ಶುಕ್ರವಾರ, ಮೇ 17, 2013

ಓದುವ ಹವ್ಯಾಸಕ್ಕೆ ಆಪ್ ನೆರವು!


ಟಿ. ಜಿ. ಶ್ರೀನಿಧಿ

ಒಂದೆರಡು ದಶಕಗಳ ಹಿಂದಿನ ಬಾಲ್ಯ ನೆನಪಿಸಿಕೊಳ್ಳಿ. ಮಕ್ಕಳ ಇತರೆಲ್ಲ ಚಟುವಟಿಕೆಗಳ ಜೊತೆಗೆ ಪುಸ್ತಕಗಳೂ ಅವರ ಜೊತೆಗಾರರಾಗಿರುತ್ತಿದ್ದವು. ಓದಲು ಕಲಿಯುವ ಮುನ್ನ ಅಪ್ಪ-ಅಮ್ಮ ಹೇಳುವ ಕತೆಗಳಿಂದಲೇ ಪುಸ್ತಕಗಳ ಈ ಒಡನಾಟ ಪ್ರಾರಂಭವಾಗುತ್ತಿತ್ತು. ಹಾಗೆ ಪುಸ್ತಕಗಳ ರುಚಿ ಹತ್ತಿತೆಂದರೆ ಅಲ್ಲಿಂದ ಮುಂದಕ್ಕೆ ಪುಸ್ತಕಗಳ ಒಡನಾಟ ಮುಂದುವರೆಯುತ್ತಿದ್ದದ್ದು ಗ್ಯಾರಂಟಿ!

ಮುಂದಿನ ಕೆಲ ವರ್ಷಗಳಲ್ಲಿ ಪುಸ್ತಕಗಳ ಪ್ರಾಮುಖ್ಯವನ್ನು ಟೀವಿ ಒಂದಷ್ಟುಮಟ್ಟಿಗೆ ಕಡಿಮೆಮಾಡಿತು, ಆಮೇಲೆ ಟೀವಿಯ ಜೊತೆಗೆ ಕಂಪ್ಯೂಟರ್ ಕೂಡ ಬಂತು. ಅದೇನು ಅಷ್ಟು ಹೊತ್ತಿಂದ ಅದರ ಮುಂದೆ ಕೂತಿದ್ದೀಯಲ್ಲ, ಸ್ವಲ್ಪಹೊತ್ತು ಹೋಗಿ ಏನಾದರೂ ಓದಬಾರದೇ ಎಂದು ಮಕ್ಕಳು ಬೈಸಿಕೊಳ್ಳುವುದು ಸರ್ವೇಸಾಮಾನ್ಯವೂ ಆಯಿತು. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್‌ಗಳ ಜೊತೆಗೆ ಸೇರಿಕೊಂಡ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಿಗೂ ಇದೇ ಕುಖ್ಯಾತಿ ಸಂದಿತು.

ಆದರೆ ಪ್ರಪಂಚವೆಲ್ಲ ಕಂಪ್ಯೂಟರ್ ಹಾಗೂ ಮೊಬೈಲಿನ ಹಾದಿಯಲ್ಲಿ ಸಾಗಿದಂತೆ ಅವುಗಳ ನೆರವಿನಿಂದ ಮಾಡಬಹುದಾದ ಕೆಲಸಗಳ ಪ್ರಮಾಣ ಹೆಚ್ಚಿತು. ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವುದು ಸಮಯ ವ್ಯರ್ಥಮಾಡಲಿಕ್ಕಷ್ಟೆ ಅಲ್ಲ, ಅದು ಜ್ಞಾನಾರ್ಜನೆಯ ಮಾರ್ಗವೂ ಆಗಬಹುದು ಎಂಬ ಅರಿವು ಬೆಳೆಯಿತು. ಪುಸ್ತಕಗಳಿಂದ ಮಕ್ಕಳನ್ನು (ಹಾಗೂ ಕೆಲವೊಮ್ಮೆ ದೊಡ್ಡವರನ್ನೂ) ದೂರ ಕೊಂಡೊಯ್ದ ಆಪಾದನೆಯನ್ನು ಹೋಗಲಾಡಿಸಿಕೊಳ್ಳಲು ಇದೇ ಸುಸಮಯ ಎಂಬ ಆಲೋಚನೆಯೂ ಹುಟ್ಟಿಕೊಂಡಿತು!

ವಿದ್ಯುನ್ಮಾನ ಪುಸ್ತಕಗಳ (ಇ-ಬುಕ್) ಪರಿಕಲ್ಪನೆಯ ಬೆಳವಣಿಗೆಗೆ ನೆರವಾದದ್ದು ಇದೇ ಅಂಶ.
ಹೆಚ್ಚುಹೆಚ್ಚು ಪುಸ್ತಕಗಳು ಇ-ಬುಕ್ ರೂಪದಲ್ಲಿ ದೊರಕಲು ಶುರುವಾದಂತೆ ಅವುಗಳ ಜನಪ್ರಿಯತೆ ಹೆಚ್ಚಿತು, ಇ-ಬುಕ್ ರೀಡರುಗಳ ಮಾರುಕಟ್ಟೆಯೂ ಬೆಳೆಯಿತು.

ಆದರೆ ಇಲ್ಲೊಂದು ಸಮಸ್ಯೆಯಿತ್ತು. ಕಂಪ್ಯೂಟರ್ ಅಥವಾ ಇ-ಬುಕ್ ರೀಡರುಗಳ ವ್ಯಾಪ್ತಿ ಸೀಮಿತವಾದದ್ದು. ಅವುಗಳಿಗೆ ಹೋಲಿಸಿದಾಗ ಮೊಬೈಲ್ ದೂರವಾಣಿಗಳ ಸಂಖ್ಯೆ ಅಗಾಧವೆನ್ನಿಸುವಷ್ಟು ದೊಡ್ಡದು. ಇಂಟರ್‌ನ್ಯಾಷನಲ್ ಟೆಲಿಕಮ್ಯೂನಿಕೇಶನ್ ಯೂನಿಯನ್ ಪ್ರಕಟಿಸಿರುವ ಅಧ್ಯಯನ ವರದಿಯ ಪ್ರಕಾರ ೨೦೧೪ರ ವೇಳೆಗೆ ಪ್ರಪಂಚದಲ್ಲಿರುವ ಮೊಬೈಲ್ ಸಂಪರ್ಕಗಳ ಸಂಖ್ಯೆ ಪ್ರಪಂಚದ ಜನಸಂಖ್ಯೆಯನ್ನೇ ಮೀರುವ ನಿರೀಕ್ಷೆಯಿದೆ. ರಾಷ್ಟ್ರಗಳ ಲೆಕ್ಕ ನೋಡಿದರೆ ರಷ್ಯನ್ ಒಕ್ಕೂಟದಲ್ಲಿ ಈ ಪರಿಸ್ಥಿತಿ ಈಗಾಗಲೇ ಸೃಷ್ಟಿಯಾಗಿಬಿಟ್ಟಿದೆಯಂತೆ!

ಇರಲಿ, ನಮ್ಮ ಬದುಕಿನ ಮೇಲೆ ಮೊಬೈಲ್ ದೂರವಾಣಿಗಳ ಪರಿಣಾಮವನ್ನು ಅರಿಯಲು ನಾವೇನು ಅಂಕಿಅಂಶಗಳನ್ನೇ ನೆಚ್ಚಿಕೊಳ್ಳಬೇಕಿಲ್ಲ. ಈಗಂತೂ ಪುಟ್ಟಮಕ್ಕಳ ಕೈಯಲ್ಲೂ ಮೊಬೈಲ್ ಮಿಂಚುತ್ತಿರುತ್ತದೆ; ಅಯ್ಯೋ ಮೊಬೈಲ್ ಕೊಟ್ಟರೆ ಮಗು ಸ್ವಲ್ಪ ಹೊತ್ತಾದರೂ ತೆಪ್ಪಗಿರುತ್ತೆ ಬಿಡಿ ಎನ್ನುವ ಅಪ್ಪ ಅಮ್ಮಂದಿರೂ ಇಲ್ಲದಿಲ್ಲ!

ಮೊಬೈಲ್ ದೂರವಾಣಿ ಹೇಗೂ ಎಲ್ಲರ ಕೈಯಲ್ಲೂ ಇದೆ ಎಂದಮೇಲೆ ಅದರಿಂದ ಒಂದಷ್ಟು ಉಪಯೋಗಗಳನ್ನೂ ಪಡೆದುಕೊಳ್ಳಬಹುದಲ್ಲ, ಪುಸ್ತಕಗಳನ್ನು ಮೊಬೈಲಿನಲ್ಲಿ ಅಳವಡಿಸುವ ಪ್ರಯತ್ನಗಳು ನಡೆದಿರುವುದು ಈ ಉದ್ದೇಶದಿಂದಲೇ.
ಬಹುರಾಷ್ಟ್ರೀಯ ದೈತ್ಯರ ದುಬಾರಿ ಮೊಬೈಲುಗಳ ಜೊತೆಗೆ ಇದೀಗ ನಮ್ಮ ಹಿತ್ತಲಿನ ಹಲವು ಸಂಸ್ಥೆಗಳೂ ಅತಿ ಕಡಿಮೆ ದರದಲ್ಲಿ ಸ್ಮಾರ್ಟ್‌ಫೋನುಗಳನ್ನು ಪರಿಚಯಿಸಿವೆ. ಇಂತಹ ಎಲ್ಲಬಗೆಯ ಫೋನುಗಳನ್ನು ಬಳಸುವವರಲ್ಲೂ ಹೀಗೆ ಓದುವ ಹವ್ಯಾಸವನ್ನು ಬೆಳೆಸುವ ಅನೇಕ ಆಪ್(app)ಗಳು ದೊರಕುತ್ತಿವೆ. ಅಮೆಜಾನ್ ಕಿಂಡಲ್, ಗೂಗಲ್ ಬುಕ್ಸ್ ಮುಂತಾದ ಸೇವೆಗಳಷ್ಟೆ ಅಲ್ಲದೆ ಸಾವಿರಾರು ಇ-ಪುಸ್ತಕಗಳನ್ನು ಉಚಿತವಾಗಿ ಒದಗಿಸುತ್ತಿರುವ ಪ್ರಾಜೆಕ್ಟ್ ಗುಟೆನ್‌ಬರ್ಗ್‌ನಂತಹ ತಾಣಗಳದ್ದೂ ಮೊಬೈಲ್ ಆವೃತ್ತಿ ಇದೆ.

ಇಂತಹ ಸೇವೆಗಳಲ್ಲಿ ಬಹುಪಾಲು ದೊಡ್ಡವರಿಗೇನೋ ಇಷ್ಟವಾಗಬಹುದು. ಆದರೆ ಬಣ್ಣ-ಚಿತ್ರ ಏನೂ ಇಲ್ಲದ ಪುಟಗಟ್ಟಲೆ ಪಠ್ಯದೊಡನೆ ಮಕ್ಕಳನ್ನು ಸೆಳೆಯುವುದು ಸಾಧ್ಯವಿಲ್ಲವಲ್ಲ! ಹಾಗಾಗಿ ತಂತ್ರಾಂಶ ತಯಾರಕರು ಮಕ್ಕಳಿಗೆಂದೇ ವಿಶೇಷ ಆಪ್‌ಗಳನ್ನು ಸೃಷ್ಟಿಸಿದ್ದಾರೆ. ಆಪಲ್ ಸಂಸ್ಥೆಯ ಆಪ್ ಸ್ಟೋರ್ ಇರಲಿ, ಆಂಡ್ರಾಯ್ಡ್ ಸಾಧನಗಳ ಗೂಗಲ್ ಪ್ಲೇ ಸ್ಟೋರ್ ಇರಲಿ, ಮಕ್ಕಳ ಪುಸ್ತಕಗಳಿಗಾಗಿ ಹುಡುಕಿದರೆ ಅನೇಕ ಆಪ್‌ಗಳು (ಬಹುತೇಕ ಉಚಿತ) ನಮ್ಮ ಕಣ್ಣಿಗೆ ಬೀಳುತ್ತವೆ. ಇಂತಹ ಆಪ್‌ಗಳು ಮಕ್ಕಳಿಗೆ ಕತೆ ಹೇಳಲು ಪಠ್ಯವನ್ನಷ್ಟೆ ಬಳಸುವ ಬದಲಿಗೆ ಚಿತ್ರ, ಧ್ವನಿ, ಅನಿಮೇಶನ್ ಇತ್ಯಾದಿಗಳನ್ನೆಲ್ಲ ಆಕರ್ಷಕವಾಗಿ ಬಳಸಿಕೊಳ್ಳುತ್ತವೆ. ಇಲ್ಲಿ ಉಚಿತವಾಗಿ ದೊರಕುವ ಪುಸ್ತಕಗಳನ್ನೆಲ್ಲ ಮಕ್ಕಳು ಓದಿಮುಗಿಸಿದ ಮೇಲೆ ಇನ್ನಷ್ಟನ್ನು ಖರೀದಿಸುವ ಆಯ್ಕೆಯೂ ಪೋಷಕರಿಗಿದೆ.

ಕಂಪ್ಯೂಟರ್, ಇಬುಕ್ ರೀಡರ್, ಮೊಬೈಲ್ - ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವ ಸುಖವನ್ನು ಬಹುಶಃ ಇವು ಯಾವುದೂ ಕೊಡಲಾರವು ಎಂದೇ ಇಟ್ಟುಕೊಳ್ಳೋಣ. ಆದರೆ ತಂತ್ರಜ್ಞಾನದಿಂದ ಓದುವ ಸಂಸ್ಕೃತಿ ನಾಶವಾಯಿತು ಎಂದು ಹೇಳದಿರಲು ಬೇಕಾದ ಕೆಲ ಪ್ರಯತ್ನಗಳು ಇಂದು ನಡೆಯುತ್ತಿವೆ. ಈ ಪ್ರಯತ್ನಗಳಿಂದ ಓದುವ ಅಭ್ಯಾಸ ಇನ್ನಷ್ಟು-ಮತ್ತಷ್ಟು ಹೆಚ್ಚಿದರೆ ಅದಕ್ಕಿಂತ ಖುಷಿಯ ವಿಷಯ ಬೇರೇನಿದೆ?
 
ಮೇ ೧೭, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge