ಸೋಮವಾರ, ಆಗಸ್ಟ್ 5, 2013

ಎಕ್ಸ್ - ಕಿರಣಗಳ ಅದೃಶ್ಯಲೋಕ

ಭೌತ ವಿಜ್ಞಾನದ ಶಿಕ್ಷಕಿಯಾಗಿ ಬೋಧನೆ ಮಾಡಿದ ಅಪಾರ ಅನುಭವದ ಹಿನ್ನೆಲೆಯಲ್ಲಿ ಶ್ರೀಮತಿ ಗಾಯತ್ರಿ ಮೂರ್ತಿಯವರದು ವಿಜ್ಞಾನ ಸಂವಹನೆಯಲ್ಲಿ ದೊಡ್ಡ ಹೆಸರು. ಅವರ ಇತ್ತೀಚಿನ ಕೃತಿ 'ಎಕ್ಸ್ - ಕಿರಣಗಳ ಅದೃಶ್ಯಲೋಕ'ದ ಪರಿಚಯ ಇಲ್ಲಿದೆ.

ಡಾ| ಪಿ. ಎಸ್. ಶಂಕರ್ 

ಎಕ್ಸ್ - ಕಿರಣಗಳ ಶೋಧನೆಯ ಕಥೆ ಎಂದೆಂದಿಗೂ ರೋಚಕವಾದುದು. ತನ್ನ ವಿದ್ಯಾರ್ಥಿ ಜೀವನದಲ್ಲಿ ಕೀಟಲೆ ವಿದ್ಯಾರ್ಥಿ ಎನಿಸಿಕೊಂಡಿದ್ದ ರಾಂಜೆನ್, ಪ್ರಯೋಗಾಲಯಗಳಲ್ಲಿ ಅತ್ಯುತ್ಸಾಹದಿಂದ ಕೆಲಸ ಮಾಡಿ ವಿಶ್ವವಿಖ್ಯಾತಿ ಪಡೆದ ಕತೆ ಸಾರ್ವಕಾಲೀನ ಆಕರ್ಷಣೆಯನ್ನು ಹೊಂದಿದೆ.

ಕ್ರೂಕನ್ ವಿದ್ಯುತ್ ವಿಸರ್ಜನ ನಳಿಗೆಯೊಡನೆ ಕಾರ್ಯ ಮಾಡುತ್ತಿದ್ದಾಗ ಶರೀರವನ್ನು ಭೇದಿಸಿಕೊಂಡು ಹೋಗುವ ಅಗೋಚರ ಕಿರಣಗಳನ್ನು ಆತ ಕಂಡು ಹಿಡಿದ. ಹಿಂದೆಂದೂ ಕಾಣದಿದ್ದ ಆ ಕಿರಣಗಳು ಎಕ್ಸ್ - ಕಿರಣಗಳೆನಿಸಿದವು. ಅವುಗಳ ಮಹತ್ವವನ್ನು ಅರಿಯಲು ಸಮಯ ಹಿಡಿಯಲಿಲ್ಲ. ಅದರ ಪ್ರಕಟಣೆ ಜರ್ಮನ್ ಭಾಷೆಯಲ್ಲಿದ್ದರೂ, ಅದರ ಉಪಯುಕ್ತತೆ ಖಂಡಾಂತರವಾಗಿ ಸಾಗಿ ಜಗತ್ತಿನ ಗಮನ ಸೆಳೆಯಿತು. ವರುಷ ಕಳೆಯುವುದರಲ್ಲಿ ಸಾವಿರಾರು ಲೇಖನಗಳು ಅದರ ಬಗ್ಗೆ ಪ್ರಕಟವಾದವು. ಒಬ್ಬ ವ್ಯಕ್ತಿಯ ಮೇಲೆಯೇ ರೇಡಿಯಾಲಜಿಯು ರಾಂಜೆನಾಲಜಿ ಎಂದು ಅಭೂತ ಪೂರ್ವ ಬೆಳವಣಿಗೆಯನ್ನು ಪಡೆಯಿತು. ಈ ಕಥೆಯನ್ನು ಸ್ವಾರಸ್ಯಕರವಾಗಿ ನಿರೂಪಿಸುವಲ್ಲಿ ಲೇಖಕಿ ಶ್ರೀಮತಿ ಗಾಯತ್ರಿ ಮೂರ್ತಿಯವರು ಯಶಸ್ವಿಯಾಗಿದ್ದಾರೆ.

ಈ ಕಥೆಯ ಹಿನ್ನೆಲೆಯಲ್ಲಿ ಶ್ರೀಮತಿ ಗಾಯತ್ರಿ ಮೂರ್ತಿಯವರು ಎಕ್ಸ್-ಕಿರಣಗಳ ಉತ್ಪಾದನೆ, ಅದರ ಬೇರೆ ಬೇರೆ ವಿಧಗಳು, ಅವುಗಳ ಸ್ವರೂಪವನ್ನು ವಿವರಿಸಿ ಅವು ಹೊರಹಾಕುವ ವಿಕಿರಣ ಪ್ರಮಾಣದ ಅಳೆಯುವಿಕೆ, ಅವುಗಳ ಬಗ್ಗೆ ವಿಸ್ತಾರವಾಗಿ ವಿಜ್ಞಾನದ ಪರಿಚಯವಿಲ್ಲದವರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ.
ಎಕ್ಸ್-ಕಿರಣಗಳು ಮನುಷ್ಯ ದೇಹದೊಳಗೆ ಅಗೋಚರವಾಗಿ ಉಳಿದಿರುವ ಅನೇಕ ಬಗೆಯ ರೋಗಗಳನ್ನು ಗೋಚರ ಮಾಡುವ ಬಗೆಯನ್ನು ವಿವರಿಸಿರುವುದಲ್ಲದೆ, ಅವು ಖನಿಜಗಳ ಒಳರಚನೆಯನ್ನು  ತಿಳಿಸುವಲ್ಲಿ, ಕಲಾಕೃತಿಗಳ ಸತ್ಯಾಸತ್ಯತೆಯನ್ನು ದೃಢಪಡಿಸುವಲ್ಲಿ ಉಪಯುಕ್ತರವೆನಿಸಿದೆ ಎಂದೂ ಓದುಗರಿಗೆ ಪರಿಚಯಿಸಿದ್ದಾರೆ. ದಂತ ವೈದ್ಯದಲ್ಲಿ, ಕ್ಯಾನ್ಸರ್ ಚಿಕಿತ್ಸೆಯಲ್ಲಿ, ಆಹಾರ ಸುರಕ್ಷತೆಯನ್ನು ದೃಢಪಡಿಸುವಲ್ಲಿ ಹಾಗೂ ಹೊರಗೆ ಕಾಣದಂತೆ ಗುಪ್ತವಾಗಿರಿಸಿದ ವಸ್ತುಗಳನ್ನು ಕಂಡು ಹಿಡಿಯುವಲ್ಲಿ ಅವುಗಳ ಉಪಯುಕ್ತತೆ ಬಗೆ ಆಕರ್ಷವಾಗಿ ಬರೆದಿದ್ದಾರೆ. ಎಕ್ಸ್ - ಕಿರಣ ವಿಜ್ಞಾನದಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡಿದ ಅನೇಕ ವಿಜ್ಞಾನಿಗಳ ಬಗ್ಗೆ ವಿವರವಾಗಿ ಉಲ್ಲೇಖಿಸಿ, ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾರೆ.

ಶ್ರೀಮತಿ ಗಾಯತ್ರಿ ಮೂರ್ತಿಯವರು ಅನೇಕ ಇಂಗ್ಲೀಷ್ ಪದಗಳನ್ನು ಕನ್ನಡದ ಜಾಯಮಾನಕ್ಕೆ ಹೊಂದುವ ರೀತಿ ಪದಸೃಷ್ಟಿಮಡಿದ್ದು ಪುಸ್ತಕದ ಓದು ಸರಾಗವಾಗಿ ಸಾಗುವಂತೆ ಮಾಡಿದೆ. ಅವರ ಬರವಣಿಗೆ ಸರಳ ಮತ್ತು ಸಹಜ. ಈ ಮೂಲಕ ವೈಜ್ಞಾನಿಕ ಸತ್ಯಗಳನ್ನು ತಿಳಿಸಿಕೊಡುವಲ್ಲಿ ಅವರು ತುಂಬ ಯಶಸ್ವಿಯಾಗಿದ್ದಾರೆ. ಇಂತಹ ಅಮೂಲ್ಯ ಕೃತಿಯನ್ನು ರಚಿಸಿದ ಶ್ರೀಮತಿ ಗಾಯತ್ರಿ ಮೂರ್ತಿಯವರು ಅಭಿನಂದನಾರ್ಹರು.

ಎಕ್ಸ್ - ಕಿರಣಗಳ ಅದೃಶ್ಯಲೋಕ 
ಲೇಖಕರು: ಶ್ರೀಮತಿ ಗಾಯತ್ರಿ ಮೂರ್ತಿ
೧೨೦ ಪುಟಗಳು, ಬೆಲೆ ರೂ. ೮೦/-
ಪ್ರಕಾಶಕರು: ಪ್ರಿಸಮ್ ಬುಕ್ಸ್, ಬೆಂಗಳೂರು

ಕಾಮೆಂಟ್‌ಗಳಿಲ್ಲ:

badge