ತುಂಬಾ ಹಿಂದೆ ಗ್ರೀಸ್ ದೇಶದಲ್ಲಿ ಒಬ್ಬ ರಾಜನಿದ್ದನಂತೆ. ಅವನು ಹೊಸದೊಂದು ಕಿರೀಟ ಮಾಡಿಸಿದ್ದ. ಆ ಕಿರೀಟ ಸಿದ್ಧವಾಗಿ ಬಂದ ಮೇಲೆ ಅವನಿಗೇಕೋ ಆ ಕಿರೀಟದ ಚಿನ್ನದಲ್ಲಿ ಕಲಬೆರಕೆ ಆಗಿರಬಹುದು ಎಂಬ ಸಂಶಯ ಬಂತು; ಈ ಸಂಶಯ ಯಾರು ನಿವಾರಿಸುತ್ತೀರೋ ಅವರಿಗೆ ಬಹುಮಾನ ಕೊಡುತ್ತೇನೆ ಎಂದು ಸವಾಲು ಹಾಕಿದ.
ಅವನ ಆಸ್ಥಾನದಲ್ಲಿ ಆರ್ಕಿಮಿಡಿಸ್ ಎಂಬ ವ್ಯಕ್ತಿ ಇದ್ದ. ಏನಾದರೂ ಮಾಡಿ ರಾಜನ ಸಂಶಯ ನಿವಾರಿಸಲೇಬೇಕು ಎಂದುಕೊಂಡ ಆತ ಅದರ ಬಗ್ಗೆ ಯೋಚಿಸಲು ಶುರುಮಾಡಿದ. ವಸ್ತುವಿನ ಸಾಂದ್ರತೆಗೆ ತಕ್ಕಂತೆ ಅದರ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ ಎನ್ನುವುದು ಅವನಿಗೆ ಗೊತ್ತಿತ್ತು. ಆದರೆ ಬೆರಕೆ ಲೋಹದಲ್ಲಿ ಯಾವ ಲೋಹ ಎಷ್ಟು ಮಿಶ್ರವಾಗಿದೆ ಎಂಬುದನ್ನು ಹೇಗೆ ಗುರುತಿಸಬೇಕು ಎನ್ನುವುದು ಗೊತ್ತಿರಲಿಲ್ಲ.
ಅವನು ಅದೇ ವಿಷಯದ ಬಗ್ಗೆ ಹಗಲೂ ರಾತ್ರಿ ಯೋಚಿಸುತ್ತಲೇ ಇದ್ದ. ಅವನ ಏಕಾಗ್ರತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಸ್ನಾನ ಮಾಡುವಾಗಲೂ ಅದನ್ನೇ ಯೋಚಿಸುತ್ತ ಸ್ನಾನದ ತೊಟ್ಟಿಗೆ ಇಳಿದ.
ಅವನು ನೀರಿನ ತೊಟ್ಟಿಯೊಳಕ್ಕೆ ಇಳಿದ ತಕ್ಷಣ ಒಂದಷ್ಟು ನೀರು ಹೊರಚೆಲ್ಲಿತು. ಅದನ್ನು ನೋಡಿದ ತಕ್ಷಣ ಆರ್ಕಿಮಿಡಿಸ್‌ಗೆ ಅವನ ಗಾತ್ರ ಹಾಗೂ ತೊಟ್ಟಿಯಿಂದ ಹೊರಚೆಲ್ಲಿದ ನೀರಿನ ನಡುವೆ ಇರುವ ಸಂಬಂಧ ಹೊಳೆಯಿತು. ಈ ಖುಷಿಯಲ್ಲಿ ಆತ ಬಟ್ಟೆಯನ್ನೂ ಹಾಕಿಕೊಳ್ಳದೆ ಯುರೇಕಾ! ಯುರೇಕಾ!! (ನಾನು ಕಂಡುಹಿಡಿದೆ! ನಾನು ಕಂಡುಹಿಡಿದೆ!!) ಎಂದು ಕೂಗುತ್ತ ರಾಜನ ಹತ್ತಿರ ಓಡಿಹೋದನಂತೆ.
ಒಂದೇ ತೂಕದ ಚಿನ್ನದ ಗಾತ್ರಕ್ಕೂ ಕಲಬೆರಕೆಯಾಗಿದ್ದ ಲೋಹದ ಗಾತ್ರಕ್ಕೂ ವ್ಯತ್ಯಾಸವಿರುತ್ತದೆ. ಆರ್ಕಿಮಿಡಿಸ್ ಮೊದಲು ಕಿರೀಟದಷ್ಟೇ ತೂಕದ ಶುದ್ಧ ಚಿನ್ನ ತೆಗೆದುಕೊಂಡು ನೀರಿನಲ್ಲಿ ಮುಳುಗಿಸಿದಾಗ ಅದೆಷ್ಟು ನೀರನ್ನು ಹೊರಚೆಲ್ಲುತ್ತದೆ ಎನ್ನುವುದನ್ನು ಪತ್ತೆಮಾಡಿದ; ಆನಂತರ ಕಿರೀಟವನ್ನು ಮುಳುಗಿಸಿ ಅದು ಹೊರಚೆಲ್ಲಿದ ನೀರನ್ನು ಅಳೆದ. ಇದೆರಡರಲ್ಲೂ ವ್ಯತ್ಯಾಸ ಕಂಡುಬಂದಿದ್ದರಿಂದ ಕಿರೀಟದಲ್ಲಿ ಬಳಸಿದ ಚಿನ್ನ ಕಲಬೆರಕೆಯಾಗಿತ್ತು ಎನ್ನುವುದು ಆರ್ಕಿಮಿಡಿಸ್‌ಗೆ ಗೊತ್ತಾಯಿತು.
ಬಟ್ಟೆಹಾಕಿಕೊಳ್ಳದೆ ಸ್ನಾನದ ಮನೆಯಿಂದ ಓಡಿಹೋದ ಘಟನೆ ನಿಜವಾಗಿಯೂ ನಡೆದಿತ್ತೋ ಇಲ್ಲವೋ, ಆದರೆ ಆರ್ಕಿಮಿಡಿಸ್ ಈ ವಿಷಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದಂತೂ ನಿಜ.
ನೀವು ಯಾವಾಗಲಾದರೂ ಕೆರೆ ಅಥವಾ ಬಾವಿಯೊಳಕ್ಕೆ ಕಲ್ಲೆಸೆದಿದ್ದೀರಾ? ಆ ಕಲ್ಲು ಎಷ್ಟೇ ಚಿಕ್ಕದಾಗಿದ್ದರೂ ತಕ್ಷಣ ಮುಳುಗಿಹೋಗುತ್ತದೆ ತಾನೆ? ಆದರೆ ಸಾವಿರಾರು ಕೆಜಿ ತೂಗುವ ಹಡಗುಗಳು ಮಾತ್ರ ನೀರಿನಲ್ಲಿ ಮುಳುಗದೆ ತೇಲುವುದು ಹೇಗೆ? ಈ ಪ್ರಶ್ನೆಗೆ ಆರ್ಕಿಮಿಡಿಸ್ ಸಿದ್ಧಾಂತ ಉತ್ತರ ನೀಡುತ್ತದೆ. ಹಡಗು ತನ್ನ ತೂಕಕ್ಕೆ ಸರಿಸಮನಾದಷ್ಟು ನೀರನ್ನು ಮಾತ್ರವೇ ತನ್ನ ಬುಡದಿಂದ ಆಚೀಚೆತಳ್ಳುವುದರಿಂದ ಅದು ಮುಳುಗದೆ ತೇಲುತ್ತದೆ ಎಂದು ಆತ ವಿವರಿಸಿದ.
ಆಯಾಸವಿಲ್ಲದೆ ಭಾರವಾದ ವಸ್ತುಗಳನ್ನು ಎತ್ತಲು ಅನುಕೂಲ ಮಾಡಿಕೊಡುವ ಸನ್ನೆ ತತ್ವವನ್ನೂ ಆತನೇ ಕಂಡುಹಿಡಿದದ್ದು ಎಂದು ಹೇಳುತ್ತಾರೆ. ಈ ಮಹಾನ್ ವ್ಯಕ್ತಿ ಕ್ರಿ. ಪೂ. ೨೮೭ರಿಂದ ೨೧೨ರ ನಡುವೆ ಜೀವಿಸಿದ್ದ.
ಚಿಣ್ಣರ ಚೇತನ ಗೋಡೆ ಪತ್ರಿಕೆಯ ೨೦೧೧ ಜನವರಿ ೧-೧೫ ಸಂಚಿಕೆಯಲ್ಲಿ ಪ್ರಕಟವಾದ ಲೇಖನ
1 ಕಾಮೆಂಟ್:
ಧನ್ಯವಾದಗಳು ತಮಗೆ...... ನನಗೆ ತುಂಬಾ ಸಹಾಯ ವಾಯಿತು
ಕಾಮೆಂಟ್ ಪೋಸ್ಟ್ ಮಾಡಿ