ಶುಕ್ರವಾರ, ಜನವರಿ 24, 2014

ಆಪರೇಟಿಂಗ್ ಸಿಸ್ಟಂ

ಟಿ. ಜಿ. ಶ್ರೀನಿಧಿ

ಪ್ರೋಗ್ರಾಮ್ ಬರೆದು ಕಂಪ್ಯೂಟರಿಗೆ ಪಾಠಹೇಳುವುದೇನೋ ಸರಿ, ಆದರೆ ನಾವು ಪ್ರೋಗ್ರಾಮ್ ಬರೆಯಲಿಕ್ಕಾದರೂ ಒಂದು ಕಂಪ್ಯೂಟರ್ ಬೇಕಲ್ಲ. ಮೊದಲಿಗೆ ಅದು ಕೆಲಸಮಾಡುತ್ತಿದ್ದರೆ ತಾನೇ ನಾವು ಪ್ರೋಗ್ರಾಮ್ ಬರೆಯುವುದು?

ನಿಜ, ಯಾವ ಕಂಪ್ಯೂಟರೇ ಆದರೂ ಅದು ನಾವು ಹೇಳಿದ ಮಾತು ಕೇಳುವಂತೆ ಮಾಡುವ ವ್ಯವಸ್ಥೆಯೊಂದು ಬೇಕೇಬೇಕು. ಕೆಲವರು ತಮ್ಮ ಪ್ರೋಗ್ರಾಮುಗಳ ಮೂಲಕ ಅಂತಹ ವ್ಯವಸ್ಥೆಯನ್ನೇ ರೂಪಿಸುತ್ತಾರೆ ಬಿಡಿ, ಆದರೆ ಮಿಕ್ಕವರ ಕ್ರಮವಿಧಿಗಳು ಕೆಲಸಮಾಡಲು ಇಂತಹುದೊಂದು ವ್ಯವಸ್ಥೆ ಅತ್ಯಗತ್ಯ.

ಅಂತಹ ವ್ಯವಸ್ಥೆಯೇ ಆಪರೇಟಿಂಗ್ ಸಿಸ್ಟಂ, ಅಂದರೆ ಕಾರ್ಯಾಚರಣ ವ್ಯವಸ್ಥೆ. ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ, ನಮ್ಮ ಕ್ರಮವಿಧಿಗಳು ಕೆಲಸಮಾಡಲು ಅನುವುಮಾಡಿಕೊಡುವ ಈ ವ್ಯವಸ್ಥೆಯೂ ಒಂದು ತಂತ್ರಾಂಶವೇ. ನಮಗೆಲ್ಲ ಚಿರಪರಿಚಿತವಾದ ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಕಂಪ್ಯೂಟರಿನಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಕಾರ್ಯಾಚರಣ ವ್ಯವಸ್ಥೆ ಇರಲೇಬೇಕು. ಅಷ್ಟೇ ಅಲ್ಲ, ಅವುಗಳನ್ನು ಬಳಸಿ ಯಾವ ಕೆಲಸ ಮಾಡಬೇಕೆಂದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು.

ಕಂಪ್ಯೂಟರಿನ ಗುಂಡಿ ಒತ್ತುತ್ತೇವಲ್ಲ, ಆಗ ಅದು ತನ್ನಲ್ಲಿ ಈ ಕಾರ್ಯಾಚರಣ ವ್ಯವಸ್ಥೆ ಎಲ್ಲಿ ಶೇಖರವಾಗಿದೆ ಎಂದು ಹುಡುಕಿ ಅದನ್ನು ಪ್ರಾರಂಭಿಸುತ್ತದೆ. 'ಬೂಟ್' ಮಾಡುವುದು ಎನ್ನುವುದು ಇದಕ್ಕೇ. ಒಮ್ಮೆ ಕಂಪ್ಯೂಟರ್ ಬೂಟ್ ಆದಮೇಲೆ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಕಾರ್ಯಾಚರಣ ವ್ಯವಸ್ಥೆಯ ಸಹಾಯ ಬೇಕು. ಬೇರೆ ತಂತ್ರಾಂಶಗಳನ್ನು ತೆರೆಯಲು, ಅವುಗಳನ್ನು ಬಳಸಿ ಕೆಲಸಮಾಡಲು, ಮಾಡಿದ ಕೆಲಸವನ್ನು ಉಳಿಸಿಡಲು, ಕಡೆಗೆ ಹೊಸ ಕ್ರಮವಿಧಿ ಹಾಗೂ ತಂತ್ರಾಂಶಗಳನ್ನು ರೂಪಿಸಲಿಕ್ಕೂ ಕಾರ್ಯಾಚರಣ ವ್ಯವಸ್ಥೆ ಸಹಾಯಮಾಡುತ್ತದೆ.

ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಈ ಕೆಲಸ ಸಾಕಷ್ಟು ಕ್ಲಿಷ್ಟವಾದದ್ದು. ವಿವಿಧ ಯಂತ್ರಾಂಶ ಹಾಗೂ ತಂತ್ರಾಂಶಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅವುಗಳ ಪೈಕಿ ಪ್ರತಿಯೊಂದೂ ಕಂಪ್ಯೂಟರಿನ ಸಂಪನ್ಮೂಲಗಳಿಗಾಗಿ (ಸಿಪಿಯು, ಮೆಮೊರಿ, ಸ್ಟೋರೇಜ್, ಇನ್‌ಪುಟ್/ಔಟ್‌ಪುಟ್ ಇತ್ಯಾದಿ) ಸ್ಪರ್ಧಿಸುತ್ತಿರುತ್ತವೆ. ಈ ಸ್ಪರ್ಧೆಯನ್ನು ಜಾಣ್ಮೆಯಿಂದ ನಿಭಾಯಿಸಿ ಎಲ್ಲ ಯಂತ್ರಾಂಶ ತಂತ್ರಾಂಶಗಳಿಗೂ ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ಕೆಲಸ ಕಾರ್ಯಾಚರಣ ವ್ಯವಸ್ಥೆಯದ್ದು. ಕಂಪ್ಯೂಟರಿನ ಯಂತ್ರಾಂಶ ಭಾಗಗಳು ಬದಲಾದ ಅಥವಾ ಹೊಸ ಭಾಗಗಳು ಸೇರಿಕೊಂಡ ಸಂದರ್ಭದಲ್ಲಿ ತಂತ್ರಾಂಶಗಳು ಹೆಚ್ಚಿನ ಸಮಸ್ಯೆಯಿಲ್ಲದೆ ಕೆಲಸಮಾಡುವಂತೆ ನೋಡಿಕೊಳ್ಳುವುದೂ ಕಾರ್ಯಾಚರಣ ವ್ಯವಸ್ಥೆಯದೇ ಜವಾಬ್ದಾರಿ.

ಇಂದಿನ ಮೊಬೈಲ್ ದೂರವಾಣಿಗಳು ಕೂಡ ಯಾವ ಕಂಪ್ಯೂಟರಿಗೂ ಕಡಿಮೆಯಿಲ್ಲವಲ್ಲ. ಕಂಪ್ಯೂಟರಿನಲ್ಲಿ ಸಾಧ್ಯವಾಗುವ ಬಹುತೇಕ ಎಲ್ಲ ಕೆಲಸಗಳನ್ನು ಮೊಬೈಲ್‌ನಲ್ಲೂ ಮಾಡುವುದು ಸಾಧ್ಯ. ಹೀಗಾಗಿ ಇಂದಿನ ಬಹುತೇಕ ಮೊಬೈಲ್ ದೂರವಾಣಿಗಳಲ್ಲೂ (ಸ್ಮಾರ್ಟ್‌ಫೋನ್) ಕಾರ್ಯಾಚರಣ ವ್ಯವಸ್ಥೆ ಇರುತ್ತದೆ. ಐಓಎಸ್, ಆಂಡ್ರಾಯ್ಡ್, ವಿಂಡೋಸ್ ಇವೆಲ್ಲ ಈ ಬಗೆಯ ಕಾರ್ಯಾಚರಣ ವ್ಯವಸ್ಥೆಗೆ ಉದಾಹರಣೆಗಳು.

ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಆಂಡ್ರಾಯ್ಡ್ ಅಂತೂ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುವ ಮೊಬೈಲ್ ಕಾರ್ಯಾಚರಣ ವ್ಯವಸ್ಥೆ. ಈ ಕಾರ್ಯಾಚರಣ ವ್ಯವಸ್ಥೆ ಅನೇಕ ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲೂ ಬಳಕೆಯಾಗುತ್ತದೆ.

ನಿರ್ದಿಷ್ಟ ಸಂಸ್ಥೆಯ ಉತ್ಪನ್ನಗಳಿಗಾಗಿಯೇ ಸೀಮಿತವಾಗಿರುವ ಕಾರ್ಯಾಚರಣ ವ್ಯವಸ್ಥೆಗಳೂ ಇವೆ. ಆಪಲ್‌ನ ಐಫೋನ್, ಐಪ್ಯಾಡ್ ಮುಂತಾದ ಉತ್ಪನ್ನಗಳಲ್ಲಿ ಬಳಕೆಯಾಗುವ ಐಒಎಸ್ ಇಂತಹ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಅತ್ಯಂತ ಪ್ರಮುಖವಾದದ್ದು.

ಕಂಪ್ಯೂಟರ್ ಓಎಸ್‌ಗಳಂತೆಯೇ ಮೊಬೈಲ್ ಫೋನುಗಳಲ್ಲಿ ಬಳಕೆಯಾಗುವ ಓಎಸ್ ಕೂಡ ಅವುಗಳ ಒಟ್ಟಾರೆ ಕಾರ್ಯಾಚರಣೆಯನ್ನು ನಿಯಂತ್ರಿಸುವ ಜವಾಬ್ದಾರಿ ಹೊತ್ತುಕೊಂಡಿರುತ್ತದೆ. ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ ಕಂಪ್ಯೂಟರಿನಂತಹ ಸಾಧನಗಳಲ್ಲಿ ಬಳಕೆಯಾಗುವ ಇಂತಹ ಓಎಸ್‌ಗಳ ರಚನೆಯಲ್ಲಿ ಅವುಗಳ ಸಣ್ಣಗಾತ್ರ, ಸ್ಪರ್ಶಸಂವೇದಿ ಗುಣ, ಬ್ಯಾಟರಿಯನ್ನು ಜವಾಬ್ದಾರಿಯುತವಾಗಿ ಬಳಸಬೇಕಾದ ಅಗತ್ಯಗಳನ್ನೆಲ್ಲ ಗಮನದಲ್ಲಿ ಇಟ್ಟುಕೊಂಡಿರಲಾಗುತ್ತದೆ.

ಜನವರಿ ೨೪, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge