ್ತವೆ.

ಯಾವುದೇ ವ್ಯಾಪಾರಸ್ಥನೊಡನೆ ವ್ಯವಹರಿಸುವಾಗ ಗ್ರಾಹಕ ತನ್ನ ಕಾರ್ಡ್ ಬಳಸುತ್ತಾನೆ ಎಂದುಕೊಳ್ಳೋಣ. ಆತನ ಬ್ಯಾಂಕ್ ಖಾತೆ ಪರಿಶೀಲಿಸಿ ಅದರಲ್ಲಿ ಸಾಕಷ್ಟು ಹಣವಿದ್ದರೆ ಅದನ್ನು ಆತನ ಬ್ಯಾಂಕಿನಿಂದ ವ್ಯಾಪಾರಸ್ಥನ ಬ್ಯಾಂಕಿಗೆ-ಖಾತೆಗೆ ವರ್ಗಾಯಿಸಲು ನೆರವಾಗುವುದು ಈ ಸಂಸ್ಥೆಗಳ ಕೆಲಸ. ಇದಕ್ಕಾಗಿ ಅವು ಬ್ಯಾಂಕುಗಳಿಂದ ಶುಲ್ಕ ವಸೂಲಿ ಮಾಡುತ್ತವೆ.
ಬ್ಯಾಂಕುಗಳು ಈ ಶುಲ್ಕವನ್ನು ವ್ಯಾಪಾರಿಗಳಿಗೆ ವರ್ಗಾಯಿಸುತ್ತವೆ (ವ್ಯಾಪಾರಿಗಳು ಈ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುವ ಪರಿಪಾಠವನ್ನು ತಡೆಯಲು ಈಗಷ್ಟೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ).

ಶುಲ್ಕವನ್ನು ಗ್ರಾಹಕ, ವ್ಯಾಪಾರಿ ಅಥವಾ ಬ್ಯಾಂಕು - ಯಾರೇ ನೀಡಿದರೂ ಅಷ್ಟು ಹಣ ಅಂತಿಮವಾಗಿ ಭಾರತದಿಂದ ಹೊರಗೆ ಹೋದಂತಾಗುತ್ತದಲ್ಲ! ಹೀಗಾಗಿ ಈ ಕೆಲಸಕ್ಕೆ ವಿದೇಶಿ ವ್ಯವಸ್ಥೆಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯನ್ನು ಬದಲಿಸುವ ಪ್ರಯತ್ನಗಳು ನಡೆದಿದ್ದವು. ಈ ಪ್ರಯತ್ನಗಳ ಫಲವಾಗಿ ರೂಪುಗೊಂಡದ್ದೇ 'ರುಪೇ' (RuPay).

ಇದು ವೀಸಾ - ಮಾಸ್ಟರ್‌ಕಾರ್ಡ್‌ಗಳಂತೆಯೇ ಕೆಲಸಮಾಡುವ ಭಾರತೀಯ ವ್ಯವಸ್ಥೆ. ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಎಂಬ ಸಂಸ್ಥೆ ನಿರ್ವಹಿಸುತ್ತಿರುವ ವ್ಯವಸ್ಥೆ ಇದು. ಹಣಕಾಸು ಸಂಸ್ಥೆಗಳು, ವ್ಯಾಪಾರಿಗಳು ಹಾಗೂ ಗ್ರಾಹಕರ ನಡುವೆ ಸೇತುವೆಯಂತೆ, ವೀಸಾ - ಮಾಸ್ಟರ್‌ಕಾರ್ಡ್‌ಗಳ ಹಾಗೆಯೇ, ಕೆಲಸಮಾಡುವ ಈ ವ್ಯವಸ್ಥೆಯಲ್ಲಿ ನೀಡಬೇಕಾದ ಶುಲ್ಕ ಮಾತ್ರ ಬಹಳ ಕಡಿಮೆ. ಹಾಗೆ ಪಾವತಿಸುವ ಶುಲ್ಕ ನಮ್ಮ ದೇಶದ ಸಂಸ್ಥೆಯನ್ನೇ ಸೇರುವುದು ಈ ವ್ಯವಸ್ಥೆಯ ಇನ್ನೊಂದು ವೈಶಿಷ್ಟ್ಯ.

ಹಲವು ಪ್ರಮುಖ ಬ್ಯಾಂಕುಗಳು ರುಪೇ ಕಾರ್ಡುಗಳನ್ನು ಈಗಾಗಲೇ ವಿತರಿಸುತ್ತಿವೆ; ಅಷ್ಟೇ ಅಲ್ಲ, ಅವನ್ನು ಬಹುತೇಕ ಎಲ್ಲ ಕಡೆಗಳಲ್ಲೂ ಬಳಸುವುದು ಕೂಡ ಸಾಧ್ಯವಾಗಿದೆ. ವೀಸಾ - ಮಾಸ್ಟರ್‌ಕಾರ್ಡುಗಳಂತೆ ರುಪೇ ಬಳಕೆದಾರರಿಗೂ ಆಗಿಂದಾಗ್ಗೆ ಹಲವು ವಿಶೇಷ ಕೊಡುಗೆಗಳನ್ನು ಘೋಷಿಸುವ ಅಭ್ಯಾಸವೂ ಶುರುವಾಗಿದೆ. ನೀವೂ ಒಂದು ರುಪೇ ಕಾರ್ಡ್ ಪಡೆಯಲು ನಿಮ್ಮ ಬ್ಯಾಂಕನ್ನು ಸಂಪರ್ಕಿಸಬಹುದು!

ಜೂನ್ ೨೦, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ಸುಧಾರಿತ ರೂಪ

1 ಕಾಮೆಂಟ್‌:

Aniruddh ಹೇಳಿದರು...

ತುಂಬಾ ಉಪಯುಕ್ತ ಮಾಹಿತಿ.

badge