ಸೋಮವಾರ, ಆಗಸ್ಟ್ 19, 2013

ಕಂಪ್ಯೂಟರ್ ಬಳಸುವವರಿಗೆ ಒಂದಿಷ್ಟು ಟಿಪ್ಸ್

ಟಿ. ಜಿ. ಶ್ರೀನಿಧಿ

ಈಗಂತೂ ಕಂಪ್ಯೂಟರ್ ಬಳಕೆ ಎಲ್ಲ ವಯಸ್ಸಿನವರಿಗೂ ಸರ್ವೇಸಾಮಾನ್ಯವಾದ ವಿಷಯ. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ - ಹೀಗೆ ಯಾವುದೋ ಒಂದು ಬಗೆಯ ಕಂಪ್ಯೂಟರನ್ನು ನಾವೆಲ್ಲರೂ ಆಗಿಂದಾಗ್ಗೆ ಬಳಸುತ್ತಲೇ ಇರುತ್ತೇವೆ. ಕಾಲೇಜಿನಲ್ಲಿ, ಆಫೀಸಿನಲ್ಲಿ, ಮನೆಯಲ್ಲಿ - ಎಲ್ಲಿ ನೋಡಿದರೂ ಕಂಪ್ಯೂಟರಿನದೇ ರಾಜ್ಯಭಾರ!

ಕಂಪ್ಯೂಟರ್ ಬಳಸಲು ಅದರ ಕುರಿತ ತಾಂತ್ರಿಕ ಜ್ಞಾನವೇನೋ ಬೇಕು ನಿಜ. ಆದರೆ ಅಷ್ಟೇ ಸಾಕೇ ಎಂದು ಕೇಳಿದರೆ ಖಂಡಿತಾ ಸಾಲದು ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಕಂಪ್ಯೂಟರ್ ಬಳಸುವಾಗಿನ ನಮ್ಮ ಭಂಗಿ ನಮ್ಮ ತಾಂತ್ರಿಕ ಜ್ಞಾನದಷ್ಟೇ ಪ್ರಮುಖ. ಕಂಪ್ಯೂಟರ್ ದೊಡ್ಡದಾಗಿರಲಿ ಅಥವಾ ಸಣ್ಣದೇ ಇರಲಿ, ಸುದೀರ್ಘ ಅವಧಿಯವರೆಗೆ ಅಸಮರ್ಪಕ ಭಂಗಿಯಲ್ಲಿ ಕುಳಿತು ಅಥವಾ ಮಲಗಿ ಕಂಪ್ಯೂಟರ್ ಬಳಸುವುದು ಆರೋಗ್ಯಕ್ಕೆ ಹಾನಿಕರ.

ಇಂತಹ ದುಷ್ಪರಿಣಾಮಗಳನ್ನು ತಪ್ಪಿಸುವ ಕುರಿತು ಒಂದಷ್ಟು ಟಿಪ್ಸ್ ಇಲ್ಲಿವೆ:

* ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಬಳಸುವಾಗ ಒಳ್ಳೆಯ ಮೇಜು ಹಾಗೂ ಕುರ್ಚಿ ಹೊಂದಿಸಿಕೊಳ್ಳಿ. ಕುರ್ಚಿಯ ಎತ್ತರವನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುವಂತಿದ್ದರೆ ಒಳಿತು. ಹಾಗೆಯೇ ಅದು ನಿಮ್ಮ ಬೆನ್ನು ಮತ್ತು ಮೊಣಕೈಗಳಿಗೆ ಸರಿಯಾಗಿ ಆಧಾರ ನೀಡುವಂತಿರಲಿ. 

* ಕಂಪ್ಯೂಟರಿನ ಪರದೆ ನಿಮ್ಮ ಕಣ್ಣಿನ ದೃಷ್ಟಿಗೆ ನೇರವಾಗಿಯೇ ಇರಲಿ. ಹಾಗೆಂದು ಮಾನಿಟರನ್ನು ತೀರಾ ಸಮೀಪದಲ್ಲಿಟ್ಟುಕೊಳ್ಳುವುದೂ ತಪ್ಪು; ಕಂಪ್ಯೂಟರಿನ ಪರದೆಗೂ ನಿಮಗೂ ನಡುವೆ ಕನಿಷ್ಠ ಒಂದು ಮಾರುದ್ದದ ಅಂತರವಿರಲಿ. ಕೀಬೋರ್ಡ್-ಮೌಸ್ ಇತ್ಯಾದಿಗಳೂ ಕಂಪ್ಯೂಟರ್ ಪರದೆಯ ಎದುರಿಗೇ ಇರಲಿ.

* ಕೀಬೋರ್ಡ್ ಹಾಗೂ ಮೌಸ್ ಇಟ್ಟಿರುವ ಮೇಜಿನ ಮೇಲ್ಮೈ ತೀರಾ ಎತ್ತರದಲ್ಲಿ ಅಥವಾ ತೀರಾ ತಗ್ಗಿನಲ್ಲಿ ಇಲ್ಲದಂತೆ ನೋಡಿಕೊಳ್ಳಿ. ಕುರ್ಚಿಯ ಮೇಲೆ ಕುಳಿತು ಕೀಬೋರ್ಡ್-ಮೌಸ್ ಬಳಸುವಾಗ ನಿಮ್ಮ ಮೊಣಕೈ ಹೆಚ್ಚೂಕಡಿಮೆ ಮೇಜಿನ ಮಟ್ಟದಲ್ಲೇ ಇರಬೇಕು.

* ಕುರ್ಚಿಯ ಮೇಲೆ ಕುಳಿತಾಗ ನಿಮ್ಮ ಕಾಲುಗಳು ನೆಲದ ಮೇಲೆ ಆರಾಮವಾಗಿ ಊರಿರಲಿ. ಕುರ್ಚಿಯ ತುದಿಯಲ್ಲೆಲ್ಲೋ ಕುಳಿತುಕೊಳ್ಳಬೇಡಿ; ಬೆನ್ನಿಗೆ ಸರಿಯಾದ ಆಧಾರ ಸಿಗದಿದ್ದರೆ ಬೆನ್ನು ನೋವು ಕಾಣಿಸಿಕೊಳ್ಳಬಹುದು.

* ಟೈಪ್ ಮಾಡುತ್ತಿರುವಾಗ ನಿಮ್ಮ ಮಣಿಕಟ್ಟುಗಳು ಆದಷ್ಟೂ ಸಡಿಲವಾಗಿರಲಿ. ಕೀಬೋರ್ಡ್-ಮೌಸ್ ಬಳಸಲು ಮಣಿಕಟ್ಟುಗಳನ್ನು ಮೇಲಕ್ಕೆ, ಕೆಳಕ್ಕೆ ಅಥವಾ ಪಕ್ಕಕ್ಕೆ ಬಾಗಿಸಬೇಕಾಗುವ ಪರಿಸ್ಥಿತಿಯಿದೆ ಎಂದರೆ ನಿಮ್ಮ ಭಂಗಿ ಸರಿಯಿಲ್ಲ ಎಂದೇ ಅರ್ಥ. 

* ಬರಿಯ ಮಣಿಕಟ್ಟಷ್ಟೆ ಅಲ್ಲ, ತಪ್ಪು ಭಂಗಿಯಿಂದಾಗಿ ಕತ್ತು-ಮೊಣಕೈ-ಬೆನ್ನು ಮುಂತಾದ ಯಾವುದೇ ಭಾಗದ ಮೇಲೆ ಸತತವಾಗಿ ಒತ್ತಡ ಬಿದ್ದರೂ ಆ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಅದು ಸುಲಭಕ್ಕೆ ವಾಸಿಯಾಗುವುದೂ ಇಲ್ಲ. ವೈದ್ಯಕೀಯ ನೆರವು ಅತ್ಯಗತ್ಯವಾಗುವ ಇಂತಹ ಪರಿಸ್ಥಿತಿಯನ್ನು ರಿಪಿಟಿಟಿವ್ ಸ್ಟ್ರೈನ್ ಇಂಜುರಿ ಅಥವಾ ಆರ್‌ಎಸ್‌ಐ ಎಂದು ಕರೆಯುತ್ತಾರೆ.

* ನೀವು ಕೆಲಸಮಾಡುವಲ್ಲಿ ಗಾಳಿ-ಬೆಳಕು ಕೂಡ ಸರಿಯಾಗಿರುವಂತೆ ನೋಡಿಕೊಳ್ಳಿ. ನೀವು ಕುಳಿತಿರುವ ಭಂಗಿ ಎಷ್ಟೇ ಸರಿಯಿದ್ದರೂ ಸುದೀರ್ಘ ಅವಧಿಗಳವರೆಗೆ ಹಾಗೆಯೇ ಕುಳಿತಿರಬೇಡಿ. ಆಗಾಗ ಒಂದೊಂದು ಬ್ರೇಕ್ ತೆಗೆದುಕೊಳ್ಳಿ, ನಿಮ್ಮ ಕಣ್ಣುಗಳಿಗೆ-ದೇಹಕ್ಕೆ ಕೊಂಚವಾದರೂ ವಿರಾಮ ಕೊಡಿ. ಕೆಲಸದಲ್ಲಿ ಸಂಪೂರ್ಣವಾಗಿ ಮುಳುಗಿರುತ್ತೇನೆ, ಸಮಯದ ಪರಿವೆಯೇ ಇರುವುದಿಲ ಎನ್ನುವವರು ನೀವಾದರೆ ಹಲವಾರು ತಂತ್ರಾಂಶಗಳು ನಿಮ್ಮ ಸಹಾಯಕ್ಕೆ ಬರಬಲ್ಲವು (ಇಂತಹ ತಂತ್ರಾಂಶಗಳನ್ನು ಹುಡುಕಲು ಗೂಗಲ್‌ನಲ್ಲಿ 'ಬ್ರೇಕ್ ರಿಮೈಂಡರ್ ಸಾಫ್ಟ್‌ವೇರ್' ಎಂದು ಟೈಪಿಸಿ). 

* ಅಷ್ಟೇ ಅಲ್ಲ, ದೈಹಿಕವಾಗಿ ಏನಾದರೂ ತೊಂದರೆ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯುವುದನ್ನೂ ಮರೆಯಬೇಡಿ!

ಆಗಸ್ಟ್ ೧೬, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge