ಗುರುವಾರ, ಫೆಬ್ರವರಿ 6, 2014

ಆ ಕಸ ಇ ಕಸ!

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ನಮ್ಮ ಬದುಕನ್ನು ಆವರಿಸಿಕೊಂಡಿರುವ ಪರಿ ಎಂಥದ್ದು ಎಂದು ತಿಳಿದುಕೊಳ್ಳಬೇಕಾದರೆ ಒಮ್ಮೆ ನಮ್ಮ ಸುತ್ತಮುತ್ತ ಕಣ್ಣಾಡಿಸಿದರೆ ಸಾಕು. ದಿವಾನಖಾನೆಯಲ್ಲಿ ಎಲ್‌ಇಡಿ ಟಿವಿ, ಒಳಗಿನ ಕೋಣೆಯಲ್ಲೊಂದು ಡೆಸ್ಕ್‌ಟಾಪ್ ಕಂಪ್ಯೂಟರ್, ಮೂಲೆಯಲ್ಲೊಂದು ಲ್ಯಾಪ್‌ಟಾಪ್, ಪಕ್ಕದಲ್ಲಿ ಟ್ಯಾಬ್ಲೆಟ್ಟು-ಇಬುಕ್ ರೀಡರ್, ಜೇಬಿನೊಳಗೊಂದು ಮೊಬೈಲು - ನಮ್ಮ ಮನೆಗಳಲ್ಲಿರುವ ಇಲೆಕ್ಟ್ರಾನಿಕ್ ಉಪಕರಣಗಳು ಒಂದೇ ಎರಡೇ!   

ಇದನ್ನೆಲ್ಲ ಒಂದುಸಾರಿ ಕೊಂಡು ತಂದಿಟ್ಟುಕೊಂಡರೆ ಮುಗಿಯುವುದಿಲ್ಲವಲ್ಲ, ಆರುತಿಂಗಳಿಗೋ ವರ್ಷಕ್ಕೋ ಎರಡುವರ್ಷಕ್ಕೋ ಮನೆಯಲ್ಲಿರುವ ಇಲೆಕ್ಟ್ರಾನಿಕ್ ಉಪಕರಣಗಳೆಲ್ಲ ಬದಲಾಗುವುದು ಈಗ ಟ್ರೆಂಡ್ ಅನಿಸಿಕೊಂಡುಬಿಟ್ಟಿದೆ.  ಇರುವುದರ ಜಾಗಕ್ಕೆ ಹೊಸದು ಬರುವುದಷ್ಟೇ ಅಲ್ಲ, ಹೊಸ ಉಪಕರಣಗಳೂ ಆಗಿಂದಾಗ್ಗೆ ಮನೆಯೊಳಕ್ಕೆ ಬರುತ್ತಲೇ ಇರುತ್ತವೆ.

ಹೊಸ ಉಪಕರಣ ಬಂದಮೇಲೆ ಹಳೆಯದಕ್ಕೇನು ಕೆಲಸ? ಎಕ್ಸ್‌ಚೇಂಜೋ, ಸೆಕೆಂಡ್ ಹ್ಯಾಂಡ್ ಮಾರಾಟವೋ ಯಾವುದೋ ಒಂದು ಮಾರ್ಗದಲ್ಲಿ ಹಳೆಯದನ್ನು ನಾವು ಮನೆಯಿಂದ ಆಚೆಹಾಕುತ್ತೇವೆ. ಉಪಯೋಗಿಸಿ ಬೇಸರವಾದ, ಆದರೆ 'ರೀಸೇಲ್ ವ್ಯಾಲ್ಯೂ' ಇಲ್ಲದ ಉಪಕರಣಗಳನ್ನು ಬೇರೆಯವರಿಗೆ ಕೊಟ್ಟು ಕೈತೊಳೆದುಕೊಳ್ಳುವುದೂ ಉಂಟು. ಹಾಗೊಮ್ಮೆ ಯಾವುದಾದರೂ ಹಳೆಯ ಉಪಕರಣ ಮನೆಯಲ್ಲೇ ಉಳಿದುಕೊಂಡರೂ ಶೀಘ್ರದಲ್ಲೇ ಅದಕ್ಕೆ ಗೇಟ್‌ಪಾಸ್ ಸಿಗುವುದು ಗ್ಯಾರಂಟಿ! 

ಹೇಗಾದರೂ ಮಾಡಿ ಹಳೆಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ಒಮ್ಮೆ ಮನೆಯಿಂದಾಚೆಗೆ ಕಳುಹಿಸುತ್ತಿದ್ದಂತೆ ನಮಗೆ ನೆಮ್ಮದಿ. ಬೇಡದ ವಸ್ತು ಆಚೆಹೋದ ಸಮಾಧಾನ ಅಷ್ಟೇ ಅಲ್ಲ, ಔಟ್‌ಡೇಟೆಡ್ ವಸ್ತು ಮನೆಯಲ್ಲಿದ್ದದ್ದನ್ನು ನೋಡಿದರೆ ಯಾರೇನು ಅಂದುಕೊಳ್ಳುವರೋ ಎಂಬ ಅಂಜಿಕೆಯಿಂದಲೂ ಮುಕ್ತಿ ಸಿಗುತ್ತದಲ್ಲ! 

ಅಷ್ಟೇ ಅಲ್ಲ, ನಾವು ಉಪಯೋಗಿಸುತ್ತಿರುವ ಉಪಕರಣಗಳ ಕೆಟ್ಟುಹೋದ ಬಿಡಿಭಾಗಗಳೂ ಮನೆಯಿಂದಾಚೆ ಹೋಗಲೇಬೇಕು. ಇನ್ನು ಕೆಲಸಮಾಡದ ಬಲ್ಬು - ಟ್ಯೂಬ್‌ಲೈಟು, ಬೇಡದ ಸಿಡಿ - ಡಿವಿಡಿ ಇತ್ಯಾದಿ ಸಣ್ಣಪುಟ್ಟ ವಸ್ತುಗಳಂತೂ ಆಗಿಂದಾಗ್ಗೆ ಕಸದಬುಟ್ಟಿ ಸೇರುತ್ತಲೇ ಇರುತ್ತವೆ.

ಆದರೆ ಹೀಗೆ ಮನೆಯಿಂದಾಚೆ ಹೋಗುವ ಇಲೆಕ್ಟ್ರಾನಿಕ್ ಉತ್ಪನ್ನಗಳು ಮುಂದೆ ಏನಾಗುತ್ತವೆ ಎನ್ನುವುದರ ಬಗ್ಗೆ ನಾವು ಯಾರೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ನನ್ನ-ನಿಮ್ಮಂತಹ ಸಾಮಾನ್ಯರಷ್ಟೇ ಅಲ್ಲ, ಇಂತಹ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ-ಬಿಸಾಡುವ ಸಂಸ್ಥೆಗಳೂ ಈ ಬಗ್ಗೆ ವಹಿಸುವ ಕಾಳಜಿ ಅಷ್ಟಕ್ಕಷ್ಟೇ.

ಹೀಗಾಗಿಯೇ ಇಂತಹ ಹಳೆಯ, ನಿರುಪಯುಕ್ತ ಇಲೆಕ್ಟ್ರಾನಿಕ್ ಉತ್ಪನ್ನಗಳು ಈಗೊಂದು ದೊಡ್ಡ ಸಮಸ್ಯೆಯಾಗಿ ಬೆಳೆದುನಿಂತಿವೆ: ಅನೇಕರ ಆರೋಗ್ಯ ಹಾಳುಮಾಡುತ್ತಿವೆ, ನಮ್ಮ ಭೂಮಿಗೇ ದೊಡ್ಡದೊಂದು ತಲೆನೋವು ತಂದಿಟ್ಟಿವೆ.

ಇದು ಇಲೆಕ್ಟ್ರಾನಿಕ್ ವೇಸ್ಟ್, ಅಂದರೆ ಇ-ಕಸದ ಕತೆ.
* * *

ನಿರುಪಯುಕ್ತವೆಂದು ನಾವು ಆಚೆಹಾಕುವ ಇ-ಕಸ ಇಷ್ಟೊಂದು ಹಾನಿಕಾರಕವೆಂದಾದರೆ ವಿದ್ಯುನ್ಮಾನ ಉಪಕರಣಗಳಲ್ಲಿ ಸಾಕಷ್ಟು ಹಾನಿಕಾರಕ ಪದಾರ್ಥಗಳಿವೆ ಎಂದಾಯಿತು. ಇಷ್ಟಕ್ಕೂ ಅವುಗಳಲ್ಲಿ ಇರುವುದಾದರೂ ಏನು?

ಉದಾಹರಣೆಗೆ ನಮಗೆಲ್ಲ ಪರಿಚಯವಿರುವ ಕಂಪ್ಯೂಟರನ್ನೋ ಮೊಬೈಲ್ ಫೋನನ್ನೋ ತೆಗೆದುಕೊಳ್ಳುವುದಾದರೆ ಅವುಗಳಲ್ಲಿ ಬಹುದೊಡ್ಡ ಸಂಖ್ಯೆಯ ಬಿಡಿಭಾಗಗಳಿರುತ್ತವೆ. ಸಹಜವಾಗಿಯೇ ಅಂತಹ ಪ್ರತಿಯೊಂದು ಬಿಡಿಭಾಗವನ್ನೂ ಪ್ಲಾಸ್ಟಿಕ್ಕಿನಿಂದ ಚಿನ್ನದವರೆಗೆ ಅನೇಕ ವಸ್ತುಗಳನ್ನು ಬಳಸಿ ರೂಪಿಸಲಾಗಿರುತ್ತದೆ. ನಾವು ಗಮನಿಸದ ಅಂಶವೆಂದರೆ ಈ ವಸ್ತುಗಳ ಪೈಕಿ ಅನೇಕ ವಿಷಕಾರಿ ಅಂಶಗಳೂ ಇರುತ್ತವೆ. ಪಾದರಸ, ಸೀಸ, ಕ್ಯಾಡ್ಮಿಯಂ, ಪಿವಿಸಿ - ಹೀಗೆ ಸಾಗುವ ಈ ಹೆಸರುಗಳ ಪಟ್ಟಿಯಲ್ಲಿ ನಮಗೆ ಅಷ್ಟಾಗಿ ಪರಿಚಯವಿರದ, ಆದರೆ ಆರೋಗ್ಯಕ್ಕೆ ತೀವ್ರ ಹಾನಿಮಾಡಬಲ್ಲ ಬ್ರೋಮಿನೇಟೆಡ್ ಬೆಂಕಿನಿರೋಧಕಗಳೂ ಇವೆ. ಆರೋಗ್ಯದ ಮೇಲೆ ಪಾದರಸ-ಸೀಸ ಇತ್ಯಾದಿಗಳ ಪರಿಣಾಮವನ್ನಂತೂ ಹೇಳುವುದೇ ಬೇಕಿಲ್ಲವಲ್ಲ!

ಆದರೆ ಇಲೆಕ್ಟ್ರಾನಿಕ್ ಉಪಕರಣಗಳೊಳಗೆ ತಮ್ಮ ಕೆಲಸಮಾಡಿಕೊಂಡಿರುವ ಇವೆಲ್ಲ ವಸ್ತುಗಳೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಾಗುವುದು ಯಾವಾಗ, ಮತ್ತು ಏಕೆ ಎನ್ನುವುದು ಇನ್ನೊಂದು ಪ್ರಶ್ನೆ.

ಈ ಪ್ರಶ್ನೆಗೆ ನೇರ ಉತ್ತರ ನೀಡುವುದು ಕೊಂಚ ಕಷ್ಟವೆಂದರೂ ಸರಿಯೇ. ಏಕೆಂದರೆ ಈ ಪ್ರಶ್ನೆಗೆ ಉತ್ತರ ಹುಡುಕುವ ಮುನ್ನ ನಾವು ನಮ್ಮ ಮನೆಗಳಿಂದ ಹೊರಹೋಗುವ ನಿರುಪಯುಕ್ತ ಇಲೆಕ್ಟ್ರಾನಿಕ್ ಉಪಕರಣಗಳ ಜಾಡುಹಿಡಿದು ಹೊರಡಬೇಕಾಗುತ್ತದೆ.

ಇ-ಕಸದ ನಿರ್ವಹಣೆಯ ಬಗ್ಗೆ ವಿಶ್ವದ ಯಾವುದೇ ಮೂಲೆಯಲ್ಲೂ ಪರಿಪೂರ್ಣ ಎನ್ನಬಹುದಾದಂತಹ ನಿಯಮಗಳಿಲ್ಲ ಎನ್ನುವುದನ್ನು ಗಮನಿಸಿದಾಗ ಈ ಕೆಲಸ ಅಷ್ಟೇನೂ ಸುಲಭದ್ದಲ್ಲ. ಆದರೂ ಅಂದಾಜುಗಳ ಆಧಾರದ ಮೇಲೆ ಹೇಳುವುದಾದರೆ ನಮ್ಮ ಬೆಂಗಳೂರು ಒಂದರಲ್ಲೇ ಪ್ರತಿವರ್ಷವೂ ಹೆಚ್ಚೂಕಡಿಮೆ ೨೦,೦೦೦ ಟನ್ನುಗಳಷ್ಟು ಪ್ರಮಾಣದ ಇ-ಕಸ ಉತ್ಪಾದನೆಯಾಗುತ್ತದಂತೆ (ಆಧಾರ: ಗಾರ್ಡಿಯನ್ ವರದಿ, ೧೧ ಅಕ್ಟೋಬರ್ ೨೦೧೩). ದೊಡ್ಡಮನುಷ್ಯರ ಮನೆಯ ಮಾತೆಲ್ಲ ಬೇಡ, ಮಧ್ಯಮವರ್ಗದ ಸಾಮಾನ್ಯ ಕುಟುಂಬವೊಂದರಲ್ಲೇ ಪ್ರತಿಯೊಬ್ಬ ಸದಸ್ಯನೂ ವಾರ್ಷಿಕ ಇಪ್ಪತ್ತು ಕಿಲೋಗ್ರಾಮ್‌ಗಳಿಗಿಂತ ಹೆಚ್ಚು ಪ್ರಮಾಣದ ಇ-ಕಸಕ್ಕೆ ಕಾರಣನಾಗುತ್ತಾನೆ ಎಂದು ಅಂದಾಜಿಸಲಾಗಿದೆ (ಆಧಾರ: ದ ಹಿಂದು, ೯ ಸೆಪ್ಟೆಂಬರ್ ೨೦೧೩). 

ಬೆಂಗಳೂರಿನಲ್ಲೇ ಇಷ್ಟಾದರೆ ಇನ್ನು ಇಡೀ ದೇಶದಲ್ಲಿ ಎಷ್ಟು ಇ-ಕಸ ಉತ್ಪಾದನೆಯಾಗುತ್ತಿರಬಹುದು ಎಂದು ಊಹಿಸುವ ಮುನ್ನವೇ ಮುಂದುವರೆದ ದೇಶಗಳಲ್ಲಿ ಉತ್ಪಾದನೆಯಾಗುವ ಇ-ಕಸದ ದೊಡ್ಡದೊಂದು ಪಾಲು ನಮ್ಮ ದೇಶದೊಳಕ್ಕೆ ಬರುತ್ತಿದೆ ಎಂಬ ಆತಂಕಕಾರಿ ಅಂಶವೂ ನಮ್ಮ ಗಮನಕ್ಕೆ ಬರುತ್ತದೆ (ಆಧಾರ: ASSOCHAM ವರದಿ, ಆಗಸ್ಟ್ ೨೦೧೩). ನವದೆಹಲಿ ನಮ್ಮ ದೇಶದ ರಾಜಧಾನಿಯ ಜೊತೆಗೆ ಇ-ಕಸದ ಸುರಿಹೊಂಡಗಳ ರಾಜಧಾನಿಯಾಗುವತ್ತ ಸಾಗುತ್ತಿದೆ ಎಂದೂ ಈ ವರದಿ ಹೇಳುತ್ತದೆ: ೨೦೧೫ರ ವೇಳೆಗೆ ನವದೆಹಲಿ ವಾರ್ಷಿಕ ಐವತ್ತು ಸಾವಿರ ಟನ್ನುಗಳಷ್ಟು ಇ-ಕಸ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಿಸಲಿದೆಯಂತೆ! ವಿದೇಶಗಳ ಇಲೆಕ್ಟ್ರಾನಿಕ್ ಕಸದ ಈ ಹರಿವು ದೆಹಲಿಯ ಜೊತೆಗೆ ಬೆಂಗಳೂರು, ಮುಂಬಯಿ ಹಾಗೂ ಚೆನ್ನೈ ನಗರಗಳತ್ತಲೂ ಬರುತ್ತಿದೆ ಎನ್ನುವ ಸುದ್ದಿಯಿದೆ. 

ಇಷ್ಟೆಲ್ಲ ಇ-ಕಸದ ನಿರ್ವಹಣೆಯೇ  ಬಲುದೊಡ್ಡ ತಲೆನೋವಿನ ಸಂಗತಿ. 

* * *

ಇಲೆಕ್ಟ್ರಾನಿಕ್ ಕಸ ನಿರ್ವಹಣೆಯ ಹಿನ್ನೆಲೆಯೂ ಸಾಕಷ್ಟು ಕ್ಲಿಷ್ಟವಾದದ್ದೇ.

ಇಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಚಿನ್ನ, ತಾಮ್ರ ಮುಂತಾದ ಬೆಲೆಬಾಳುವ ವಸ್ತುಗಳಿರುತ್ತವೆ, ಹಾಗೆಯೇ ಪರಿಸರಕ್ಕೆ ಹಾನಿಮಾಡಬಲ್ಲ ಸೀಸ, ಪಾದರಸ ಮುಂತಾದ ವಿಷಪದಾರ್ಥಗಳೂ ಇರುತ್ತವೆ. ಹೀಗಾಗಿ ಬೇರಾವುದೋ ತ್ಯಾಜ್ಯದಂತೆ ಇ-ಕಸವನ್ನು ಸುಮ್ಮನೆ ಎಸೆದುಬಿಡಲಾಗುವುದಿಲ್ಲ. ಉಪಯುಕ್ತ ವಸ್ತುಗಳನ್ನು ಅದರಿಂದ ಬೇರ್ಪಡಿಸಿ ಮರುಬಳಕೆ ಮಾಡುವುದು, ಹಾಗೂ ನಿರುಪಯುಕ್ತ ಭಾಗಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಪರಿಸರದ ದೃಷ್ಟಿಯಿಂದ ಮಾತ್ರವಲ್ಲ, ಆರ್ಥಿಕವಾಗಿಯೂ ಸಾಕಷ್ಟು ಲಾಭದಾಯಕ. ಅಷ್ಟೇ ಅಲ್ಲ, ನವೀಕರಿಸಲಾಗದ ಸಂಪನ್ಮೂಲಗಳ (ಉದಾ: ಗ್ಯಾಲಿಯಂ, ಇಂಡಿಯಂ ಮುಂತಾದ ವಿರಳ ಧಾತುಗಳು, ಅಂದರೆ ರೇರ್ ಅರ್ಥ್ ಎಲಿಮೆಂಟ್ಸ್) ದೃಷ್ಟಿಯಿಂದ ನೋಡಿದರೆ ಮರುಬಳಕೆ ಅನಿವಾರ್ಯವೂ ಹೌದು. ಅತ್ಯಲ್ಪ ಪ್ರಮಾಣದಲ್ಲಿ ದೊರಕುವ ಈ ಸಂಪನ್ಮೂಲಗಳನ್ನು ಮರುಬಳಕೆ ಮಾಡದೆ ಹೋದರೆ ಅವುಗಳ ಸಂಗ್ರಹವೆಲ್ಲ ಕೆಲವೇ ವರ್ಷಗಳಲ್ಲಿ ಮುಗಿದೇಹೋಗುತ್ತದೆ!

ಆದರೆ ಇ-ಕಸ ನಿರ್ವಹಣೆಯ ಕ್ಷೇತ್ರದಲ್ಲಿ ನೈಜ ಪರಿಸ್ಥಿತಿ ಬೇರೆಯೇ ಇದೆ. ಬಹಳಷ್ಟು ಕಡೆಗಳಲ್ಲಿ ಇ-ಕಸದ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಹೀಗಾಗಿ ಉತ್ಪತ್ತಿಯಾಗುವ ಇ-ಕಸದ ಬಹುಪಾಲಿನ ಮರುಬಳಕೆ ಅತ್ಯಂತ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇಲೆಕ್ಟ್ರಾನಿಕ್ ತ್ಯಾಜ್ಯದಲ್ಲಿರುವ ವಿಷಕಾರಿ ಅಂಶಗಳ ಬಗ್ಗೆ ಗಮನವನ್ನೇ ನೀಡದ ಈ ನಿರ್ವಹಣೆಯಲ್ಲಿ ಪರಿಸರದ ಬಗೆಗಾಗಲಿ, ಕೆಲಸಗಾರರ ಆರೋಗ್ಯದ ಬಗೆಗಾಗಲಿ ಯಾವ ಕಾಳಜಿಯೂ ಕಾಣಸಿಗುವುದಿಲ್ಲ. 

ತೀರಾ ಕಡಿಮೆ ಸಂಬಳಕ್ಕೆ ದುಡಿಯುವ ಕೆಲಸಗಾರರು - ಕೆಲವೊಮ್ಮೆ ಮಕ್ಕಳೂ - ಇಲೆಕ್ಟ್ರಾನಿಕ್ ಕಸದ ನಿರ್ವಹಣೆಯಲ್ಲಿ ತೊಡಗಿಕೊಂಡು ಅತ್ಯಂತ ಅವೈಜ್ಞಾನಿಕ ಕ್ರಮಗಳನ್ನು ಬಳಸಿ ಇ-ಕಸದಿಂದ ಬೆಲೆಬಾಳುವ ಪದಾರ್ಥಗಳನ್ನು ಬೇರ್ಪಡಿಸಲು ಪ್ರಯತ್ನಿಸುತ್ತಾರೆ. ನವದೆಹಲಿ ಒಂದರಲ್ಲೇ ಪ್ರತಿದಿನವೂ ೮೫೦೦ ಮೊಬೈಲ್ ಹ್ಯಾಂಡ್‌ಸೆಟ್ಟುಗಳು, ೫೫೦೦ ಟೀವಿಗಳು ಮತ್ತು ೩೦೦೦ ಕಂಪ್ಯೂಟರುಗಳನ್ನು ಕಳಚಿ ಮರುಬಳಕೆಯ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತದಂತೆ. ಈ ಕೆಲಸದಲ್ಲಿ ಸುಮಾರು ೮೫೦೦೦ ಜನರು ತೊಡಗಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ (ಆಧಾರ: ASSOCHAM ವರದಿ, ಆಗಸ್ಟ್ ೨೦೧೩). 

ಈ ಪೈಕಿ ಪ್ಲಾಸ್ಟಿಕ್-ಪಿವಿಸಿ ಇತ್ಯಾದಿಗಳಿಂದ ತಯಾರಾದ ಭಾಗಗಳಿಗೆ ಅವರು ಬೆಂಕಿಹಚ್ಚಿ ಸುಟ್ಟಾಗ ತಾಮ್ರವನ್ನೋ ಇನ್ನಾವುದೋ ಲೋಹವನ್ನೋ ಬೇರ್ಪಡಿಸುವುದು ಸುಲಭವಾಗುತ್ತದೆ ನಿಜ, ಆದರೆ ಅದೇ ಸಮಯದಲ್ಲಿ ವಿಷಕಾರಿ ರಾಸಾಯನಿಕಗಳು ನಮ್ಮ ವಾತಾವರಣವನ್ನು ಕಲುಷಿತಗೊಳಿಸುತ್ತವೆ. ಇದರ ಮೊದಲ ನೇರ ಪರಿಣಾಮ ಆಗುವುದು ಇಲೆಕ್ಟ್ರಾನಿಕ್ ಕಸದ ನಿರ್ವಹಣೆಯಲ್ಲಿ ತೊಡಗಿಕೊಂಡಿರುವವರ ಮೇಲೆಯೇ! ಈ ಪ್ರಯತ್ನದ ನಂತರ ಅಳಿದುಳಿದ ನಿರುಪಯುಕ್ತ ಭಾಗಗಳನ್ನು ಬೇಕಾಬಿಟ್ಟಿಯಾಗಿ ಎಸೆದರೆಂದರೆ ಅದರಲ್ಲಿನ ವಿಷಪದಾರ್ಥಗಳು ಅಂತರ್ಜಲಕ್ಕೆ ಸೇರಿದರೂ ಸೇರಿದವೇ.

ಸೇರಿದರೆ ಸೇರಲಿ ಎಂದು ಉದಾಸೀನ ಮಾಡುವಂತೆಯೂ ಇಲ್ಲ. ಏಕೆಂದರೆ ಈ ಪದಾರ್ಥಗಳಿಂದ ಉಂಟಾಗುವ ದುಷ್ಪರಿಣಾಮಗಳು ಬಹಳ ಗಂಭೀರವಾದವು. ಸೀಸದಿಂದ ನರಮಂಡಲ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಧಕ್ಕೆಯಾದರೆ ಲ್ಯಾಪ್‌ಟಾಪ್ ಬ್ಯಾಟರಿಯಲ್ಲಿರುವ ಕ್ಯಾಡ್ಮಿಯಂನಿಂದ ಕಿಡ್ನಿ ಮತ್ತು ಮೂಳೆಗಳಿಗೆ ಹಾನಿಯಾಗುತ್ತದೆ. ಇನ್ನು ಪಾದರಸವಂತೂ ನೇರ ಮೆದುಳಿನ ಮೇಲೆಯೇ ದಾಳಿಮಾಡುತ್ತದೆ. ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಸುಟ್ಟಾಗ ಹೊರಬರುವ ರಾಸಾಯನಿಕಗಳೂ ತೀವ್ರ ವಿಷವೇ. ಕಂಪ್ಯೂಟರಿನಲ್ಲಿ ಬಳಕೆಯಾಗುವ ಕೆಲ ಬೆಂಕಿ ನಿರೋಧಕ ವಸ್ತುಗಳು ಗರ್ಭದಲ್ಲಿರುವ ಮಗುವಿನ ಮೇಲೂ ದುಷ್ಪರಿಣಾಮ ಬೀರುತ್ತವಂತೆ. ಇ-ಕಸದಲ್ಲಿರುವ ಹಲವು ವಸ್ತುಗಳು ಕ್ಯಾನ್ಸರ್ ಅನ್ನೂ ಉಂಟುಮಾಡಬಲ್ಲವು (ಆಧಾರ: greenpeace.org).

ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವ ಕೆಲ ಮುಂದುವರೆದ ರಾಷ್ಟ್ರಗಳು ಅದನ್ನು ನಿವಾರಿಸಲು ಪ್ರಯತ್ನಿಸುವ ಬದಲು ತಮ್ಮ ಕಸವನ್ನೆಲ್ಲ ಅಭಿವೃದ್ಧಿಶೀಲ ದೇಶಗಳತ್ತ ಸಾಗಹಾಕಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿವೆ. ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಸಂಗ್ರಹವಾಗುವ ಇ-ಕಸದ ಶೇ. ೮೦ರಷ್ಟು ಭಾಗ ಭಾರತ-ಚೀನಾ ಮುಂತಾದ ದೇಶಗಳತ್ತ ಹರಿದುಬರುತ್ತಿದೆ ಎನ್ನುವುದು ಒಂದು ಅಂದಾಜು. ಇದರ ನೇರ ಪರಿಣಾಮ: ಅಸಮರ್ಪಕ ನಿರ್ವಹಣೆ, ಪರಿಸರದ ಮೇಲೆ ತೀವ್ರ ಪ್ರಭಾವ. ಭಾರೀ ಪ್ರಮಾಣದ ಇ-ಕಸವನ್ನು ನಿರ್ವಹಿಸುವ ಚೀನಾದ ನಗರವೊಂದರ ಮಕ್ಕಳ ರಕ್ತದಲ್ಲಿ (ಇತರೆಡೆಗಳ ಮಕ್ಕಳ ಹೋಲಿಕೆಯಲ್ಲಿ) ಹೆಚ್ಚಿನ ಪ್ರಮಾಣದ ಸೀಸ ಕಂಡುಬಂದಿದೆಯಂತೆ. ಅಷ್ಟೇ ಅಲ್ಲ, ಹೀಗೆ ಪರಿಸರಕ್ಕೆ ಸೇರುವ ವಿಷಪದಾರ್ಥಗಳು ನಾವು ಸೇವಿಸುವ ಆಹಾರದ ಮೂಲಕ ನಮ್ಮೆಲ್ಲರ ದೇಹವನ್ನು ಸೇರುತ್ತಿವೆ ಎಂದೂ ಹೇಳಲಾಗಿದೆ.

* * *

ಇ-ಕಸ ನಿರ್ವಹಣೆ ಕುರಿತಾದ ಕಠಿಣ ನಿಯಮಗಳಿಲ್ಲದಿರುವುದೂ ಒಂದು ಜಾಗತಿಕ ಸಮಸ್ಯೆಯೇ. ಬ್ಯಾಸೆಲ್ ಒಪ್ಪಂದದಲ್ಲಿ ಇಲೆಕ್ಟ್ರಾನಿಕ್ ಕಸ ನಿರ್ವಹಣೆಯ ಕುರಿತು ಕೆಲ ಅಂತಾರಾಷ್ಟ್ರೀಯ ನಿಬಂಧನೆಗಳಿವೆಯಾದರೂ ಅಮೆರಿಕಾದಂತಹ ರಾಷ್ಟ್ರವೇ ಆ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಮಾತ್ರವಲ್ಲ, ತನ್ನ ದೇಶದೊಳಗೂ ಅಂತಹ ಕಟ್ಟುನಿಟ್ಟಿನ ಕಾನೂನನ್ನೇನೂ ರೂಪಿಸಿಲ್ಲ. ಇನ್ನು ನಮ್ಮ ದೇಶದಲ್ಲಿ ಇ-ಕಸ ನಿಯಂತ್ರಣ ಹಾಗೂ ನಿರ್ವಹಣೆ ಕುರಿತಾದ ನಿಯಮ ೨೦೧೧ರಲ್ಲೇ ಜಾರಿಯಾಗಿದ್ದರೂ ಅದರ ಅನುಷ್ಠಾನ ಹೇಳಿಕೊಳ್ಳುವ ಮಟ್ಟದಲ್ಲೇನೂ ಆಗಿಲ್ಲ. ಇದ್ದುದರಲ್ಲಿ ಯುರೋಪಿಯನ್ ಒಕ್ಕೂಟದ ಪರಿಸ್ಥಿತಿಯೊಂದು ಕೊಂಚ ಉತ್ತಮವಾಗಿದೆ ಎನ್ನಬಹುದೇನೋ ಅಷ್ಟೆ.

ಹಾಗಾಗಿ ವಿಶ್ವದಾದ್ಯಂತ ಇ-ಕಸ ನಿರ್ವಹಣೆಯ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥವನ್ನಾಗಿ ಮಾಡಬೇಕಾದ್ದು ಇಂದಿನ ಅಗತ್ಯವಷ್ಟೇ ಅಲ್ಲ, ಅನಿವಾರ್ಯವೂ ಆಗಿದೆ. ಇದು ಇಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಯಿಂದ ಪ್ರಾರಂಭಿಸಿ ನಿವೃತ್ತಿಯಾದಾಗ ಅವನ್ನು ಮನೆಯಿಂದ ಆಚೆಹಾಕುವವರೆಗೆ ಪ್ರತಿಯೊಂದು ಹಂತದಲ್ಲೂ ಆಗಬೇಕಾದ ಕೆಲಸ.  

ಮೊದಲ ಬದಲಾವಣೆಯಾಗಬೇಕಿರುವುದು ಇಲೆಕ್ಟ್ರಾನಿಕ್ ಉಪಕರಣಗಳ ವಿನ್ಯಾಸದ ಪ್ರಕ್ರಿಯೆಯಲ್ಲೇ ಎಂದು ತಜ್ಞರು ಹೇಳುತ್ತಾರೆ. ಉಪಕರಣಗಳ ವಿನ್ಯಾಸ ಮರುಬಳಕೆಗೆ ಪೂರಕವಾಗಿದ್ದರೆ ಅವುಗಳ ವಿಲೇವಾರಿ ಅಷ್ಟರಮಟ್ಟಿಗೆ  ಸುಲಭವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ವಿಷಪದಾರ್ಥಗಳ ಬದಲು ಪರಿಸರ ಸ್ನೇಹಿ ಸಾಮಗ್ರಿಗಳ ಬಳಕೆಯೂ ಈ ನಿಟ್ಟಿನಲ್ಲಿ ನೆರವಾಗಬಲ್ಲದು. ಉಪಕರಣಗಳ ನಿರ್ಮಾತೃಗಳೇ ತಮ್ಮ ಹಳೆಯ ಉತ್ಪನ್ನಗಳನ್ನು ಮರಳಿ ಪಡೆಯುವ ಪರಿಣಾಮಕಾರಿ ವ್ಯವಸ್ಥೆ ಬಂದರೆ ಅದೂ ಬಹುದೊಡ್ಡ ಸಾಧನೆಯಾಗಬಲ್ಲದು. ಸದ್ಯಕ್ಕೆ ನಮ್ಮ ದೇಶದ ಮಟ್ಟಿಗಂತೂ ಈ ವ್ಯವಸ್ಥೆ ಬಹುತೇಕ ಕಾಗದದ ಮೇಲಷ್ಟೆ ಉಳಿದುಬಿಟ್ಟಿದೆ.

ಹಾಗೆಯೇ ಬಳಕೆದಾರರು ಕೂಡ ತಮಗೆ ಬೇಡವಾದ ವಸ್ತುಗಳನ್ನು ವಿಲೇವಾರಿ ಮಾಡುವಾಗ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆಮಾಡುತ್ತಾರೆ.

ಆದರೆ ಇ-ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ರೂಪಿಸಿ ಆ ಕುರಿತು ವ್ಯಾಪಕ ಜಾಗೃತಿ ಮೂಡಿಸದ ಹೊರತು ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸವೇನೂ ಆಗಲಾರದು. ಉದಾಹರಣೆಗೆ ಮನೆಯಲ್ಲಿರುವ ಹಳೆಯ ಪ್ರಿಂಟರ್ ಎಸೆಯಲು ಹೊರಟ ವ್ಯಕ್ತಿಗೆ ಅದರ ಸೂಕ್ತ ವಿಲೇವಾರಿ ಎಲ್ಲಿ ಆಗಬಹುದು ಎಂದು ಗೊತ್ತಿಲ್ಲದಿದ್ದರೆ ಆತ ಅದನ್ನು ಹಳೆ ಪ್ಲಾಸ್ಟಿಕ್ ಮಾರಾಟಗಾರನಿಗೇ ಕೊಡುತ್ತಾನೆ ಅಷ್ಟೆ. 

ಒಟ್ಟಿನಲ್ಲಿ ಹೇಳುವುದಾರರೆ ವಿವಿಧ ಸೌಕರ್ಯಗಳನ್ನು ನೀಡಿ ನಮ್ಮ ಬದುಕನ್ನು ಉತ್ತಮಗೊಳಿಸುತ್ತಿರುವ ಇಲೆಕ್ಟ್ರಾನಿಕ್ ಉಪಕರಣಗಳು ತಮ್ಮ ನಿವೃತ್ತಿಯ ನಂತರದಲ್ಲಿ ನಮ್ಮ ಬದುಕಿನ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಗಂಭೀರ ಸಾಧ್ಯತೆಯನ್ನೂ ತೋರಿಸಿಕೊಡುತ್ತಿವೆ. ಈ ಸಮಸ್ಯೆಯನ್ನು ಎಷ್ಟು ಬೇಗ ಎಷ್ಟು ಸಮರ್ಥವಾಗಿ ನಿವಾರಿಸುತ್ತೇವೋ ಅದು ನಮಗೇ ಬಿಟ್ಟದ್ದು; ಏಕೆಂದರೆ ಈ ಉಪಕರಣಗಳನ್ನು ಬಳಸುವವರೂ ನಾವೇ, ಅವುಗಳ ದುಷ್ಪರಿಣಾಮಗಳನ್ನು ಎದುರಿಸಬೇಕಾದವರೂ ನಾವೇ! 

ನವೆಂಬರ್ ೨೦೧೩ರ 'ಕರ್ನಾಟಕ ಪರಿಸರ ವಾಹಿನಿ'ಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge