ಶುಕ್ರವಾರ, ಮೇ 31, 2013

ಮೊದಲ ವೆಬ್‌ಪುಟದ ಹುಡುಕಾಟದಲ್ಲಿ...

ಟಿ. ಜಿ. ಶ್ರೀನಿಧಿ

ವರ್ಲ್ಡ್‌ವೈಡ್ ವೆಬ್, ಅಂದರೆ ವಿಶ್ವವ್ಯಾಪಿ ಜಾಲ, ಈಗ ನಮ್ಮ ಜೀವನದ ಭಾಗವೇ ಆಗಿಹೋಗಿದೆ. ವೆಬ್ ಪುಟಗಳನ್ನು ತೆರೆಯುವುದು, ವಿವಿಧ ಉದ್ದೇಶಗಳಿಗಾಗಿ ಅವನ್ನು ಬಳಸುವುದು - ಇದೆಲ್ಲ ಎಷ್ಟು ಸಾಮಾನ್ಯವೆಂದರೆ ಅದರಲ್ಲಿ ನಮಗೆ ಯಾವ ವಿಶೇಷತೆಯೂ ಕಾಣಸಿಗುವುದಿಲ್ಲ.

ಸುಮಾರು ಎರಡು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ, ಏಕೆಂದರೆ ಆಗಿನ್ನೂ ವಿಶ್ವವ್ಯಾಪಿ ಜಾಲ ಹುಟ್ಟಿಯೇ ಇರಲಿಲ್ಲ.

ಆ ಸಂದರ್ಭದಲ್ಲಿ ಟಿಮ್ ಬರ್ನರ್ಸ್-ಲೀ ಎಂಬ ವಿಜ್ಞಾನಿಯೊಬ್ಬರು ಸ್ವಿಟ್ಸರ್‌ಲೆಂಡಿನ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ಕೆಲಸಮಾಡುತ್ತಿದ್ದರು. ತಾವು ಬಳಸುತ್ತಿದ್ದ ಮಾಹಿತಿ ಬೇಕೆಂದಾಗ ಬೇಕಾದಕಡೆ ದೊರಕುವಂತೆ ಮಾಡಿಕೊಳ್ಳಲು ಅವರು ನಡೆಸಿದ ಪ್ರಯತ್ನಗಳ ಫಲವೇ ವಿಶ್ವವ್ಯಾಪಿ ಜಾಲದ ಹುಟ್ಟಿಗೆ ಕಾರಣವಾಯಿತು.

ಮೊತ್ತಮೊದಲ ವೆಬ್‌ಸೈಟ್, ಅಂದರೆ ಜಾಲತಾಣ ರೂಪುಗೊಂಡದ್ದೂ ಇದೇ ಸಂದರ್ಭದಲ್ಲಿ.
೧೯೯೦ರಲ್ಲಿ info.cern.ch ಎಂಬ ವಿಳಾಸದಲ್ಲಿ ಮೊದಲ ತಾಣ ರೂಪಿಸಿದ ಲೀ ಇಂತಹ ತಾಣಗಳ ರಚನೆಗಾಗಿ ಹೈಪರ್‌ಟೆಕ್ಸ್ಟ್ ಮಾರ್ಕಪ್ ಲ್ಯಾಂಗ್ವೇಜ್ (ಎಚ್‌ಟಿಎಂಎಲ್) ಎಂಬ ಸರಳ ಭಾಷೆಯನ್ನೂ ಹುಟ್ಟುಹಾಕಿದರು. ಇಂತಹ ತಾಣಗಳಿಂದ ಬಳಕೆದಾರರ ಕಂಪ್ಯೂಟರಿಗೆ ಮಾಹಿತಿ ವರ್ಗಾವಣೆ ಮಾಡಲು ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್ (ಎಚ್‌ಟಿಟಿಪಿ) ಎಂಬ ವ್ಯವಸ್ಥೆಯನ್ನೂ ಸಿದ್ಧಪಡಿಸಿದರು. ಈ ತಾಣಗಳನ್ನು ಸುಲಭವಾಗಿ ವೀಕ್ಷಿಸಲು ಅನುವುಮಾಡಿಕೊಡುವ ಬ್ರೌಸರ್ ತಂತ್ರಾಂಶ ಕೂಡ ತಯಾರಾಯಿತು.

ಈ ಯೋಜನೆಯಲ್ಲಿ ಕೆಲಸಮಾಡುತ್ತಿದ್ದ ವಿಜ್ಞಾನಿಗಳಿಗೆ ತಾವು ಮಹತ್ವದ ಆವಿಷ್ಕಾರವೊಂದರಲ್ಲಿ ತೊಡಗಿದ್ದೇವೆ ಎಂದು ಗೊತ್ತಿತ್ತಾದರೂ ಅದು ಮನುಕುಲದ ಭವಿಷ್ಯವನ್ನೇ ಬದಲಿಸುವಷ್ಟು ಮಟ್ಟಕ್ಕೆ ಬೆಳೆಯಲಿದೆ ಎನ್ನುವುದು ಪ್ರಾಯಶಃ ಗೊತ್ತಿರಲಿಲ್ಲ. ಹಾಗಾಗಿಯೇ ಅವರು ಮೊದಲ ಜಾಲತಾಣ ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ತಮ್ಮ ಕೆಲಸದ ಎಲ್ಲ ಆವೃತ್ತಿಗಳನ್ನೂ ಉಳಿಸಿಡುವ ಗೊಡವೆಗೆ ಹೋಗಲಿಲ್ಲ. ಆ ತಾಣದ ವೆಬ್‌ಪುಟಗಳನ್ನು ಬದಲಿಸುವಾಗಲೂ ಆದದ್ದು ಇದೇ.

ಈಗ ಎರಡು ದಶಕಗಳ ನಂತರದಲ್ಲಿ ಪ್ರಪಂಚದ ಮೊತ್ತಮೊದಲ ವೆಬ್‌ಪುಟ ತನ್ನ ಮೂಲರೂಪದಲ್ಲಿ ಹೇಗಿತ್ತು ಎಂದು ಹುಡುಕಲು ಹೊರಟಾಗ ಅದರ ಪ್ರತಿ ಎಲ್ಲಿದೆಯೋ ಗೊತ್ತಿಲ್ಲ ಎನ್ನುವ ವಿಚಿತ್ರ ಸತ್ಯ 'ಸರ್ನ್'ನ ವಿಜ್ಞಾನಿಗಳಿಗೆ ಅರಿವಾಯಿತು.

ಹೀಗಾಗಿಯೇ ಅವರೀಗ ಮೊತ್ತಮೊದಲ ವೆಬ್‌ಪುಟವನ್ನು ಹುಡುಕಿ ಮತ್ತೊಮ್ಮ ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇಂದಿನ ವೆಬ್‌ಲೋಕದ ಅತ್ಯಾಧುನಿಕ ಅನುಭವಕ್ಕೆ ಹೊಂದಿಕೊಂಡವರಿಗೆ ಅಂದಿನ ಲೋಕ ಹೇಗಿತ್ತು ಎಂದು ಪರಿಚಯಿಸುವುದು ಅವರ ಉದ್ದೇಶ. ಅಷ್ಟೇ ಅಲ್ಲ, ಅಂದು ಬಳಕೆಯಾಗುತ್ತಿದ್ದ ಯಂತ್ರಾಂಶ-ತಂತ್ರಾಂಶಗಳಿಗೆ ಮರುಜೀವ ಕೊಡುವ ಯೋಜನೆಯೂ ಅವರಿಗಿದೆ.

ಸಂಸ್ಥೆಯೊಂದರ ಆಶ್ರಯದಲ್ಲಿ ಬೆಳೆದ ಹಿನ್ನೆಲೆಯಲ್ಲಿ ಬಹಳ ಸುಲಭವಾಗಿ ಖಾಸಗಿ ಆಸ್ತಿಯಾಗಿ ಉಳಿದುಬಿಡಬಹುದಿದ್ದ ವಿಶ್ವವ್ಯಾಪಿ ಜಾಲ ಸಾರ್ವಜನಿಕ ಆಸ್ತಿಯಾಗಿ ಬೆಳೆದದ್ದಿದೆಯಲ್ಲ, ಅದು ಮನುಕುಲದ ಇತಿಹಾಸದ ಪ್ರಮುಖ ಘಟನೆಗಳಲ್ಲೊಂದು. ಮೊದಲ ವೆಬ್ ಪುಟವನ್ನು ಮತ್ತೆ ಪ್ರಕಟಿಸುವ ಮೂಲಕ ಈ ಪ್ರಕ್ರಿಯೆಯ ಮಹತ್ವವನ್ನು ನಾವು ಮತ್ತೊಮ್ಮೆ ಎಲ್ಲರಿಗೂ ನೆನಪಿಸಲಿದ್ದೇವೆ ಎಂದು ಅವರು ಹೇಳುತ್ತಾರೆ.

ಮೊದಲ ವೆಬ್‌ಪುಟದ ಹುಡುಕಾಟದಲ್ಲಿ ಅವರಿನ್ನೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲವಾದರೂ ಹಲವು ಸಂತಸದ ಸಂಗತಿಗಳು ಈಗಾಗಲೇ ಅವರ ಪಾಲಿಗೆ ಬಂದಿವೆ. ಮೊದಲ ವೆಬ್‌ಪುಟದ ೧೯೯೧ರ ಆವೃತ್ತಿಯೊಂದು ಈಗಾಗಲೇ ಅವರ ಕೈಸೇರಿದೆ. ಇದಲ್ಲದೆ ಸಮುದಾಯದ ನೆರವಿನಿಂದಾಗಿ ಮಹತ್ವದ ಇನ್ನೂ ಹಲವು ಕಡತಗಳು ಶೀಘ್ರದಲ್ಲೇ ಅವರತ್ತ ಬರುವ ನಿರೀಕ್ಷೆಯಿದೆ.

ಮೊತ್ತಮೊದಲ ವೆಬ್‌ಪುಟವನ್ನು ಶೀಘ್ರದಲ್ಲೇ ಮತ್ತೊಮ್ಮೆ ನೋಡುವ, ವೆಬ್ ವಿಹಾರದ ಈ ದಶಕಗಳತ್ತ ಒಂದು ಹಿನ್ನೋಟ ಹರಿಸುವ ನಿರೀಕ್ಷೆಯನ್ನು ನಾವೂ ಇಟ್ಟುಕೊಳ್ಳೋಣ!

ಮೇ ೩೧, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge