ಶುಕ್ರವಾರ, ಜನವರಿ 17, 2014

ಕಣ್ಣಮುಂದಿನ ಅದ್ಭುತಲೋಕ: ಆಗ್‌ಮೆಂಟೆಡ್ ರಿಯಾಲಿಟಿ

ಟಿ. ಜಿ. ಶ್ರೀನಿಧಿ
ಇದು 'ಸ್ವ-ತಂತ್ರ' ಅಂಕಣದ ಐವತ್ತನೇ ಸಂಚಿಕೆ. ಇಂದು ಪ್ರಕಟವಾಗಿರುವ ಅಂಕಣಬರಹದ ವಿಷಯವನ್ನು ಅಂತರಜಾಲದಲ್ಲಿ ನಡೆದ ಸ್ಪರ್ಧೆಯೊಂದರ ಮೂಲಕ ಓದುಗರೇ ಸೂಚಿಸಿರುವುದು ವಿಶೇಷ. ಈ ವಿಷಯ ಸೂಚಿಸಿ ಇಜ್ಞಾನ ಡಾಟ್ ಕಾಮ್‌ನಿಂದ ಬಹುಮಾನ ಗೆದ್ದಿರುವ ಶ್ರೀ ಅಶ್ವತ್ಥ್ ಸಂಪಾಜೆಯವರಿಗೆ ಅಭಿನಂದನೆಗಳು.
ಅಪರಿಚಿತ ಸ್ಥಳದಲ್ಲಿ ಹೋಟಲೊಂದರ ಮುಂದೆ ನಿಂತಾಗ ನಮ್ಮ ಕಣ್ಣಿಗೆ ಅದರ ಬೋರ್ಡಿನ ಬದಲು ಅಲ್ಲಿ ದೊರಕುವ ಊಟೋಪಚಾರದ ವಿಮರ್ಶೆ ಕಂಡರೆ ಹೇಗಿರುತ್ತದೆ? ಒಳಕ್ಕೆ ಹೋಗಿಬಂದು ಆಮೇಲೆ ಊಟ ಕೆಟ್ಟದಾಗಿತ್ತೆಂದು ಬೈದುಕೊಳ್ಳುವುದಾದರೂ ತಪ್ಪುತ್ತದಲ್ಲ! ಅದೇರೀತಿ ಪಠ್ಯಪುಸ್ತಕ ಓದಿ ಬೇಜಾರಾದಾಗ ಪುಟದಲ್ಲಿನ ಅಕ್ಷರಗಳ ಬದಲು ಪಾಠಕ್ಕೆ ಸಂಬಂಧಪಟ್ಟ ವೀಡಿಯೋ ಕಾಣಿಸಿಕೊಂಡರೆ? ಇತಿಹಾಸದ್ದೋ ವಿಜ್ಞಾನದ್ದೋ ಪುಟಗಟ್ಟಲೆ ಶುಷ್ಕ ನಿರೂಪಣೆ ಓದುವ ಬದಲು ಅದೆಲ್ಲ ಚಿತ್ರ ಮತ್ತು ಧ್ವನಿಯ ರೂಪದಲ್ಲಿ ಮೂಡಿಬರುವಂತಿದ್ದರೆ?

ಇದೊಳ್ಳೆ ಸಿನಿಮಾ ಕತೆ ಆಯಿತಲ್ಲ ಎನ್ನಬೇಡಿ. ಮೇಲ್ನೋಟಕ್ಕೆ ಕಾಲ್ಪನಿಕ ಕತೆಯಂತೆ ತೋರುವ ಈ ವಿಷಯಗಳೆಲ್ಲ ಈಗಾಗಲೇ ಸಾಧ್ಯವಾಗಿವೆ. ಇದನ್ನೆಲ್ಲ ಸಾಧ್ಯವಾಗಿಸಿರುವ ತಂತ್ರಜ್ಞಾನದ ಹೆಸರು ಆಗ್‌ಮೆಂಟೆಡ್ ರಿಯಾಲಿಟಿ, ಹ್ರಸ್ವವಾಗಿ 'ಎಆರ್'.

ತಂತ್ರಜ್ಞಾನದ ನೆರವಿನಿಂದ ನಮ್ಮ ಕಣ್ಣಮುಂದಿನ ವಾಸ್ತವ ದೃಶ್ಯಕ್ಕೆ ವರ್ಚುಯಲ್ ಅಂಶಗಳನ್ನು ಹೆಚ್ಚುವರಿಯಾಗಿ ಸೇರಿಸುವುದು ಈ 'ಎಆರ್'ನ ಹೆಚ್ಚುಗಾರಿಕೆ.
ಹಾಗಾಗಿಯೇ ಇದನ್ನು ಕನ್ನಡದಲ್ಲಿ 'ಅತಿರಿಕ್ತ ವಾಸ್ತವ' ಎನ್ನಬಹುದು. ಇದರಲ್ಲಿ ವಿಶೇಷ ಕನ್ನಡಕ, ಮೊಬೈಲ್ ಫೋನ್, ಟ್ಯಾಬ್ಲೆಟ್ ಮುಂತಾದ ಉಪಕರಣಗಳನ್ನೆಲ್ಲ ಬಳಸಲಾಗುತ್ತದೆ.

ಬಳಕೆದಾರನ ಕಣ್ಣಮುಂದಿನ ದೃಶ್ಯವನ್ನು ಗಮನಿಸಿಕೊಂಡು ಅದಕ್ಕೆ ಪೂರಕವಾದ ಮಾಹಿತಿಯನ್ನು ಆತನಿಗೆ ಒದಗಿಸುವ ಕೆಲಸವನ್ನು ಆಗ್‌ಮೆಂಟೆಡ್ ರಿಯಾಲಿಟಿ ವ್ಯವಸ್ಥೆಗಳು ಮಾಡುತ್ತವೆ. ಇಂತಹ ಮಾಹಿತಿ ಚಿತ್ರ, ಧ್ವನಿ ಅಥವಾ ಪಠ್ಯ - ಯಾವ ರೂಪದಲ್ಲಾದರೂ ಇರಬಹುದು. ಹೀಗೆ ಹೆಚ್ಚುವರಿ ಮಾಹಿತಿ ಒದಗಿಸಲು ಬಳಕೆದಾರ ಸದ್ಯ ಎಲ್ಲಿದ್ದಾನೆ ಎಂದು ತಿಳಿಯಬೇಕಲ್ಲ, ಅದಕ್ಕಾಗಿ ಈ ವ್ಯವಸ್ಥೆ ಜಿಪಿಎಸ್ ತಂತ್ರಜ್ಞಾನವನ್ನು ಬಳಸುತ್ತದೆ. ನಿರ್ದಿಷ್ಟ ದೃಶ್ಯವನ್ನು ಸೆರೆಹಿಡಿದಿಟ್ಟು ಬಳಕೆದಾರ ಅದೇ ದೃಶ್ಯವನ್ನು ಕಂಡಾಗಲಷ್ಟೆ ಅವನಿಗೆ ಪೂರಕ ಮಾಹಿತಿ ನೀಡುವ ವ್ಯವಸ್ಥೆಗಳೂ ಇವೆ.

ಆಗ್‌ಮೆಂಟೆಡ್ ರಿಯಾಲಿಟಿ ವ್ಯವಸ್ಥೆಗಳಲ್ಲಿ ಮೂಡಿಬರುವ ಹೆಚ್ಚುವರಿ ಮಾಹಿತಿ ಮೊಬೈಲ್, ಕಂಪ್ಯೂಟರ್, ಇಯರ್ ಫೋನ್ - ಅಷ್ಟೇ ಏಕೆ, ಕನ್ನಡಕದ ಗಾಜಿನ ಅಥವಾ ಕಾಂಟ್ಯಾಕ್ಟ್ ಲೆನ್ಸಿನ ಮೂಲಕವೂ ನಮ್ಮನ್ನು ತಲುಪಬಹುದು. ಒಟ್ಟಾರೆಯಾಗಿ ತಂತ್ರಜ್ಞಾನದ ಮೂಲಕ ಲಭ್ಯವಾಗುವ ಮಾಹಿತಿಗೂ ನಮ್ಮ ಕಣ್ಣಿಗೆ ಕಾಣುವ ವಾಸ್ತವ ಜಗತ್ತಿಗೂ ನಡುವೆ ವ್ಯತ್ಯಾಸವೇ ಇಲ್ಲವೇನೋ ಎನ್ನುವಂತಹ ಭಾವನೆ ಮೂಡಿಸುವುದು ಈ ತಂತ್ರಜ್ಞಾನದ ಮುಖ್ಯ ಉದ್ದೇಶ.

ಯಾವುದೇ ವಸ್ತು ಅಥವಾ ಸನ್ನಿವೇಶಕ್ಕೆ ಪೂರಕವಾದ ಹಿನ್ನೆಲೆಯನ್ನು ಒದಗಿಸುವುದು ಎಆರ್‌ನಿಂದ ಸಾಧ್ಯವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಂತೂ ಈ ಪರಿಕಲ್ಪನೆಯ ಸಾಧ್ಯತೆಗಳು ಅಪಾರವಾಗಿವೆ - ಕ್ಷೇತ್ರಕಾರ್ಯವಿರಲಿ, ಪ್ರಯೋಗಾಲಯವಿರಲಿ, ಸನ್ನಿವೇಶಕ್ಕೆ ತಕ್ಕ ಪಠ್ಯಪೂರಕ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅತ್ಯಂತ ಪರಿಣಾಮಕಾರಿ ಶಿಕ್ಷಣ ಒದಗಿಸುವುದು ಎಆರ್‌ನಿಂದ ಸಾಧ್ಯ. ಪುರಾತತ್ವ ವಿಜ್ಞಾನ, ಗೃಹನಿರ್ಮಾಣ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲೂ ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬಹುದು.

ಇತರ ಕ್ಷೇತ್ರಗಳಲ್ಲೂ ಹಲವಾರು ಸಾಧ್ಯತೆಗಳಿವೆ: ರೋಗಿಯ ಮುಖ ನೋಡುತ್ತಿದ್ದಂತೆ ಆತನ ವೈದ್ಯಕೀಯ ಇತಿಹಾಸವೆಲ್ಲ ವೈದ್ಯರ ಕಣ್ಣಮುಂದೆ ಕಾಣಿಸಿಕೊಳ್ಳುವುದು, ಕಾರ್ಖಾನೆಯಲ್ಲಿ ಕೆಲಸಮಾಡುವವರ ಮುಂದೆ ಯಾವ ಭಾಗವನ್ನು ಎಲ್ಲಿ ಜೋಡಿಸಬೇಕು ಎಂಬ ಮಾಹಿತಿ ಪ್ರದರ್ಶಿತವಾಗುವುದು, ಪತ್ರಿಕೆಯಲ್ಲಿ ಪ್ರಕಟವಾಗಿರುವ ಕ್ರಿಕೆಟ್ ಮ್ಯಾಚಿನ ಸುದ್ದಿಯತ್ತ ಮೊಬೈಲ್ ಫೋನ್ ಚಾಚಿದರೆ ಮೊಬೈಲ್ ಪರದೆಯಲ್ಲಿ ಮ್ಯಾಚಿನ ಹೈಲೈಟ್ಸ್ ವೀಡಿಯೋ ಮೂಡಿಬರುವುದೇ ಮುಂತಾದ ರೋಚಕ ಪರಿಕಲ್ಪನೆಗಳೆಲ್ಲ ಎಆರ್‌ನಿಂದಾಗಿ ಕಾರ್ಯಸಾಧ್ಯವಾಗಿವೆ.

ಇಂತಹ ಆಲೋಚನೆಗಳಲ್ಲಿ ಕೆಲವು ಈಗಾಗಲೇ ಕಾರ್ಯರೂಪಕ್ಕೂ ಬಂದಿವೆ. ಮೊಬೈಲ್ ಫೋನ್-ಟ್ಯಾಬ್ಲೆಟ್ಟುಗಳಲ್ಲಿ ಬಳಕೆಗಾಗಿ ಹಲವಾರು ಆಗ್‌ಮೆಂಟೆಡ್ ರಿಯಾಲಿಟಿ ಆಪ್‌ಗಳು, ಆಟಗಳು ರೂಪುಗೊಂಡಿವೆ. ಭಾರತವೂ ಸೇರಿದಂತೆ ಹಲವು ದೇಶಗಳ ಪತ್ರಿಕೆಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆಟಗಳ ನೇರಪ್ರಸಾರದ ಸಂದರ್ಭದಲ್ಲಿ ದೂರದರ್ಶನದಲ್ಲಿ ಮೂಡಿಬರುವ ಗ್ರಾಫಿಕ್‌ಗಳು, ಮೈದಾನದ ಮಧ್ಯದಲ್ಲೇ ಮೂಡಿಬಂದಂತೆ ಕಾಣುವ ಜಾಹೀರಾತು - ಇವನ್ನೂ ಆಗ್‌ಮೆಂಟೆಡ್ ರಿಯಾಲಿಟಿಯ ಒಂದು ರೂಪ ಎಂದೇ ಹೇಳಬಹುದು. ಈಚೆಗೆ ಸಾಕಷ್ಟು ಸುದ್ದಿಮಾಡಿರುವ 'ಗೂಗಲ್ ಗ್ಲಾಸ್' ಕೂಡ ಈ ತಂತ್ರಜ್ಞಾನದ ಸಾಧ್ಯತೆಗಳಿಗೆ ಒಂದು ಉದಾಹರಣೆ.

ಆಗ್‌ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನ ತನ್ನ ಹೊಸತನದಿಂದಾಗಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ, ನಿಜ. ಆದರೆ ಈ ನಿರೀಕ್ಷೆಗಳಲ್ಲಿ ಎಷ್ಟು ಸಾಕಾರಗೊಳ್ಳುತ್ತವೆ, ಸುಲಭವಾಗಿ ಎಷ್ಟು ಬೇಗ ಎಷ್ಟು ಜನರ ಕೈಗೆಟಕುತ್ತವೆ ಎನ್ನುವುದನ್ನು ಮಾತ್ರ ನಾವೀಗ ಕಾದುನೋಡಬೇಕಿದೆ.

ಜನವರಿ ೧೭, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

Holalkere rangarao laxmivenkatesh ಹೇಳಿದರು...

ಬಹಳ ಉಪಯುಕ್ತ ಲೇಖನ. ಧನ್ಯವಾದಗಳು

-ವೆಂಕಟೇಶ, ಮುಂಬೈ

sb raju ಹೇಳಿದರು...

Really goog article

badge