ಶುಕ್ರವಾರ, ಫೆಬ್ರವರಿ 21, 2014

ನಾವು, ನಮ್ಮ ತಂತ್ರಾಂಶ ಮತ್ತು ಬಳಕೆದಾರ

ಟಿ. ಜಿ. ಶ್ರೀನಿಧಿ

ನಾವು ಬರೆಯುವ ತಂತ್ರಾಂಶದ ಉದ್ದೇಶ ಏನೇ ಇರಬಹುದು, ಆದರೆ ಅದನ್ನು ಸಿದ್ಧಪಡಿಸುವುದರ ಹಿಂದೆ ತಂತ್ರಾಂಶದ ಬಳಕೆದಾರರಿಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುವ ಸದುದ್ದೇಶವಂತೂ ಇರುತ್ತದೆ ಎನ್ನಬಹುದು (ಇತರರಿಗೆ ತೊಂದರೆಮಾಡುವ ವೈರಸ್‌ನಂತಹ ಕುತಂತ್ರಾಂಶಗಳ ಮಾತು ಇಲ್ಲಿ ಬೇಡ; ಅಂತಹ ತಂತ್ರಾಂಶಗಳ ರಚನೆ ತಪ್ಪು ಮಾತ್ರವೇ ಅಲ್ಲ, ಅಪರಾಧವೂ ಹೌದು!).

ಬಳಕೆದಾರರಿಗೆ ಉಪಯುಕ್ತವಾಗುವಂತಹ ತಂತ್ರಾಂಶ ಸಿದ್ಧಪಡಿಸುವಲ್ಲಿ ಅನೇಕ ಹೆಜ್ಜೆಗಳಿವೆ: ತಂತ್ರಾಂಶದ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ಆ ಅಗತ್ಯಗಳಿಗೆ ತಕ್ಕಂತೆ ಕ್ರಮವಿಧಿಗಳನ್ನು (ಪ್ರೋಗ್ರಾಮ್) ರಚಿಸುವುದು, ಹಾಗೆ ರಚಿಸಿದ ಕ್ರಮವಿಧಿಗಳಲ್ಲಿ ಯಾವುದೇ ತಪ್ಪುಗಳಿಲ್ಲದಂತೆ ನೋಡಿಕೊಳ್ಳುವುದು, ತಂತ್ರಾಂಶದ ಒಟ್ಟಾರೆ ಕಾರ್ಯವಿಧಾನ ಸಮರ್ಪಕವಾಗಿದೆಯೇ ಎಂದು ಪರೀಕ್ಷಿಸುವುದು - ಹೀಗೆ.

ಈ ಎಲ್ಲ ಹೆಜ್ಜೆಗಳಷ್ಟೇ ಮಹತ್ವದ ಇನ್ನೊಂದು ಭಾಗ, ಬಳಕೆದಾರನ ಮಟ್ಟಿಗೆ ತಂತ್ರಾಂಶದ ಬಳಕೆ ಸರಾಗವಾಗಿರುವಂತೆ ನೋಡಿಕೊಳ್ಳುವುದು. ನಾವು ರೂಪಿಸಿರುವ ತಂತ್ರಾಂಶ ಎಷ್ಟೇ ಸಮರ್ಥವಾಗಿದ್ದರೂ ಬಳಕೆದಾರರ ಮಟ್ಟಿಗೆ ಉಪಯೋಗಿಸಲು ಕಷ್ಟವಾಗುವಂತಿದ್ದರೆ ಆ ತಂತ್ರಾಂಶವನ್ನು ರೂಪಿಸಿದ ಮೂಲ ಉದ್ದೇಶವೇ ವಿಫಲವಾದಂತೆ.

ಹಾಗಾಗಿ ತಂತ್ರಾಂಶದ ತಾಂತ್ರಿಕ ವಿವರಗಳಷ್ಟೇ ಅದರ ಅಂತರ ಸಂಪರ್ಕ ಸಾಧನ (ಯೂಸರ್ ಇಂಟರ್‌ಫೇಸ್, ಯುಐ) ಕೂಡ ಮುಖ್ಯವಾಗುತ್ತದೆ. ಈ ಅಂತರ ಸಂಪರ್ಕ ಸಾಧನದ ವಿನ್ಯಾಸ (ಯುಐ ಡಿಸೈನ್), ಹಾಗಾಗಿಯೇ, ತಂತ್ರಾಂಶ ಅಭಿವೃದ್ಧಿಯ ಪ್ರಮುಖ ಭಾಗಗಳಲ್ಲೊಂದು.

ಉದಾಹರಣೆಗೆ ನಾವು ಬಳಸುವ ತಂತ್ರಾಂಶವೊಂದರ ಉದಾಹರಣೆಯನ್ನೇ ನೋಡೋಣ. ತಂತ್ರಾಂಶ ನಮಗಿಷ್ಟವಾಗಬೇಕೆಂದರೆ ಅದನ್ನು ಬಳಸುವ ಅನುಭವ ನಮಗೆ ಖುಷಿಕೊಡುವಂತಿರಬೇಕು ತಾನೆ? ಈ ಅನುಭವವನ್ನು ನಾವು ಹಲವು ಬಗೆಗಳಲ್ಲಿ ಗಮನಿಸಬಹುದು: ತಂತ್ರಾಂಶದ ಬಳಕೆ ಎಷ್ಟು ಸುಲಭ, ಅದನ್ನು ಬಳಸಲು ನಾವು ಎಷ್ಟೆಲ್ಲ ತಯಾರಿ ಮಾಡಿಕೊಳ್ಳಬೇಕು ಮುಂತಾದವುಗಳಿಂದ ಪ್ರಾರಂಭಿಸಿ ತಂತ್ರಾಂಶದ ಪರದೆಯ ಬಣ್ಣ, ಅಲ್ಲಿ ಬಳಕೆಯಾಗಿರುವ ಅಕ್ಷರಗಳ ಗಾತ್ರ-ಶೈಲಿಯವರೆಗೆ ಹಲವು ಅಂಶಗಳು ನಮ್ಮ ಅನುಭವವನ್ನು ರೂಪಿಸುತ್ತವೆ. ತಂತ್ರಾಂಶದ ಪರದೆ ತೀರಾ ಕ್ಲಿಷ್ಟವಾಗಿ, ಅರ್ಥಮಾಡಿಕೊಳ್ಳಲು ಒದ್ದಾಡಬೇಕಾಗುವಂತಿದ್ದರೆ ನಮಗೆ ಅದು ಹೇಗೆ ಇಷ್ಟವಾಗುವುದಿಲ್ಲವೋ ಆ ಪರದೆಯಲ್ಲಿ ಕಣ್ಣಿಗೆ ಹಿತವಾಗದ ಬಣ್ಣಗಳನ್ನು ಬಳಸಿದ್ದರೆ ಅಥವಾ ಓದಲು ಕಷ್ಟವಾಗುವಂತಹ ಅಕ್ಷರಗಳಿದ್ದರೆ ಆಗಲೂ ಆ ಅನುಭವ ನಮಗೆ ಹಿಡಿಸುವುದಿಲ್ಲ.

ಹಾಗಾದರೆ ತಂತ್ರಾಂಶ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳುವವರು ಬಳಕೆದಾರರ ದೃಷ್ಟಿಯಿಂದ ಯಾವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಈ ಕುರಿತು ಯೂಸರ್ ಇಂಟರ್‌ಫೇಸ್ ಡಿಸೈನ್ ಸೂತ್ರಗಳು ಕೆಲ ಅಂಶಗಳನ್ನು ಸ್ಪಷ್ಟಪಡಿಸುತ್ತವೆ.

ತಂತ್ರಾಂಶದ ಬಳಕೆ ಕಷ್ಟವೆನಿಸುವಂತಿದ್ದರೆ ಬಳಕೆದಾರ ತಪ್ಪುಮಾಡುವ ಸಾಧ್ಯತೆಗಳು ಜಾಸ್ತಿ. ತಪ್ಪುಗಳಾಗುತ್ತಿದ್ದಂತೆ ಬಳಕೆದಾರನ ತಾಳ್ಮೆಯೂ ಕೆಡುತ್ತದೆ, ತಂತ್ರಾಂಶದತ್ತ ಅವನ ಆಸಕ್ತಿಯೂ ಕಡಿಮೆಯಾಗುತ್ತದೆ. ಇದನ್ನು ತಪ್ಪಿಸುವುದು ಯುಐ ಡಿಸೈನ್ ಸೂತ್ರಗಳ ಮೊದಲ ಉದ್ದೇಶ. ಇದಕ್ಕಾಗಿ ಬಳಕೆದಾರನ ಅಗತ್ಯಗಳನ್ನು ವಿವರವಾಗಿ ಅಧ್ಯಯನ ಮಾಡಿ ಎಂದು ಈ ಸೂತ್ರಗಳು ಹೇಳುತ್ತವೆ.

ಹಾಗಾಗಿ ಬಳಕೆದಾರ ಯಾವ ಉದ್ದೇಶಕ್ಕಾಗಿ ನಮ್ಮ ತಂತ್ರಾಂಶವನ್ನು ಬಳಸುತ್ತಾನೆ, ಬಳಕೆಯ ಅನುಭವ ಹೇಗಿರಬೇಕೆನ್ನುವುದು ಅವನ ಅನಿಸಿಕೆ ಮುಂತಾದ ಅಂಶಗಳತ್ತ ನಾವು ಗಮನಹರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ತಂತ್ರಾಂಶದಲ್ಲಿ ಹೆಚ್ಚಾಗಿ ಬಳಕೆಯಾಗುವ ಸೌಲಭ್ಯಗಳು ಉಪಯೋಗಿಸಲು ಸರಳವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಪದೇಪದೇ ಬಳಸುವ ಸೌಲಭ್ಯಗಳಿಗೆ ನಾಲ್ಕಾರು ಕ್ಲಿಕ್ ಮಾಡುವುದನ್ನು ಯಾರುತಾನೆ ಇಷ್ಟಪಡುತ್ತಾರೆ?

ಅಂತರ ಸಂಪರ್ಕ ಸಾಧನದ (ಯುಐ) ವಿನ್ಯಾಸ ಮಾಡುವಾಗ ಅದರಲ್ಲಿ ತಾಂತ್ರಿಕ ಅನುಕೂಲತೆಗಳಿಗಿಂತ ಬಳಕೆದಾರನ ಅನುಕೂಲಗಳಿಗೆ ಹೆಚ್ಚಿನ ಮಹತ್ವ ನೀಡಬೇಕೆನ್ನುವುದು ಇನ್ನೊಂದು ಅಂಶ. ಅಂದರೆ, ನಮ್ಮ ಕೆಲಸ ಸುಲಭಮಾಡಿಕೊಳ್ಳಲು ನಾವು ಬಳಕೆದಾರನಿಗೆ ಕಷ್ಟವಾಗುವಂತಹ ಯುಐ ರೂಪಿಸುವಂತಿಲ್ಲ. ಅಂತೆಯೇ ನಮ್ಮ ತಂತ್ರಾಂಶದಲ್ಲಿ ಬಳಕೆದಾರ ಉಪಯೋಗಿಸುವ ಹಲವಾರು ಪರದೆಗಳಿದ್ದರೆ ಅವೆಲ್ಲವುದರ ವಿನ್ಯಾಸವೂ ಪರಸ್ಪರ ಹೊಂದಿಕೊಳ್ಳುವಂತಿರಬೇಕು. ಆಯ್ಕೆಗಳಿಗೆ ನೀಡಿರುವ ಹೆಸರಿರಲಿ, ಬಳಸಲಾದ ಬಣ್ಣ-ಚಿತ್ರಗಳಿರಲಿ, ಯಾವ ಆಯ್ಕೆ ಎಲ್ಲಿದೆ ಎನ್ನುವ ಅಂಶವಿರಲಿ - ಮೊದಲನೆಯ ಪರದೆಗೂ ಎರಡನೆಯ ಪರದೆಗೂ ಸಂಬಂಧವೇ ಇಲ್ಲದಂತಿದ್ದರೆ ಅದು ಬಳಕೆದಾರನಲ್ಲಿ ಗೊಂದಲ ಮೂಡಿಸಬಲ್ಲದು.

ನಮ್ಮ ತಂತ್ರಾಂಶ ಉಪಯೋಗಿಸುವ ಸಂದರ್ಭದಲ್ಲಿ ಬಳಕೆದಾರರು ನೂರೆಂಟು ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕೆಂದು ನಿರೀಕ್ಷಿಸುವುದೂ ತಪ್ಪು. ಉದಾಹರಣೆಗೆ ಯಾವುದೋ ದತ್ತಾಂಶವನ್ನು ನಿರ್ದಿಷ್ಟ ರೂಪದಲ್ಲೇ ದಾಖಲಿಸಬೇಕು ಎನ್ನುವಂತಿದ್ದರೆ ಅದನ್ನೊಂದು ನಿಯಮದಂತೆ ಹೇಳುವ ಬದಲು ನಮ್ಮ ತಂತ್ರಾಂಶ ಆ ರೂಪದ ದತ್ತಾಂಶವನ್ನು ಮಾತ್ರ ಸ್ವೀಕರಿಸುವಂತೆ ಮಾಡಬಹುದು. ಹಾಗೆಯೇ ಒಂದು ತಪ್ಪು ಮಾಡಿದಾಕ್ಷಣ ಇಡೀ ಕೆಲಸವನ್ನು ಮೊದಲಿನಿಂದ ಮಾಡಲು ಹೇಳುವ ಬದಲಿಗೆ ಆ ತಪ್ಪನ್ನಷ್ಟೆ ಸರಿಪಡಿಸಿ ಮುಂದುವರೆಯುವಂತೆ ಮಾಡಬಹುದು.

ಅಷ್ಟೇ ಅಲ್ಲ, ನಮ್ಮ ತಂತ್ರಾಂಶ ಆದಷ್ಟೂ ಬಳಕೆದಾರ ಸ್ನೇಹಿಯಾಗಿರಬೇಕು: ಉಪಯುಕ್ತ ಮಾಹಿತಿಯನ್ನು ಪ್ರಮುಖವಾಗಿ ತೋರಿಸುವುದು, ಶಾರ್ಟ್‌ಕಟ್ ಆಯ್ಕೆಗಳನ್ನು ನೀಡುವುದು, ಬಳಕೆದಾರರು ತಪ್ಪುಮಾಡುವ ಸಾಧ್ಯತೆಗಳಿರುವ ಕಡೆ (ಉದಾ: ಎಲ್ಲ ಮಾಹಿತಿಯನ್ನೂ ಅಳಿಸು) ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ನೀಡುವುದು - ಇವೆಲ್ಲ ಈ ನಿಟ್ಟಿನಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸುವಾಗ ಗಮನದಲ್ಲಿಟ್ಟುಕೊಳ್ಳಬಹುದಾದ ಅಂಶಗಳು.

ತಂತ್ರಾಂಶದ ಕಾರ್ಯಾಚರಣೆಯ ವೈಖರಿ ಕೂಡ ಬಳಕೆದಾರನ ಅನುಭವದ ಮೇಲೆ ಪ್ರಭಾವಬೀರುತ್ತದೆ. ಸಣ್ಣಪುಟ್ಟ ಕೆಲಸಗಳಿಗೆ ತೀರಾ ಹೆಚ್ಚಿನ ಸಮಯ ತೆಗೆದುಕೊಳ್ಳುವುದಾಗಲಿ, ತಂತ್ರಾಂಶ ಕೆಲಸಮಾಡುತ್ತಿರುವಾಗ ಸದ್ಯದ ಸ್ಥಿತಿಯ ಮಾಹಿತಿ ನೀಡದಿರುವುದಾಗಲಿ ಬಳಕೆದಾರರಿಗೆ ಇಷ್ಟವಾಗುವ ಸಂಗತಿಗಳಲ್ಲ.

ಒಟ್ಟಿನಲ್ಲಿ ತಂತ್ರಾಂಶ ಸಿದ್ಧಪಡಿಸುವುದು ಹಾಗೂ ಅದರಲ್ಲಿ ವಿವಿಧ ಸೌಲಭ್ಯಗಳನ್ನು ಅಳವಡಿಸುವುದು ಎಷ್ಟು ಮುಖ್ಯವೋ ಹಾಗೆ ಸಿದ್ಧವಾದ ತಂತ್ರಾಂಶ ಬಳಕೆದಾರರಿಗೆ ಇಷ್ಟವಾಗುವುದೂ ಅಷ್ಟೇ ಮುಖ್ಯ. ಪ್ರತಿಯೊಂದು ಹಂತದಲ್ಲೂ ಬಳಕೆದಾರನ ದೃಷ್ಟಿಯಿಂದ ಯೋಚಿಸುವ ಹಾಗೂ ತಂತ್ರಾಂಶದ ಅಂತರಸಂಪರ್ಕ ಸಾಧನವನ್ನು (ಯುಐ) ಅವರ ಕೆಲಸ ಸುಲಭಗೊಳಿಸುವಂತೆ ರೂಪಿಸುವ ಮೂಲಕವಷ್ಟೆ ನಮ್ಮ ತಂತ್ರಾಂಶ ಬಳಕೆದಾರರಿಗೆ ಉತ್ತಮ ಅನುಭವ ಕಟ್ಟಿಕೊಡುವಂತೆ ಮಾಡುವುದು ಸಾಧ್ಯ.

ಫೆಬ್ರುವರಿ ೨೧, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge