ಭಾನುವಾರ, ಮಾರ್ಚ್ 23, 2014

ಪದಗಳ ಆಟದ ಒಂದು ಶತಮಾನ

ಪದಗಳ ಆಟ ಪದಬಂಧ ಈಗಷ್ಟೆ ತನ್ನ ಅಸ್ತಿತ್ವದ ಒಂದು ಶತಮಾನ ಮುಗಿಸಿ ಮುಂದಡಿಯಿಟ್ಟಿದೆ. ಈ ಸುದೀರ್ಘ ಅವಧಿಯಲ್ಲಿ ಪದಬಂಧದ ಸ್ವರೂಪ ಹೆಚ್ಚು ಬದಲಾಗದಿದ್ದರೂ ಬದಲಾದ ಕಾಲಮಾನಕ್ಕೆ ಅದು ಹೊಂದಿಕೊಂಡಿರುವ ರೀತಿ ಅನನ್ಯವಾದದ್ದು. ಆ ಕುರಿತ ಒಂದು ಪರಿಚಯ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ವಿಕಿಪೀಡಿಯ ಚಿತ್ರ
ಇಂದಿಗೂ ಜನಪ್ರಿಯವಾಗಿರುವ ನೂರು ವರ್ಷ ಹಳೆಯ ಆಟದ, ನಾಲ್ಕಕ್ಷರದ, ಹೆಸರೇನು? ಬಹುಶಃ ಈ ಪ್ರಶ್ನೆ ಕೇಳಿ ಮುಗಿಸುವಷ್ಟರಲ್ಲೇ 'ಪದಬಂಧ' ಎಂಬ ಹೆಸರು ನಿಮ್ಮ ಮನಸ್ಸಿನಲ್ಲಿ ಮೂಡಿಬಿಟ್ಟಿರುತ್ತದೆ.

ನಿಜ, ಪದಬಂಧದ ಜನಪ್ರಿಯತೆಯೇ ಅಂಥದ್ದು. ಹಿರಿಯರು-ಕಿರಿಯರೆಂಬ ಭೇದಭಾವವಿಲ್ಲದೆ ಎಲ್ಲ ವಯಸ್ಸಿನವರಿಗೂ ಅಚ್ಚುಮೆಚ್ಚಿನ ಈ ಆಟ ಜಗತ್ತಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗುತ್ತದೆ.

ಪದಬಂಧದ ಕತೆ ಶುರುವಾದದ್ದು ಅಮೆರಿಕಾದಲ್ಲಿ, ನಿಖರವಾಗಿ ಹೇಳಬೇಕಾದರೆ ಈಗ ನೂರು ವರ್ಷಗಳ ಹಿಂದೆ, ೧೯೧೩ರ ಡಿಸೆಂಬರ್ ೨೧ರಂದು. ಆ ದಿನದ 'ನ್ಯೂಯಾರ್ಕ್ ವರ್ಲ್ಡ್' ಪತ್ರಿಕೆಯಲ್ಲಿ 'ವರ್ಡ್-ಕ್ರಾಸ್' ಎನ್ನುವ ವಿಶೇಷವೊಂದು ಪ್ರಕಟವಾಗಿತ್ತು. ಕೊಟ್ಟಿದ್ದ ಸುಳಿವುಗಳಿಗೆ ಅನುಸಾರವಾಗಿ ವಜ್ರಾಕೃತಿಯ ವಿನ್ಯಾಸವೊಂದರಲ್ಲಿ ಪದಗಳನ್ನು ಜೋಡಿಸಬೇಕಿದ್ದ ಈ ಆಟವನ್ನು ರೂಪಿಸಿದ್ದ ವ್ಯಕ್ತಿಯ ಹೆಸರು ಆರ್ಥರ್ ವಿನ್ ಎಂದು.

ಕೆಲ ಸಮಯದ ನಂತರ, ಬಹುಶಃ ಮೊಳೆಜೋಡಿಸುವವರ ತಪ್ಪಿನಿಂದ, 'ವರ್ಡ್-ಕ್ರಾಸ್' ಎನ್ನುವ ಹೆಸರು 'ಕ್ರಾಸ್-ವರ್ಡ್' ಎಂದು ಬದಲಾಯಿತು ಎನ್ನಲಾಗಿದೆ. ಮುಂದೆ ಈ ಹೆಸರು ಗಳಿಸಿಕೊಂಡ ಜನಪ್ರಿಯತೆ ಅಭೂತಪೂರ್ವವಾದದ್ದು.

೧೯೨೦ರ ದಶಕದಲ್ಲಿ ಬೇರೆ ದೇಶಗಳ ಪತ್ರಿಕೆಗಳಲ್ಲೂ ಪದಬಂಧಗಳು ಕಾಣಿಸಿಕೊಂಡವು.
ಪದಬಂಧಗಳನ್ನು ಬಿಡಿಸುವ ಹವ್ಯಾಸವೂ ವ್ಯಾಪಕವಾಗಿ ಬೆಳೆಯಿತು. ಈ ಹವ್ಯಾಸದಿಂದಾಗಿ ಗ್ರಂಥಾಲಯಗಳಲ್ಲಿ ನಿಘಂಟುಗಳಿಗಿದ್ದ ಬೇಡಿಕೆ ದಿಢೀರನೆ ಹೆಚ್ಚಿತಂತೆ; ಹೆಚ್ಚಿದ ಬೇಡಿಕೆ ನಿಭಾಯಿಸಲಿಕ್ಕಾಗಿ ಕೆಲವೊಂದು ಕಡೆ ಓದುಗರು ನಿಘಂಟನ್ನು ಕೇವಲ ಐದು ನಿಮಿಷಗಳಷ್ಟೇ ಬಳಸಬಹುದು ಎನ್ನುವಂತಹ ನಿರ್ಬಂಧಗಳೂ ಜಾರಿಗೆ ಬಂದವು.

ಅಂದಹಾಗೆ ಪದಬಂಧದ ಜನಪ್ರಿಯತೆ ಪತ್ರಿಕೆಗಳಿಂದಲಷ್ಟೇ ಬರಲಿಲ್ಲ. ರಿಚರ್ಡ್ ಸೈಮನ್ ಎಂಬಾತನ ಚಿಕ್ಕಮ್ಮನಿಗೆ ಪದಬಂಧಗಳು ಬಹಳ ಹಿಡಿಸಿದ್ದವಂತೆ. ಆಕೆಯ ಒತ್ತಾಯದ ಮೇರೆಗೆ ಸೈಮನ್ ೧೯೨೪ರಲ್ಲಿ ಪದಬಂಧಗಳ ಒಂದು ಪುಸ್ತಕವನ್ನು ಪ್ರಕಟಿಸಿದ. ಇಂತಹುದೊಂದು ಸಾಹಿತ್ಯಕವಲ್ಲದ ಪ್ರಯತ್ನದೊಡನೆ ತನ್ನ ಪ್ರಕಾಶನ ಸಂಸ್ಥೆಯ ಹೆಸರನ್ನು (ಮುಂದೆ 'ಸೈಮನ್ ಆಂಡ್ ಶೂಸ್ಟರ್' ಎಂದು ಹೆಸರುಮಾಡಿದ್ದು ಇದೇ ಸಂಸ್ಥೆ) ಜೋಡಿಸಲು ಅವನಿಗಿಷ್ಟವಿರಲಿಲ್ಲ ಎನ್ನಲಾಗಿದೆ. ಪುಸ್ತಕ ಖರ್ಚಾಗುತ್ತದೋ ಇಲ್ಲವೋ ಎಂಬ ಚಿಂತೆಯಲ್ಲೇ ಇದ್ದ ಆತ ಆ ಪುಸ್ತಕದ ಜೊತೆ ಒಂದು ಪೆನ್ಸಿಲನ್ನೂ ಉಚಿತವಾಗಿ ಕೊಟ್ಟಿದ್ದನಂತೆ!

ಕೆಲವೇ ಸಮಯದಲ್ಲಿ ಆತನ ಹಾಗೂ ಆತನ ಚಿಕ್ಕಮ್ಮನ ಎಲ್ಲ ನಿರೀಕ್ಷೆಗಳನ್ನೂ ಮೀರಿದ ಆ ಪುಸ್ತಕದ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು, ಪದಬಂಧದ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು.

[ಜಾಹೀರಾತು] ಪದಬಂಧ ಕುರಿತ ಪುಸ್ತಕಗಳು, ಆಟಿಕೆಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ!

ಆ ಸಮಯದಿಂದ ಇಲ್ಲಿಯವರೆಗಿನ ಒಂದು ಶತಮಾನದಲ್ಲಿ ಪದಬಂಧದ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ, ನಿಜ. ಆದರೆ ಈ ಅವಧಿಯಲ್ಲಿ ತಂತ್ರಜ್ಞಾನದೊಡನೆ ಪದಬಂಧದ ಸಂಬಂಧ ಬೆಳೆದಿರುವ ರೀತಿ ಕುತೂಹಲಕರವಾದದ್ದು.

ಮುದ್ರಣದ ತಂತ್ರಜ್ಞಾನ ಬೆಳೆದಂತೆ ಪದಬಂಧದ ರಚನೆಯಲ್ಲಿ ತಂತ್ರಜ್ಞಾನದ ಹೊಸಹೊಸ ಸಲಕರಣೆಗಳ ಬಳಕೆ ಸಾಧ್ಯವಾಯಿತು. ಇಡೀ ಪತ್ರಿಕೆಯ ಮುದ್ರಣವೇ ಕಂಪ್ಯೂಟರೀಕರಣವಾಗಿದೆ ಎಂದಮೇಲೆ ಇನ್ನೇನು, ಪದಬಂಧದ ವಿನ್ಯಾಸವೂ ಕಂಪ್ಯೂಟರ್ ಬಳಸಿಯೇ ಆಗಬೇಕು. ಪದಗಳ ಆಯ್ಕೆ ಹಾಗೂ ಸುಳಿವುಗಳ ಯೋಜನೆಯನ್ನು ವಿನ್ಯಾಸಕಾರರೇ ಮಾಡಿದರೂ ಕೂಡ ಅವರು ಪದಬಂಧವನ್ನು ಮುದ್ರಣಕ್ಕೆ ಸಿದ್ಧಪಡಿಸುವುದು ಕಂಪ್ಯೂಟರಿನಲ್ಲೇ.

ವಿನ್ಯಾಸ ಮಾತ್ರವಲ್ಲ, ಪದಗಳ ಆಯ್ಕೆಯನ್ನೂ ಮಾಡಿಕೊಡಬಲ್ಲ ತಂತ್ರಾಂಶಗಳು ಇದೀಗ ಸಿದ್ಧವಾಗಿವೆ. ಪದಬಂಧದ ವಿನ್ಯಾಸ ಹೀಗಿರಬೇಕು ಎಂದು ಹೇಳಿದರೆ ಸಾಕು, ಅದರಲ್ಲಿನ ಚೌಕಗಳಿಗೆ ಸರಿಯಾಗಿ ಹೊಂದುವ ಪದಗಳನ್ನು ಇಂತಹ ತಂತ್ರಾಂಶಗಳೇ ಕೊಟ್ಟುಬಿಡಬಲ್ಲವು. ದೊಡ್ಡ ಸಂಖ್ಯೆಯ ಪದಗಳ ದತ್ತಸಂಚಯವನ್ನು (ಕಾರ್ಪಸ್ ಅಥವಾ ಪಠ್ಯಕಣಜ) ಬಳಸಿಕೊಳ್ಳುವ ಇಂತಹ ತಂತ್ರಾಂಶಗಳಲ್ಲಿ ಪದಗಳನ್ನು ಸೂಚಿಸುವುದಷ್ಟೇ ಅಲ್ಲ, ಅದಕ್ಕೆ ತಕ್ಕುದಾದ ಸುಳಿವುಗಳನ್ನು ಕೂಡ ಆರಿಸಿಕೊಡುವಷ್ಟು ಮಟ್ಟದ ಸಾಮರ್ಥ್ಯವಿರುತ್ತದೆ.

ತಂತ್ರಜ್ಞಾನದಿಂದ ಸಾಧ್ಯ ಎಂದಮಾತ್ರಕ್ಕೆ ಆ ಪ್ರಯತ್ನ ಚೆನ್ನಾಗಿರಬೇಕು ಎಂದೇನೂ ಇಲ್ಲವಲ್ಲ! ಬ್ರಿಟನ್ನಿನ ಡೇಲಿ ಟೆಲಿಗ್ರಾಫ್ ಪತ್ರಿಕೆ ಹೀಗೊಂದು ತಂತ್ರಾಂಶದ ನೆರವಿನಿಂದ ಸಿದ್ಧವಾದ ಪದಬಂಧಗಳನ್ನು ಪ್ರಕಟಿಸಿದಾಗ ಓದುಗರ ವಿರೋಧವನ್ನು ಎದುರಿಸಬೇಕಾಗಿ ಬಂದಿತ್ತಂತೆ. ಯಂತ್ರಗಳು ರೂಪಿಸುವ ಪದಬಂಧ, ವ್ಯಕ್ತಿಗಳು ರೂಪಿಸುವ ಪದಬಂಧದಷ್ಟು ಆಪ್ತವೆನಿಸುವುದಿಲ್ಲ ಎನ್ನುವುದು ಅದರಲ್ಲಿ ಬಹಳಷ್ಟು ಓದುಗರ ಅಭಿಪ್ರಾಯವಾಗಿತ್ತು.

ಅದು ಹೇಗೇ ಇರಲಿ, ಪದಬಂಧಕ್ಕೂ ತಂತ್ರಜ್ಞಾನಕ್ಕೂ ಇರುವ ಸಂಬಂಧ ಮಾತ್ರ ಅಬಾಧಿತವಾಗಿ ಮುಂದುವರೆದಿದೆ. ಪದಬಂಧ ರಚನೆಯ ತಂತ್ರಾಂಶಗಳಷ್ಟೇ ಅಲ್ಲ, ಪದಬಂಧ ಬಿಡಿಸುವವರಿಗೂ ಬೇಕಾದಷ್ಟು ತಂತ್ರಾಂಶಗಳು ಬಂದಿವೆ. ಪತ್ರಿಕೆಯಲ್ಲಿ ಪ್ರಕಟವಾಗುವ ಒಂದೇ ಪದಬಂಧ ಯಾವ ಮೂಲೆಗೂ ಸಾಲುವುದಿಲ್ಲ ಎನ್ನುವ ಪದವ್ಯಸನಿಗಳಿಗೆ ಈ ತಂತ್ರಾಂಶಗಳು ಹೇಳಿಮಾಡಿಸಿದ ಜೋಡಿ ಎನ್ನಬಹುದು. ಅತ್ಯಂತ ಸರಳ ಪದಬಂಧಗಳಿಂದ ಅತ್ಯಂತ ಕ್ಲಿಷ್ಟವಾದವುಗಳವರೆಗೆ ನಮಗೆ ಬೇಕಾದ ರೀತಿಯ ಪದಬಂಧ ಆರಿಸಿಕೊಂಡು ಬೇಜಾರಾಗುವವರೆಗೂ ಬಿಡಿಸುತ್ತಲೇ ಇರಲು ಈ ತಂತ್ರಾಂಶಗಳು ನೆರವಾಗುತ್ತವೆ. ಪ್ರಪಂಚದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗುವ ಪದಬಂಧಗಳೆಲ್ಲ ಈ ತಂತ್ರಾಂಶಗಳ ಮೂಲಕ ನಮ್ಮನ್ನು ತಲುಪುವುದು ಸಾಧ್ಯ. ನ್ಯೂಯಾರ್ಕ್ ಟೈಮ್ಸ್‌ನಂತಹ ಪತ್ರಿಕೆಗಳ ಜಾಲತಾಣದಲ್ಲಂತೂ ದುಡ್ಡುಕೊಟ್ಟು ಪಡೆಯಬಹುದಾದ ಪದಬಂಧಗಳ ಪ್ರತ್ಯೇಕ ವಿಭಾಗವೇ ಇದೆ.

ಮೊದಲಿಗೆ ವಿಶ್ವವ್ಯಾಪಿ ಜಾಲದ ಮೂಲಕ ಕಂಪ್ಯೂಟರಿನಲ್ಲಿ ಬಳಕೆಗೆ ಲಭ್ಯವಾದ ಈ ಬಗೆಯ ತಂತ್ರಾಂಶಗಳು ಮೊಬೈಲಿನತ್ತ ಮುಖಮಾಡಿ ಈಗಾಗಲೇ ಬಹಳ ಸಮಯವಾಗಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ 'ಕ್ರಾಸ್‌ವರ್ಡ್' ಎಂದು ಟೈಪಿಸಿದರೆ ಸಾಕು, ಉಚಿತ ಆಪ್‌ಗಳ ಸಾಲುಸಾಲೇ ನಮ್ಮೆದುರು ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಈ ಪೈಕಿ ಕೆಲವು ಜನಪ್ರಿಯ ಆಪ್‌ಗಳು ಲಕ್ಷಾಂತರ ಡೌನ್‌ಲೋಡ್‌ಗಳನ್ನು ದಾಟಿಬಿಟ್ಟಿವೆ. ಪದಬಂಧದ ಜೊತೆಗೆ ನಿಘಂಟು ಬೇಕಲ್ಲ, ನಿಘಂಟುಗಳ - ಅದರಲ್ಲೂ ವಿಶೇಷವಾಗಿ ಪದಬಂಧಗಳಿಗೆಂದೇ ಸಿದ್ಧವಾದ ನಿಘಂಟುಗಳ (ಕ್ರಾಸ್‌ವರ್ಡ್ ಡಿಕ್ಷನರಿ) - ಡಿಜಿಟಲ್ ಆವೃತ್ತಿಗಳೂ ಸಿಗುತ್ತಿವೆ. ಹಾಂ, ಉಚಿತ ಆಪ್‌ಗಳ ಮೂಲಕ ಸಿಗುವುದಕ್ಕಿಂತ ಹೆಚ್ಚಿನ ವೈವಿಧ್ಯ ಬೇಕೆನ್ನುವವರು ಇನ್ನಷ್ಟು ಆಪ್‌ಗಳನ್ನು ದುಡ್ಡುಕೊಟ್ಟೂ ಕೊಳ್ಳಬಹುದು.

ಅಂದಹಾಗೆ ಕನ್ನಡದ ಮಟ್ಟಿಗೂ ಪದಬಂಧ ಹಾಗೂ ತಂತ್ರಜ್ಞಾನದ ಸಂಬಂಧ ಏರ್ಪಟ್ಟಿದೆ. ಇಂಡಿಕ್ರಾಸ್ ಎಂಬ ಜಾಲತಾಣದಲ್ಲಿ (indicross.com) ಕನ್ನಡ ಪದಬಂಧಗಳನ್ನು ಬಿಡಿಸುವುದು ಸಾಧ್ಯ. ಆಂಡ್ರಾಯ್ಡ್ ಫೋನುಗಳಲ್ಲಿ ಬಳಸಲು ಕನ್ನಡ ಪದಬಂಧಗಳ ಆಪ್ ಕೂಡ ಇದೆ. 'Kannada Crossword Padabandha' ಎಂಬ ಹೆಸರಿನ ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರಿನಿಂದ ಉಚಿತವಾಗಿ ಪಡೆದುಕೊಳ್ಳಬಹುದು.

ಮಾರ್ಚ್ ೨೩, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ.

ಕಾಮೆಂಟ್‌ಗಳಿಲ್ಲ:

badge