ಶನಿವಾರ, ಮಾರ್ಚ್ 22, 2014

ಜಾಲಲೋಕದ ಸಿಲ್ವರ್ ಜ್ಯೂಬಿಲಿ!

ಟಿ. ಜಿ. ಶ್ರೀನಿಧಿ

ಈ ತಿಂಗಳು ವಿಶ್ವವ್ಯಾಪಿ ಜಾಲಕ್ಕೆ (ವರ್ಲ್ಡ್‌ವೈಡ್ ವೆಬ್) ಇಪ್ಪತ್ತೈದು ವರ್ಷ ತುಂಬಿದ ಸಂಭ್ರಮ. ನಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಈ ವ್ಯವಸ್ಥೆಯ ಹೆಸರು ನಮಗೆಲ್ಲರಿಗೂ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಅಂತಲೇ ಹೆಚ್ಚು ಪರಿಚಯ ಎನ್ನಬೇಕು.

ಈ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೇನು ಎಂದು ಕೇಳಿದಾಗ ಮಾತ್ರ ನಮ್ಮಲ್ಲಿ ಅನೇಕರಿಗೆ ಕೊಂಚ ಗೊಂದಲವಾಗುತ್ತದೆ. "ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೆ ಇಂಟರ್‌ನೆಟ್ ತಾನೆ?" ಎನ್ನುವುದು ಅವರಲ್ಲಿ ಬಹಳಷ್ಟು ಜನ ಕೇಳುವ ಪ್ರಶ್ನೆ.

ಅಲ್ಲ, ಈ ವಿಶ್ವವ್ಯಾಪಿ ಜಾಲ ಅಂತರಜಾಲದ ಒಂದು ಅಂಗ ಮಾತ್ರ. ವಿಶ್ವವ್ಯಾಪಿ ಜಾಲ ಹುಟ್ಟುವ ಮೊದಲೇ ಅಂತರಜಾಲ ಇತ್ತು. ಆದರೆ ಅದು ಆಗ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಮಾತ್ರವೇ ಹೆಚ್ಚಾಗಿ ಬಳಕೆಯಲ್ಲಿತ್ತು. ಸಾಮಾನ್ಯ ಜನತೆಗೆ ಆಗಿನ್ನೂ ಅದು ಅಷ್ಟಾಗಿ ಪರಿಚಿತವಾಗಿರಲಿಲ್ಲ.

ಇಂತಹ ಪರಿಸ್ಥಿತಿಯಿದ್ದಾಗ, ೧೯೮೦ರ ದಶಕದ ಪ್ರಾರಂಭದಲ್ಲಿ, ಟಿಮ್ ಬರ್ನರ್ಸ್ ಲೀ ಎಂಬ ತಂತ್ರಜ್ಞ ಸ್ವಿಟ್ಜರ್‌ಲೆಂಡಿನ ಜಿನೀವಾದಲ್ಲಿರುವ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದರು.
ಅಲ್ಲಿ ನಡೆಯುತ್ತಿದ್ದ ಸಂಶೋಧನೆಗಳು ಹಾಗೂ ಸಂಶೋಧಕರ ಬಗೆಗಿನ ವಿವರಗಳನ್ನು ಸುಲಭವಾಗಿ ದೊರಕುವ ರೀತಿಯಲ್ಲಿ ಸಂಗ್ರಹಿಸಿಡಲು ಆತ 'ಎನ್‌ಕ್ವೈರ್' ಎಂಬ ಹೆಸರಿನ ಕ್ರಮವಿಧಿಯನ್ನು (ಪ್ರೋಗ್ರಾಂ) ಬರೆದರು.

ಈ ಕ್ರಮವಿಧಿಯಲ್ಲಿ ವಿವಿಧ ಸ್ಥಳಗಳಲ್ಲಿರುವ ಮಾಹಿತಿಯ ನಡುವೆ ಸಂಪರ್ಕ ಕಲ್ಪಿಸಲು ಹೈಪರ್‌ಟೆಕ್ಸ್ಟ್ ಅನ್ನು ಬಳಸಲಾಗಿತ್ತು. ಮಾಹಿತಿಯ ಒಂದು ತುಣುಕಿನ ಮೇಲೆ ಕ್ಲಿಕ್ ಮಾಡುವ ಮೂಲಕ ಬೇರೊಂದು ಕಡೆ ಇರುವ ಮಾಹಿತಿಯನ್ನು ಪಡೆದುಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತಿತ್ತು; ಈಗ ನಾವು ಯಾವುದೋ ಸುದ್ದಿಸಂಸ್ಥೆಯ ಜಾಲತಾಣದಲ್ಲಿ 'ಕ್ರಿಕೆಟ್ ಸ್ಕೋರ್' ಎಂಬ ಪದದ ಮೇಲೆ ಕ್ಲಿಕ್ ಮಾಡಿದಾಗ ಕ್ರಿಕೆಟ್ ಪಂದ್ಯದ ಸ್ಕೋರ್ ವಿವರ ನೀಡುವ ಪುಟ ತೆರೆದುಕೊಳ್ಳುತ್ತದಲ್ಲ, ಹಾಗೆ.

ಆದರೆ ಈ ಕ್ರಮವಿಧಿ ಪರಿಪೂರ್ಣಗೊಳ್ಳುವ ಮೊದಲೇ ಲೀ ಕೆಲಸದ ಅವಧಿ ಮುಗಿದಿದ್ದರಿಂದ ಅವರು ಹಿಂದಕ್ಕೆ ತೆರಳಬೇಕಾಯಿತು. ಮುಂದೆ, ೧೯೮೪ರಲ್ಲಿ ಆತ ಅದೇ ಸಂಸ್ಥೆಗೆ ಖಾಯಂ ಉದ್ಯೋಗಿಯಾಗಿ ಮರಳಿಬಂದರು.

ಆ ವೇಳೆಗಾಗಲೇ ಅಂತರಜಾಲ ಪ್ರಚಾರ ಪಡೆದುಕೊಳ್ಳುತ್ತಿತ್ತು. ಸರ್ನ್ ವಿಜ್ಞಾನಿಗಳು ವಿಶ್ವದ ವಿವಿಧೆಡೆಗಳಲ್ಲಿ ಸಂಶೋಧನೆಗಳನ್ನೂ ನಡೆಸುತ್ತಿದ್ದರು. ಈ ಸಂಶೋಧನೆಗಳಿಗೆ ಸಂಬಂಧಪಟ್ಟ ಮಾಹಿತಿಯ ವಿನಿಮಯ ಅಂತರಜಾಲದ ಮೂಲಕ ನಡೆಯುತ್ತಿತ್ತು. ಆದರೆ ಬೇರೆಬೇರೆ ಕಡೆಗಳಲ್ಲಿ ಬೇರೆಬೇರೆ ರೀತಿಯ ಮಾಹಿತಿ ಸಂಗ್ರಹಣಾ ವಿಧಾನಗಳನ್ನು ಪಾಲಿಸಲಾಗುತ್ತಿದ್ದುದರಿಂದ ವಿವಿಧ ಮೂಲಗಳಿಂದ ಮಾಹಿತಿಯನ್ನು ಒಟ್ಟುಗೂಡಿಸುವುದು ದೊಡ್ಡ ತಲೆನೋವಿನ ಸಂಗತಿಯಾಗಿತ್ತು.

ಈ ತೊಂದರೆಯಿಂದ ಪಾರಾಗಲು ತಾವು ಈ ಹಿಂದೆ ರಚಿಸಿದ್ದ ಎನ್‌ಕ್ವೈರ್‌ನಂತಹುದೇ ಕ್ರಮವಿಧಿಯೊಂದನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುವಾಗುವಂತೆ ರೂಪಿಸಿದರೆ, ಅಂತರಜಾಲದಲ್ಲಿರುವ ಮಾಹಿತಿಯನ್ನು ಯಾರು ಎಲ್ಲಿಂದ ಹೇಗೆ ಬೇಕಿದ್ದರೂ ಪಡೆದುಕೊಳ್ಳಲು ಸಾಧ್ಯವಾಗಬಹುದು ಎಂಬ ಆಲೋಚನೆ ಲೀ ತಲೆಗೆ ಬಂತು. ಆ ಆಲೋಚನೆಯ ಆಧಾರದ ಮೇಲೆ ಕೆಲಸ ಪ್ರಾರಂಭಿಸಿದ ಲೀ, ವಿಶ್ವದ ಮೂಲೆ ಮೂಲೆಗಳಲ್ಲಿರಬಹುದಾದ ಮಾಹಿತಿಯನ್ನು ಅಂತರಜಾಲದ ಮೂಲಕ ಸಂಪರ್ಕಿಸುವ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಮಗ್ನನಾದರು.

ಈ ಜಾಲದಲ್ಲಿರುವ ಪ್ರತಿಯೊಂದು ಮಾಹಿತಿ ಕೇಂದ್ರಕ್ಕೂ 'ಯೂನಿಫಾರ್ಮ್ ರಿಸೋರ್ಸ್ ಇಂಡಿಕೇಟರ್ (ಯುಆರ್‌ಐ)' ಎಂಬ ಒಂದೊಂದು ವಿಶಿಷ್ಟ ವಿಳಾಸವನ್ನು ನೀಡಿದರು (ಈ ವಿಳಾಸವನ್ನು ಈಗ ಯುಆರ್‌ಎಲ್ ಅಥವಾ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ; www.udayavani.com, www.srinidhi.net.in, www.ejnana.com ಮೊದಲಾದವುಗಳೆಲ್ಲ ಯುಆರ್‌ಎಲ್‌ನ ಉದಾಹರಣೆಗಳು).

info.cern.ch ಎಂಬ ವಿಳಾಸದಲ್ಲಿ ಮೊದಲ ತಾಣ ರೂಪಿಸಿದ ಲೀ ಇಂತಹ ತಾಣಗಳ ರಚನೆಗಾಗಿ ಹೈಪರ್‌ಟೆಕ್ಸ್ಟ್ ಮಾರ್ಕಪ್ ಲ್ಯಾಂಗ್ವೇಜ್ (ಎಚ್‌ಟಿಎಂಎಲ್) ಎಂಬ ಸರಳ ಭಾಷೆಯನ್ನೂ ಹುಟ್ಟುಹಾಕಿದರು. ಇಂತಹ ತಾಣಗಳಿಂದ ಬಳಕೆದಾರರ ಗಣಕಗಳಿಗೆ ಮಾಹಿತಿ ವರ್ಗಾವಣೆ ಮಾಡಲು ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋ ಕಾಲ್ (ಎಚ್‌ಟಿಟಿಪಿ) ಎಂಬ ವ್ಯವಸ್ಥೆಯನ್ನೂ ಸಿದ್ಧಪಡಿಸಿದರು. ಈ ತಾಣಗಳನ್ನು ಸುಲಭವಾಗಿ ವೀಕ್ಷಿಸಲು ಅನುವುಮಾಡಿಕೊಡುವ ಬ್ರೌಸರ್ ತಂತ್ರಾಂಶ ಕೂಡ ತಯಾರಾಯಿತು.

ಈ ಹೊಸ ಆವಿಷ್ಕಾರದ ಮಹತ್ವವನ್ನು ಬಹುಬೇಗನೆ ಅರಿತುಕೊಂಡ ಅಂತರಜಾಲ ಬಳಕೆದಾರರು ಲೀ ರೂಪಿಸಿದ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸಲು ಪ್ರಾರಂಭಿಸಿದರು. ಇದರ ಫಲವಾಗಿ ಇಂದು ಜಗತ್ತಿನಾದ್ಯಂತ ಕೋಟ್ಯಂತರ ಜನರು ಬಳಸುತ್ತಿರುವ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ಅಸ್ತಿತ್ವಕ್ಕೆ ಬಂತು, ಇಪ್ಪತ್ತೈದೇ ವರ್ಷಗಳಲ್ಲಿ ನಮ್ಮ ಜೀವನವನ್ನೆಲ್ಲ ಬದಲಿಸಿಬಿಟ್ಟಿತು!

ಮಾರ್ಚ್ ೨೧, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge