ಮಂಗಳವಾರ, ಜನವರಿ 4, 2011

ಆಕಾಶದಿಂದ ಅಂತರಜಾಲ

ಟಿ ಜಿ ಶ್ರೀನಿಧಿ

೨೦೧೦ರ ಕೊನೆಯ ವಾರದಲ್ಲಿ ಕಾ-ಸ್ಯಾಟ್ ಎಂಬ ಯುರೋಪಿನ ಉಪಗ್ರಹ ಉಡಾವಣೆಯಾಯಿತು. ಉಪಗ್ರಹದ ಉಡಾವಣೆಯಲ್ಲೇನೂ ವಿಶೇಷವಿಲ್ಲವಾದರೂ ಈ ಉಪಗ್ರಹದ ಉದ್ದೇಶವೇ ವಿಶೇಷವಾದದ್ದು - ಯುರೋಪಿನ ಗ್ರಾಮೀಣ ಪ್ರದೇಶಗಳಿಗೆ ಈ ಉಪಗ್ರಹದ ಮೂಲಕ ಅಂತರಜಾಲ ಸೌಲಭ್ಯ ಒದಗಿಸಲಾಗುತ್ತದೆ.

ಇಂಟರ್‌ನೆಟ್ ಅಥವಾ ಅಂತರಜಾಲ ಎನ್ನುವುದು ಅಪಾರ ಸಂಖ್ಯೆಯ ಗಣಕಗಳನ್ನು ಒಂದುಗೂಡಿಸುವ ಒಂದು ಬೃಹತ್ ಜಾಲ. ಯಾವುದೇ ಒಂದು ಗಣಕ ಈ ಬೃಹತ್ ಜಾಲದ ಅಂಗ ಎನ್ನಿಸಿಕೊಳ್ಳಬೇಕಾದರೆ ಅದು ಅಂತರಜಾಲದೊಡನೆ ಸಂಪರ್ಕ ಹೊಂದಿರಬೇಕು. ಹಾಗಿದ್ದಾಗ ಮಾತ್ರ ಅದು ಅಂತರಜಾಲದ ಇತರ ಗಣಕಗಳೊಡನೆ ಸಂಪರ್ಕ ಏರ್ಪಡಿಸಿಕೊಳ್ಳಲು ಸಾಧ್ಯ. ಅಂತೆಯೇ ಆ ಗಣಕದ ಬಳಕೆದಾರರು - ಅಂದರೆ ನಾವು - ವಿಶ್ವದ ವಿವಿಧೆಡೆಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ವಿಶ್ವವ್ಯಾಪಿ ಜಾಲದ ಮೂಲಕ ಪಡೆದುಕೊಳ್ಳುವುದು ಕೂಡ ಸಾಧ್ಯವಾಗುತ್ತದೆ.

ಇಂತಹ ಅಂತರಜಾಲ ಸಂಪರ್ಕಗಳಲ್ಲಿ ಹಲವಾರು ಬಗೆ - ಬ್ರಾಡ್‌ಬ್ಯಾಂಡ್, ಡಯಲ್‌ಅಪ್, ಜಿಪಿಆರ್‌ಎಸ್ ಹೀಗೆ. ಈ ಸಾಲಿಗೆ ಹೊಸ ಸೇರ್ಪಡೆಯೇ ಮೇಲೆ ಹೇಳಿದ ಉಪಗ್ರಹ ಅಂತರಜಾಲ ಸಂಪರ್ಕ.

* * *

ಹೆಚ್ಚಿನ ಬ್ಯಾಂಡ್‌ವಿಡ್ತ್‌ನೊಡನೆ ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವ ಬ್ರಾಡ್‌ಬ್ಯಾಂಡ್ ಸೇವೆ ಸದ್ಯಕ್ಕೆ ಅಂತರಜಾಲ ಸಂಪರ್ಕಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದದ್ದು. ದೂರಸಂಪರ್ಕ ಕ್ಷೇತ್ರದ ಪ್ರಮುಖ ಸಂಸ್ಥೆಗಳಷ್ಟೇ ಅಲ್ಲದೆ ಹಲವಾರು ಕೇಬಲ್ ಟೀವಿ ಸಂಸ್ಥೆಗಳೂ ಇಂತಹ ಅತಿವೇಗದ ಅಂತರ ಜಾಲಸಂಪರ್ಕವನ್ನು ಒದಗಿಸುತ್ತಿವೆ.

ವೈರ್‌ಲೆಸ್ ಫಿಡೆಲಿಟಿ ಅಥವಾ 'ವೈ-ಫಿ' ಮಾನಕ ಆಧಾರಿತ ತಂತ್ರಜ್ಞಾನ ಬಳಸಿ ವೈರ್‌ಲೆಸ್ (ನಿಸ್ತಂತು) ಅಂತರಜಾಲ ಸಂಪರ್ಕ ಹೊಂದುವುದು ಕೂಡ ಸಾಧ್ಯವಿದೆ. ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಸಂಸ್ಥೆಗಳ ಮೂಲಕ ಲಭ್ಯವಿರುವ ವೈ-ಫಿ ಮೋಡೆಮ್ ಬಳಸಿ ನಮ್ಮ ಮನೆಯಲ್ಲೇ ಇಂತಹ ಸಂಪರ್ಕ ದೊರಕುವಂತೆ ಮಾಡಿಕೊಳ್ಳಬಹುದು.

ದೂರವಾಣಿಯನ್ನು ಬಳಸಿ ಕೆಲಸಮಾಡುವ ಡಯಲ್-ಅಪ್ ಸಂಪರ್ಕ ತೀರಾ ಇತ್ತೀಚಿನವರೆಗೂ ವ್ಯಾಪಕ ಬಳಕೆಯಲ್ಲಿತ್ತು. ದೂರವಾಣಿ ತಂತಿಗಳ ಮೂಲಕ ಮಾಹಿತಿ ವಿನಿಮಯ ನಡೆಸುವ ಈ ಬಗೆಯ ಸಂಪರ್ಕ ಈಚೆಗೆ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ.

ಮೊಬೈಲ್ ದೂರವಾಣಿಗಳ ಮೂಲಕವೂ ಅಂತರಜಾಲ ಸಂಪರ್ಕ ಹೊಂದುವುದು ಸಾಧ್ಯ. ಈಗಂತೂ ಈ ತಂತ್ರಜ್ಞಾನವನ್ನು ಬಳಸಿ ಅಂತರಜಾಲ ಸಂಪರ್ಕ ಒದಗಿಸುವ ಅದೆಷ್ಟೋ ಬಗೆಯ ಮೊಬೈಲ್ ದೂರವಾಣಿಗಳು ಹಾಗೂ ನಿಸ್ತಂತು ಅಂತರಜಾಲ ಸಂಪರ್ಕ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

* * *

ಸಾಮಾನ್ಯವಾಗಿ ಲಭ್ಯವಿರುವ ಅಂತರಜಾಲ ಸಂಪರ್ಕಗಳ ಸಮಸ್ಯೆ ಎಂದರೆ ಅವುಗಳ ವ್ಯಾಪ್ತಿ. ಎಲ್ಲೆಲ್ಲಿ ದೂರವಾಣಿ ಅಥವಾ ಕೇಬಲ್ ಜಾಲ ಇಲ್ಲವೋ ಅಲ್ಲಿ ಅಂತರಜಾಲ ಸಂಪರ್ಕವೂ ಇರುವುದಿಲ್ಲ. ಇನ್ನು ಡಯಲ್-ಅಪ್ ಅಥವಾ ಮೊಬೈಲ್ ಅಂತರಜಾಲ ಸಂಪರ್ಕ ಕೆಲವೆಡೆಗಳಲ್ಲಿ ಇದ್ದರೂ ಸಂಪರ್ಕದ ವೇಗ ಬಹಳ ಕಡಿಮೆ ಇರುತ್ತದೆ.

ಈ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನವೇ ಉಪಗ್ರಹ ಅಂತರಜಾಲ ಸಂಪರ್ಕ. ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ಉಪಗ್ರಹದ ಮೂಲಕ ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವುದು ಇದರ ವೈಶಿಷ್ಟ್ಯ. ಇದು ನಮಗೆಲ್ಲ ಪರಿಚಿತವಾಗಿರುವ ಡಿಟಿಹೆಚ್ ಸೇವೆಯಂತೆಯೇ ಪುಟಾಣಿ ಡಿಷ್ ಆಂಟೆನಾ ಬಳಸಿಕೊಂಡು ಕೆಲಸಮಾಡುತ್ತದೆ. ಈ ಸಂಪರ್ಕ ಬೇರೆಲ್ಲ ಬಗೆಯ ಅಂತರಜಾಲ ಸಂಪರ್ಕಗಳಿಗಿಂತ ತುಸು ದುಬಾರಿಯಾದರೂ ನಾಗರಹೊಳೆ ಕಾಡಿನ ಮಧ್ಯದಲ್ಲಿರುವ ಹಳ್ಳಿಗೂ ಹೆಚ್ಚುವೇಗದ ಅಂತರಜಾಲ ಸಂಪರ್ಕ ದೊರಕುವಂತಾಗಲು ಇದೊಂದು ಉತ್ತಮ ಮಾರ್ಗ.

ಪ್ರಪಂಚದ ಅನೇಕ ಕಡೆಗಳಲ್ಲಿ ಉಪಗ್ರಹ ಅಂತರಜಾಲ ಈಗಾಗಲೇ ಲಭ್ಯವಿದೆ; ಯುರೋಪಿನಲ್ಲಿ ನಡೆದಿರುವ ಪ್ರಯತ್ನ ಇದರ ವ್ಯಾಪ್ತಿಯನ್ನು ಇನ್ನೂ ದೊಡ್ಡದಾಗಿ ವಿಸ್ತರಿಸಲು ಹೊರಟಿದೆ. ಈ ಪ್ರಯತ್ನ ಯಶಸ್ವಿಯಾದರೆ ನಮ್ಮ ಹಳ್ಳಿಗಳಲ್ಲಿ ಡಿಟಿಹೆಚ್ ಆಂಟೆನಾಗಳು ಕಾಣಿಸುವಷ್ಟೇ ಸಾಮಾನ್ಯವಾಗಿ ಉಪಗ್ರಹ ಅಂತರಜಾಲದ ಡಿಷ್ ಆಂಟೆನಾಗಳೂ ಕಾಣಸಿಗುವ ದಿನ ದೂರವಿಲ್ಲ!

ಜನವರಿ ೪, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

savitri ಹೇಳಿದರು...

Sir, I like your articles very much. Please write more.

badge