ಮಂಗಳವಾರ, ಫೆಬ್ರವರಿ 19, 2008

ನಿಷೇಧಿತ ಪುರಾತತ್ತ್ವ : ಏನಿದರ ಮಹತ್ವ?

ಟಿ.ಆರ್. ಅನಂತರಾಮು

ನಿಮ್ಮ ಹಳೆಯ ಮನೆಯಲ್ಲಿ ಮುತ್ತಾತನ ಒಂದು ಚಿತ್ರವಿದೆಯೆನ್ನಿ. ಅದನ್ನು ನೀವು ಬಾಲ್ಯದಿಂದಲೇ ನೋಡುತ್ತ ಬಂದಿದ್ದೀರಿ. ಅಪ್ಪನನ್ನು ಕೇಳಿ, ಅವರ ತಾತ ಬದುಕಿದ್ದ ಪರಿ, ಅವರ ಆರೋಗ್ಯ, ವರ್ತನೆ, ದೈಹಿಕ ಚಹರೆಗಳು, ಬದುಕಿದ್ದಾಗ ಅವರು ಮಾಡಿದ ಸಾಧನೆ, ಅವರ ಒಡನಾಡಿಗಳು ಇಂಥ ಹತ್ತು ಹಲವು ಕುತೂಹಲಕಾರಿ ವಿಚಾರಗಳ ಬಗ್ಗೆ ನಿಮಗೊಂದು ಕಲ್ಪನೆ ಬಂದಿರುತ್ತದೆ. ವಾಸ್ತವವಾಗಿ ನಿಮ್ಮ ಅಪ್ಪ ಕೂಡ ಅವರ ತಾತನನ್ನು ನೋಡಿರಲಿಲ್ಲ. ಅವರಪ್ಪ ಹೇಳಿದ್ದನ್ನು ಕೇಳಿಸಿಕೊಂಡು ಒಂದಷ್ಟು ಸೇರಿಸಿ ಒಂದು ಚಿತ್ರಣವನ್ನು ನಿಮ್ಮ ಮುಂದೆ ಕೊಟ್ಟಿದ್ದಾರೆ ಎಂದು ಭಾವಿಸೋಣ. ಏನೇ ಇರಲಿ, ಮುತ್ತಾತನ ಬಗ್ಗೆ ಒಂದು ಬಗೆಯ ಪ್ರೀತಿ, ಗೌರವ, ಆದರ ಎಲ್ಲವೂ ನಿಮ್ಮ ಭಾವನೆಯಲ್ಲಿ ಬೆರೆತಿರುತ್ತದೆ.
ಹೀಗೆಯೇ ಇರುವ ಮನೋಸ್ಥಿತಿಯಲ್ಲಿ ಒಂದು ದಿನ ನಿಮ್ಮ ಹಳೇ ಮನೆಯ ಮೂಲೆ ಮಡುಕು ತಡಕುತ್ತೀರಿ. ದೂಳಾಗಿರುವ ಬಾಗಿಲವಾಡವನ್ನು ಒರೆಸುತ್ತೀರಿ. ಅಲ್ಲಿ ಮೋಡಿ ಅಕ್ಷರದಲ್ಲಿ ಸುಬ್ಬಣ್ಣ ಎಂದಿರುತ್ತದೆ. ಕೆತ್ತಿದ್ದು ೧೭೯೯ರಲ್ಲಿ ಎಂದು ಬರೆದಿರುತ್ತದೆ. ಬಾಗಿಲುವಾಡದ ಮೇಲೆ ಅವರದೇ ಆದ ಶೈಲಿಯಲ್ಲಿ ಹೂವು ಅರಳುತ್ತಿರುವುದನ್ನು ಕೆತ್ತಿದ್ದಾರೆ, ಬಳ್ಳಿಗೆ ಎಲೆಗಳಿವೆ, ನೀವು ವಿಸ್ಮಯಪಡುತ್ತೀರಿ. ೧೭೯೯ ಎಂಬುದು ನಿಮ್ಮ ಮನಸ್ಸಿಗೆ ನಾಟುತ್ತದೆ. ಏಕೆಂದರೆ ಅದು ಟಿಪ್ಪು ಸುಲ್ತಾನ್ ಸತ್ತ ವರ್ಷ. ಇದರರ್ಥ? ಆ ಹೊತ್ತಿಗೆ ನಿಮ್ಮ ಮುತ್ತಾತ ಬದುಕಿದ್ದರು. ಅಂದರೆ ೧೮ನೇ ಶತಮಾನದಲ್ಲೇ ಇದ್ದರು. ಅದೇಗೆ ಸಾಧ್ಯ? ಒಂದೊಂದು ತಲೆಮಾರಿಗೂ ಸಾಧಾರಣ ೩೦ ವರ್ಷ ಎಂದು ನೀವು ನಿಮ್ಮದೇ ಆದ ಲೆಕ್ಕಾಚಾರದಿಂದ ಹಿಮ್ಮುಖವಾಗಿ ಲೆಕ್ಕ ಹಾಕುತ್ತ ಹೋಗುವಿರಿ. ಅಂದರೆ ೯೦ ವರ್ಷಗಳಷ್ಟು ಹಿಂದಕ್ಕೆ ಹೋದರೆ ನಿಮ್ಮ ಮುತ್ತಾತ ಯೌವನಾವಸ್ಥೆಯಲ್ಲಿದ್ದ ಕಾಲ ಎನ್ನೋಣ. ಆದರೆ ಏಕೋ ಈ ಲೆಕ್ಕಾಚಾರವೇ ತಾಳೆಯಾಗುತ್ತಿಲ್ಲವಲ್ಲ. ಹಿಂದಿನ ಒಂದು ನೂರು ವರ್ಷವನ್ನು ಹೇಗೆ ಭರ್ತಿ ಮಾಡುವುದು? ಮುತ್ತಾತ ಬದುಕಿದ್ದು ಸುಳ್ಳೆ? ಮತ್ತೆ ಅಲ್ಲಿ ಕೆತ್ತಿರುವುದು? ನಿಮ್ಮ ವಿಶ್ವಾಸ ಅಲ್ಲಾಡುತ್ತದೆ. ಲೆಕ್ಕಾಚಾರದಲ್ಲಿ ಏನೋ ಎಡವಟ್ಟಾಗಿದೆ ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತದೆ. ಇದರಿಂದ ಕುತೂಹಲ ತಳೆದು ಇನ್ನಷ್ಟು ತಡಕಾಡುತ್ತೀರಿ. ನಿಮ್ಮ ಮುತ್ತಾತನ ಕಾಲದ ಸಾಮಾನು ಸರಂಜಾಮುಗಳಿಗಾಗಿ ಹುಡುಕುತ್ತೀರಿ. ಮುತ್ತಾತ ಬಳಸಿದ ಜರ್ಮನ್ ಲಾಟೀನೊಂದು ಸಿಗುತ್ತದೆ. ಅದರಲ್ಲೂ ೧೭೮೦ ಎಂದು ಇದೆ. ಸಂದೂಕದ ಮೇಲೆ ಯಾವುದೋ ದೇವರ ಚಿತ್ರವನ್ನು ಬಿಡಿಸಿದ್ದಾರೆ. ಕೆಳಗೆ ಅಲ್ಲೂ ಸುಬ್ಬಣ್ಣ ಎಂದಿದೆ. ಇಸವಿ ೧೭೭೫ ಎಂದಿದೆ. ಈಗ ನೀವು ಸಂಪೂರ್ಣವಾಗಿ ಗೊಂದಲಗೊಳ್ಳುತ್ತೀರಿ. ಅಪ್ಪ ಹೇಳಿದ್ದು ಸುಳ್ಳೆ? ಇಷ್ಟಾದರೂ ಅವರ ತಾತನ ಬಗ್ಗೆ ಸುಳ್ಳು ಹೇಳಿದರೆ ಏನು ಅವರಿಗೆ ಲಾಭ? ಯೋಚಿಸುತ್ತ ಹೋದಂತ ಗಲಿಬಿಲಿಯೇ ಹೆಚ್ಚಾಗುತ್ತದೆ. ಕೊನೆಗೆ ಸತ್ಯ ಶೋಧನೆಗೆಂದು ನೀವೇ ಇಳಿದು ವಂಶವೃಕ್ಷದ ಎಲ್ಲ ಹಂತಗಳನ್ನೂ ಕೂಲಂಕಷವಾಗಿ ನೋಡುತ್ತೀರಿ. ನಿಮ್ಮ ವಂಶಸ್ಥರಲ್ಲಿ ಅದೆಷ್ಟೋ ಸುಬ್ಬಣ್ಣರಿರಬಹುದೆ? ಈ ಸುಬ್ಬಣ್ಣ ಮುತ್ತಾತನ ಅಪ್ಪ ಕೂಡ ಸುಬ್ಬಣ್ಣ ಆಗಿರಬಹುದೆ. ಯಾರು ನಿಜವಾದ ಸುಬ್ಬಣ್ಣ. ಹಾಗಿದ್ದಲ್ಲಿ ಅಪ್ಪನ ತಾತ ಸುಬ್ಬಣ್ಣ ಇವರಾಗಿದ್ದರೆ ಅಪ್ಪ ಯಾಕೆ ಕನಿಷ್ಠ ಅವರು ಬದುಕಿದ್ದ ಕಾಲವನ್ನು ಗಮನಿಸದೆ ನಿರ್ಲಕ್ಷಿಸಿದ್ದಾರೆ. ತನ್ನ ವಂಶಸ್ಥರ ಬಗ್ಗೆ ಹೀಗೆ ನಿರ್ಲಕ್ಷಿಸಬಹುದೆ?
ಇಂಥ ಒಂದು ಪರಿಸ್ಥಿತಿಯನ್ನು ಕಲ್ಪಿಸಿಕೊಂಡರೆ ಮೈಕೇಲ್ ಕ್ರೆಮೋ ಮತ್ತು ರಿಚರ್ಡ್ ಥಾಮ್ಪ್‌ಸನ್ ಅವರು ಬರೆದಿರುವ ‘ಫರ್‌ಬಿಡನ್ ಆರ್ಕಿಯಾಲಜಿ’ ಕೃತಿಯ ಹೂರಣ ಮನನವಾಗುತ್ತದೆ. ೧೯೯೩ರಲ್ಲಿ ಈ ಲೇಖಕರು ಇದನ್ನು ಪ್ರಕಟಿಸಿದಾಗ ವಿಜ್ಞಾನ ವಲಯದಲ್ಲಿ ಕಾವೇರಿತ್ತು; ಒಂದು ರೀತಿಯ ಷಾಕ್ ನೀಡಿತ್ತು. ನಮ್ಮ ಗ್ರಹಿಕೆಯ ಬುಡವನ್ನೇ ಅಲ್ಲಾಡಿಸಿದೆ ಎಂದು ವೃತ್ತಿಪರರು ಹೇಳತೊಡಗಿದರು. ಅವರು ಪ್ರತಿಪಾದಿಸಿದ್ದಾದರೂ ಏನು? ಮೂಲತಃ ಮಾನವ ವಿಕಾಸದ ಕಾಲಘಟ್ಟಗಳನ್ನೇ ಅವರು ಪ್ರಶ್ನಿಸಿದ್ದರು. ಇಬ್ಬರ ಪೈಕಿ ರಿಚರ್ಡ್ ಥಾಮ್ಪ್‌ಸನ್ ಗಣಿತಜ್ಞ, ಅದರಲ್ಲೂ ಜೀವಿ ವಿಜ್ಞಾನಕ್ಕೆ ಗಣಿತ ಅನ್ವಯಿಸುವ ಪರಿಣತ. ದೂರಗ್ರಾಹಿ ತಂತ್ರ, ಭೂವಿಜ್ಞಾನ, ಭೌತವಿಜ್ಞಾನದಲ್ಲಿ ತನಗೆ ಪರಿಶ್ರಮವಿದೆಯೆಂದು ಆತ್ಮವಿಶ್ವಾಸದಿಂದ ಹೇಳುವಾತ. ಮೈಕೇಲ್ ಕ್ರೆಮೋ ಕ್ಯಾಲಿಫೋರ್ನಿಯ ವಾಸಿ. ೧೯೭೭ರಿಂದಲೂ ಲಾಸ್‌ಏಂಜಲೀಸ್‌ನ ಭಕ್ತಿವೇದಾಂತ ಬುಕ್ ಪಬ್ಲಿಷಿಂಗ್ ಟ್ರಸ್ಟ್‌ನಲ್ಲಿ ಸಂಪಾದಕ ಮತ್ತು ಲೇಖಕ. ಈ ಇಬ್ಬರು ಕೈಹಾಕಿದ್ದು ಬಲು ಕ್ಲಿಷ್ಟವಾದ, ಸಂಕೀರ್ಣವಾದ, ಗೊಂದಲ ಗೊಜಲುಗಳಿಂದ ತುಂಬಿದ್ದ, ಅರಿವಿಗೆ ಸವಾಲು ಹಾಕುವ ಮಾನವ ವಿಕಾಸಕ್ಷೇತ್ರಕ್ಕೆ. ಸಂಕ್ಷಿಪ್ತದಲ್ಲಿ ಅದು ‘ಸುಬ್ಬಣ್ಣ ಮುತ್ತಾತನ ಕಥೆ’ ಇದ್ದಂತೆ.
‘ಫರ್‌ಬಿಡನ್ ಆರ್ಕಿಯಾಲಿಜಿ’ಯಲ್ಲಿ ಇವರು ಮಂಡಿಸಿರುವ ವಿಚಾರ ಸರಣಿಗಳೇನು? ಹೊರನೋಟಕ್ಕೆ ಇವು ಬರೀ ಮೇಲುಸ್ತರದವು ಎನ್ನಿಸಬಹುದು. ಆದರೆ ಅವರು ಎತ್ತುವ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಕೊಡಲು ವಿಜ್ಞಾನಿಗಳು ತಿಣುಕಿರುವುದೂ ಉಂಟು, ತಿರುಗೇಟು ಕೊಟ್ಟಿರುವುದೂ ಉಂಟು.
‘ಫರ್‌ಬಿಡನ್ ಆರ್ಕಿಯಾಲಜಿ’ ಕೃತಿಯನ್ನು ಬಹುಮಂದಿಗೆ ತಲಪಿಸಲು, ಅದರ ಬಾಹುಳ್ಯವನ್ನು ಇನ್ನಷ್ಟು ಹ್ರಸ್ವಗೊಳಿಸಿ ಈಗ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಎಂಬ ಕೃತಿಯನ್ನು ಅವರೇ ತಂದಿದ್ದಾರೆ. ಮೂಲ ಆವೃತ್ತಿಯಂತೆ ಇದೂ ಕೂಡ ವಿವಾದದ ಸುಳಿಗಳನ್ನು ಎಬ್ಬಿಸಿದೆ; ಇಂದಿಗೂ ಎಬ್ಬಿಸುತ್ತಿದೆ. ಈ ಕೃತಿಯಲ್ಲಿ ಅವರು ಬೊಟ್ಟು ಮಾಡುವ ಸಂಗತಿಗಳ ಒಂದಷ್ಟು ಮಾದರಿಗಳನ್ನು ನೋಡಬಹುದು. ಕೃತಿಯ ಪ್ರವೇಶದಲ್ಲೇ ಅವರು ಕಾಣಿಸಿರುವ ವಾಕ್ಯಗಳಿವು :
‘೧೯೭೯ರಲ್ಲಿ ಪೂರ್ವ ಆಫ್ರಿಕದ ತಾಂಜೇನಿಯದ ಲೆತೊಲಿ ಎಂಬ ತಾಣದಲ್ಲಿ ಸಂಶೋಧಕರು ಮಾನವ ಹೆಜ್ಜೆ ಗುರುತುಗಳನ್ನು ಜ್ವಾಲಾಮುಖಿಯ ಬೂದಿಯಲ್ಲಿ ಪತ್ತೆಹಚ್ಚಿದರು. ವಿಶೇಷವೆಂದರೆ ಈ ಬೂದಿ ಗಟ್ಟಿಯಾಗಿದ್ದು ೩೬ ಲಕ್ಷ ವರ್ಷಗಳ ಹಿಂದೆ. ಇವಕ್ಕೂ ಆಧುನಿಕ ಮಾನವನ ಹೆಜ್ಜೆ ಗುರುತುಗಳಿಗೂ ಅಂಥ ವ್ಯತ್ಯಾಸವೇನಿಲ್ಲವೆಂದು ಮಾನವ ಶಾಸ್ತ್ರ ಪರಿಣತರು ಅಧ್ಯಯನದ ಮೂಲಕ ದೃಢಪಡಿಸಿದರು. ಅಂದರೆ? ಅದರ ಅರ್ಥ ಸುಸ್ಪಷ್ಟ. ೩೬ ಲಕ್ಷ ವರ್ಷಗಳ ಹಿಂದೆಯೇ ಈಗಿನಂತೆ ಪಾದಗಳಿದ್ದ ಮಾನವ ಆ ಜಾಗದಲ್ಲೇ ಅಡ್ಡಾಡಿದ್ದ. ಚಿಕಾಗೋ ವಿಶ್ವವಿದ್ಯಾಲಯದ ಆರ್. ಎಚ್. ಟಟಲ್ ಎಂಬಾತ ೩೬ ಲಕ್ಷ ವರ್ಷಗಳ ಹಿಂದಿನ ಅಸ್ಟ್ರಲೋಪಿತಿಕಸ್ ಎಂಬ ವಾನರನ ಕಾಲಿನ ಮೂಳೆಗಳನ್ನು ಅಧ್ಯಯನ ಮಾಡಿ ಅವು ನಿಚ್ಚಳವಾಗಿ ಏಪ್ ತರಹದ ಜೀವಿಗಳಷ್ಟೇ ಹೊರತು ಲೆತೊಲಿಯದನ್ನು ಇವಕ್ಕೆ ಹೋಲಿಸಲಾಗುವುದಿಲ್ಲ ಎಂದು ಹೇಳಿದ್ದ. ಆದರೆ ೧೯೯೦ರಲ್ಲಿ ನ್ಯಾಚುರಲ್ ಹಿಸ್ಟರಿ ಎಂಬ ಸಂಶೋಧನಾ ಪತ್ರಿಕೆಗೆ ಬರೆಯುತ್ತ ‘ಏಕೋ ಒಂದು ಬಗೆಯ ಗೊಂದಲವಾಗುತ್ತಿದೆ’ ಎಂದು ಹೇಳಿದ್ದ. ಈ ಎರಡೂ ಅಭಿಪ್ರಾಯಗಳನ್ನು ಬದಿಗಿಟ್ಟು ಇನ್ನೊಂದು ಅಭಿಪ್ರಾಯವನ್ನು ನಾವು ಪರಿಗಣಿಸಲು ಸಾಧ್ಯವಿಲ್ಲವೆ? ಪೂರ್ವ ಆಫ್ರಿಕಾದಲ್ಲಿ ೩೬ ಲಕ್ಷ ವರ್ಷಗಳ ಹಿಂದೆ ಅಂಗರಚನೆಯ ದೃಷ್ಟಿಯಿಂದ ಆಧುನಿಕ ಮಾನವನನ್ನು ಹೋಲುವ ಜೀವಿಗಳು ಏಕೆ ಇದ್ದಿರಬಾರದು? ಏಪ್ ತರಹದ ಜೀವಿಗಳೊಂದಿಗೆ ಅವು ಸಹ ಜೀವನ ನಡೆಸಿರಬಾರದೇಕೆ? ಈ ಸಾಧ್ಯತೆಯನ್ನು ಏಕೆ ಪರಿಗಣಿಸಬಾರದು? ಒಂದೇ ಒಂದು ಅಡ್ಡ ಬರುವುದೆಂದರೆ ಮಾನವ ವಿಕಾಸದ ಬಗ್ಗೆ ಈಗಿರುವ ನಮ್ಮ ಗ್ರಹಿಕೆ ಇಂಥ ಸತ್ಯವನ್ನು ನಿಷೇಧಿಸಿಬಿಡುತ್ತದೆ.
ಹಾಗಾದರೆ ಡಾರ್ವಿನ್ ಪ್ರತಿಪಾದಿಸಿದ ‘ವಿಕಾಸ ಸಿದ್ಧಾಂತ’ ಹುಸಿ ಪರಿಕಲ್ಪನೆಯೆ? ಈ ಇಬ್ಬರೂ ಹೌದು ಎನ್ನುತ್ತಾರೆ. ಅದು ವಸ್ತುನಿಷ್ಠವಲ್ಲ ಎಂದು ಹೇಳುವ ಧೈರ್ಯ ತೋರುತ್ತಾರೆ. ಅವರು ಅನೇಕ ಸಾಕ್ಷಿಗಳತ್ತ ಬೊಟ್ಟು ಮಾಡುತ್ತಾರೆ. ೧೮೮೦ರಲ್ಲಿ ಜೇಡಿ ವಿಟ್ನಿ ಎಂಬ ಕ್ಯಾಲಿಫೋರ್ನಿಯ ರಾಜ್ಯದ ಭೂವಿಜ್ಞಾನಿ ಅಲ್ಲಿನ ಚಿನ್ನದ ಗಣಿಯಿಂದ ಸಂಗ್ರಹಿಸಿದ ಪ್ರಾಚ್ಯವಸ್ತುಗಳನ್ನು ಕುರಿತು ತಪಶೀಲು ವರದಿ ತಯಾರಿಸಿ ಟಿಪ್ಪಣಿ ಬರೆದ. ಗಣಿಯ ಕೂಪದೊಳಗೆ ಕಲ್ಲು ಅರೆಯುವ ಕುಟಾಣಿ, ಒರಳು, ಭರ್ಜಿ ರೂಪದ ಶಿಲೆ ದೊರೆತಿದ್ದವು. ಅವನ್ನು ಆತ ಬಗೆದು ತೆಗೆದದ್ದು ಕೆನೆಗಟ್ಟಿದ ಲಾವಾರಸದ ಸ್ತರದಿಂದ. ಈ ಸ್ತರಗಳ ವಯೋಮಾನ ಒಂಬತ್ತು ದಶಲಕ್ಷ ವರ್ಷಗಳಿಂದ ಹಿಡಿದು ೫೫ ದಶಲಕ್ಷ ವರ್ಷಗಳವರೆಗೆ. ಸ್ಮಿತ್‌ಸೋನಿಯನ್ ಸಂಸ್ಥೆಯ ಹೋಮ್ಸ್ ಎಂಬ ತಜ್ಞ ಇದನ್ನು ಕುರಿತು ಬರೆದ ಮಾತುಗಳಿವು :
‘ನಾವು ಇಂದು ಮಾನವ ವಿಕಾಸವನ್ನು ಅರ್ಥೈಸಿಕೊಂಡಿರುವ ಬಗೆಯನ್ನೇ ವಿಟ್ನಿ ಅನುಸರಿಸಿದ್ದರೆ ಬಹುಶಃ ತಾನು ಪತ್ತೆ ಹಚ್ಚಿದ ಈ ಸಾಕ್ಷಿಗಳನ್ನು ಬಹಿರಂಗಪಡಿಸಲು ಆತ ಹಿಂಜರಿಯುತ್ತಿದ್ದ.’
ಇದರ ಅರ್ಥ ಏನು? ನಾವು ನಂಬಿರುವ ಸಾಕ್ಷಿಗಳಿಗೆ ವಾಸ್ತವ ಸಾಕ್ಷಿಗಳು ತಾಳೆಯಾಗದಿದ್ದಾಗ ಅವು ಎಷ್ಟೇ ಪ್ರಬಲ ಸಾಕ್ಷಿಗಳಾಗಿರಲಿ ಅವುಗಳನ್ನು ದೂರ ತಳ್ಳಿಬಿಡುವುದೋ, ಮರೆಮಾಚಿಬಿಡುವುದೋ ವಿಜ್ಞಾನಿಗಳ ಸ್ವಭಾವ. ಇದನ್ನೇ ಕ್ರೆಮೋ ಮತ್ತು ಥಾಮ್ಪ್‌ಸನ್ ತಮ್ಮ ಕೃತಿಯಲ್ಲಿ ‘ಜ್ಞಾನವನ್ನು ಸೋಸುವ’ ಕೈಚಳಕ ಎಂದು ಕರೆದಿದ್ದಾರೆ.
‘ಫರ್‌ಬಿಡನ್ ಆರ್ಕಿಯಾಲಜಿ’ಯ ಸಾರಸಂಗ್ರಹವಾದ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಹೊರತಂದಾಗಿನಿಂದ ವಿಜ್ಞಾನಿಗಳಲ್ಲೇ ಎರಡು ಬಣವಾಗಿದೆ. ಈ ಕೃತಿಯುದ್ದಕ್ಕೂ ಮಾನವ ವಿಕಾಸದ ಬಗ್ಗೆ ನಮ್ಮ ಗ್ರಹಿಕೆಯೇ ಅಪೂರ್ಣ ಎಂದು ವಾದಿಸುತ್ತ ಅದಕ್ಕೆ ಪೂರಕವಾಗಿ ಹಲವು ಸಾಕ್ಷಿಗಳನ್ನು ನೀಡುತ್ತಾರೆ. ಈ ಸಾಕ್ಷಿಗಳ ಬಗ್ಗೆಯೇ ವಿಜ್ಞಾನಿಗಳಲ್ಲಿ ಭಿನ್ನ ಮತವಿದೆ. ವಿಕಾಸ ವಾದದ ಬುಡಕ್ಕೇ ಕೈಹಾಕಿರುವ ಲೇಖಕರು ತಮ್ಮ ವಾದ ಸರಣಿಯನ್ನು ಎಷ್ಟು ಕೌಶಲವಾಗಿ ಬೆಳೆಸುತ್ತಾರೆ ಎಂದು ಅರಿಯುವ ಮೊದಲು ವಿಕಾಸವಾದ ಕುರಿತು ಪ್ರಚಲಿತವಿರುವ ನಮ್ಮ ಗ್ರಹಿಕೆಯ ಬಗ್ಗೆ ಕೆಲವು ಅಂಶಗಳನ್ನು ಸ್ಥೂಲವಾಗಿ ಪರಿಗಣಿಸಬಹುದು.
ಚಾರ್ಲ್ಸ್ ಡಾರ್ವಿನ್ ‘ಆರಿಜನ್ ಆಫ್ ದಿ ಸ್ಪೀಸೀಸ್’ (ಜೀವಿಸಂಕುಲಗಳ ಉಗಮ) ಎಂಬ ಕೃತಿಯನ್ನು ೧೮೫೯ರಲ್ಲಿ ಬರದಾಗ ಮಾನವ ವಿಕಾಸದ ಬಗ್ಗೆ ಆತ ದೀರ್ಘವಾಗಿ ಏನೂ ಚರ್ಚಿಸಿರಲಿಲ್ಲ. ೧೮೭೧ರಲ್ಲಿ ‘ಡಿಸೆಂಟ್ ಆಫ್ ಮ್ಯಾನ್’ ಎಂಬ ಕೃತಿ ಬರೆದು ಅದರಲ್ಲಿ ಮಾನವ ವಿಕಾಸವನ್ನು ಕುರಿತೇ ಹೆಚ್ಚು ಚರ್ಚಿಸಿದ್ದ. ಮನುಷ್ಯನಿಗೆ ಇಲ್ಲಿ ಅಂದರೆ ವಿಕಾಸದ ದೃಷ್ಟಿಯಿಂದ ವಿಶೇಷ ಸ್ಥಾನವನ್ನೇನೂ ಕಲ್ಪಿಸಲಾಗುವುದಿಲ್ಲ ಎಂದು ಹೇಳಿದ್ದ. ಏಪ್ ತರಹದ ಜೀವಿಯ ಮೂಲದಿಂದ ಒಂದು ಕವಲೊಡೆದು ಮಾನವ ವಿಕಾಸವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದ. ಅದೇ ತಿಳಿವಿನ ಹಿನ್ನೆಲೆಯಲ್ಲಿ ಮಾನವ ವಿಕಾಸದ ಬೇರೆ ಬೇರೆ ಕಾಲಘಟ್ಟಗಳನ್ನು ಮಾನವ ಶಾಸ್ತ್ರಜ್ಞರು ಗುರುತಿಸಿದ್ದರು. ಇವರ ಅಧ್ಯಯನದ ರೀತ್ಯ ಏಪ್ ತರಹದ ಜೀವಿ ೩೮ ದಶಲಕ್ಷ ವರ್ಷಗಳ ಹಿಂದೆ ಅಂದರೆ ಭೂವಿಜ್ಞಾನದ ಕಾಲಪಟ್ಟಿಯ ರೀತ್ಯ ಆಲಿಗೋಸೀನ್ ಎಂಬ ಕಾಲದಲ್ಲಿ ಭೂಮಿಯ ಮೇಲೆ ಕಾಣಿಸಿಕೊಂಡಿತ್ತು. ಸ್ವಲ್ಪಮಟ್ಟಿಗೆ ಮನುಷ್ಯನನ್ನು ಹೋಲುವ ಏಪ್ ಕಾಣಿಸಿಕೊಂಡದ್ದು ಮಯೋಸೀನ್ ಕಾಲದಲ್ಲಿ. ಅಂದರೆ ಈಗಿನಿಂದ ಹಿಂದಕ್ಕೆ ಐದು ದಶಲಕ್ಷ ವರ್ಷಗಳಿಂದ ಪ್ರಾರಂಭಿಸಿ, ೨೫ ದಶಲಕ್ಷ ವರ್ಷಗಳವರೆಗೆ. ಇಂಥ ಜೀವಿಯನ್ನು ಮಾನವ ಶಾಸ್ತ್ರಜ್ಞರು ಡ್ರಯೋಪಿತಿಕಸ್ ಎನ್ನುತ್ತಾರೆ. ಶಿಲಾಸ್ತರಗಳಲ್ಲಿ ಹುದುಗಿರುವ ಜೀವ್ಯವಶೇಷಗಳನ್ನು ಅಧ್ಯಯನ ಮಾಡಿದ ತಜ್ಞರು ಹೇಳುವುದೆಂದರೆ ‘ಮಾನವನನ್ನು ಹೋಲುವ ಏಪ್‌ಗಳು (ಪ್ರೈಮೇಟ್ಸ್) ನೆಟ್ಟಗೆ ನಿಂತು ನಡೆದಾಡುವುದನ್ನು ಪ್ರಾರಂಭಿಸಿದ್ದು ಪ್ಲಿಯೋಸೀನ್ ಕಾಲದಲ್ಲಿ ಅಂದರೆ ಈಗ್ಗೆ ಐದು ದಶಲಕ್ಷ ವರ್ಷಗಳ ಹಿಂದೆ. ಈ ಜೀವಿಯೇ ಅಸ್ಟ್ರಲೋಪಿತಿಕಸ್. ನಾಲ್ಕರಿಂದ ಐದು ಅಡಿ ಎತ್ತರದ, ೩೦೦ ರಿಂದ ೬೦೦ ಸಿ.ಸಿ. ಕಪಾಲ ಸಾಮರ್ಥ್ಯದ, ಮಾನವನಿಗೆ ಬಹು ಸಮೀಪದ ಅಸ್ಟ್ರಲೋಪಿತಿಕಸ್‌ನ ಲಕ್ಷಣವೆಂದರೆ ಅದು ಕತ್ತಿನಿಂದ ಕೆಳಕ್ಕೆ ಮನುಷ್ಯನಂತಿತ್ತು, ಶಿರ ಮಾತ್ರ ಏಪ್ ಹೋಲುತ್ತಿತ್ತು ಎನ್ನುತ್ತಾರೆ. ಅಸ್ಟ್ರಲೋಪಿತಿಕಸ್, ವಿಕಾಸವಾಗುತ್ತಿದ್ದ ಒಂದು ಮಜಲಿನಲ್ಲಿ ಒಂದು ಕವಲು ಹೋಮೋ ಹ್ಯಾಬಿಲಿಸ್ ಎನ್ನುವ ಪ್ರಭೇದಕ್ಕೆ ಅವಕಾಶ ನೀಡಿತು - ೨೦ ಲಕ್ಷ ವರ್ಷಗಳ ಹಿಂದೆ. ಅಂದರೆ ಪ್ಲಿಯಿಸ್ಟೋಸಿನ್ ಯುಗದ ಆರಂಭದಲ್ಲಿ. ಹೋಮೋ ಹ್ಯಾಬಿಲಿಸ್ ಸ್ವಲ್ಪಮಟ್ಟಿಗೆ ಅಸ್ಟ್ರಲೋಪಿತಿಕಸ್‌ನನ್ನು ಹೋಲುತ್ತಿತ್ತು. ಆದರೆ ಕಪಾಲದ ಸಾಮರ್ಥ್ಯ ೬೦೦ರಿಂದ ೭೦೦ ಸಿ.ಸಿ. ೧೫ ಲಕ್ಷ ವರ್ಷಗಳ ಹಿಂದೆ ಹೋಮೋ ಹ್ಯಾಬಿಲಿಸ್‌ನಿಂದ ಇನ್ನೊಂದು ಪ್ರಭೇದ ಹೋಮೋ ಎರಕ್ಟಸ್ ವಿಕಾಸವಾಯಿತು. ಇದನ್ನೇ ನಾವು ಜಾವಾ ಮನುಷ್ಯ, ಪೀಕಿಂಗ್ ಮನುಷ್ಯ ಎಂದು ಕರೆಯುತ್ತೇವೆ. ಐದರಿಂದ ಆರು ಅಡಿ ಎತ್ತರದ ಜೀವಿ, ೭೦೦ರಿಂದ ೧೩೦೦ ಸಿ.ಸಿ. ಕಪಾಲ ಸಾಮರ್ಥ್ಯ. ನೆಟ್ಟಗೆ ನಿಂತು ಎರಡೂ ಕಾಲಿನ ಮೇಲೆ ನಿಲ್ಲಬಲ್ಲ ಶಕ್ತಿ ಹೋಮೋ ಎರಕ್ಟಸ್‌ಗೆ ಇತ್ತು. ಕಳೆದ ಎರಡುಲಕ್ಷ ವರ್ಷಗಳ ಹಿಂದಿನವರೆಗೆ ಇವು ಆಫ್ರಿಕ, ಏಷ್ಯ, ಯೂರೋಪಿನಲ್ಲಿ ನೆಲೆಯಾಗಿದ್ದುವು. ಪ್ರಾಗ್ ಮಾನವ ಶಾಸ್ತ್ರಜ್ಞರ ಊಹೆಯಂತೆ ಆಧುನಿಕ ಮಾನವ ಹೋಮೋಸೇಪಿಯನ್(ಮತಿವಂತ ಮಾನವ), ಹೋಮೋ ಎರಕ್ಟಸ್‌ನಿಂದ ವಿಕಾಸಗೊಂಡ ಜೀವಿ. ಅಂದಾಜು ಕಾಲ ೩,೦೦,೦೦೦ ದಿಂದ ೪,೦೦,೦೦೦ ವರ್ಷಗಳ ಹಿಂದಿನವರೆಗೆ. ಆಧುನಿಕ ಮಾನವ ನೇರವಾಗಿ ವಿಕಾಸವಾದದ್ದು ನಿಯಾಂಡ್ರತಲ್ ಮಾನವನಿಂದ ಎನ್ನುತ್ತಾರೆ. ಇವನು ಬಾಳಿದ್ದು ಪ್ಲಿಸ್ಟೋಸೀನ್ ಯುಗದ ಉತ್ತರಾರ್ಧದಲ್ಲಿ; ಕೊನೆಯ ಹಿಮಯುಗ ಪ್ರಾರಂಭವಾಗುವ ಮೊದಲು. ೫೦,೦೦೦ ವರ್ಷಗಳ ಹಿಂದೆ ಈ ಪ್ರಭೇದ ಗತವಂಶಿಯಾಯಿತು. ಇವನ ನಂತರದ ಪೀಳಿಗೆ ಕ್ರೋ ಮ್ಯಾಗ್ನಾನ್ - ಶರೀರ ರಚನೆಯಿಂದ ಇನ್ನಷ್ಟು ವಿಕಾಸವಾದ ಜೀವಿ. ೪೦,೦೦೦ ವರ್ಷಗಳ ಹಿಂದೆ ಇವನ ಬಾಳು.
ಕ್ರೆಮೋ ಮತ್ತು ಥಾಮ್ಪ್‌ಸನ್ ಹೇಳುತ್ತಾರೆ : ಅಸ್ಟ್ರಲೋಪಿತಿಕಸ್‌ನಿಂದ ಹೋಮೋ ಹ್ಯಾಬಿಲಿಸ್, ಇದರಿಂದ ಹೋಮೋ ಎರಕ್ಟಸ್, ಅದರಿಂದ ಆಧುನಿಕ ಹೋಮೋಸೇಪಿಯನ್ ಹೇಗೆ ಹಂತ ಹಂತಗಳಲ್ಲಿ ವಿಕಾಸವಾದುವು ಎಂಬುದನ್ನು ಯಾವ ಮಾನವ ಶಾಸ್ತ್ರಜ್ಞರು ನಿಚ್ಚಳವಾಗಿ ಗುರುತಿಸಿಲ್ಲ. ನಮ್ಮ ಪಳೆಯುಳಿಕೆಯ ದಾಖಲೆಯೇ ಅಪೂರ್ಣ. ಮಯೋಸೀನ್ ಯುಗದ ಏಪ್‌ಗಳನ್ನು ಪ್ಲಿಯೋಸೀನ್ ತಲೆಮಾರಿನೊಡನೆ ಕೊಂಡಿಕೂಡಿಸಲಾಗಿಲ್ಲ. ಕೇವಲ ನಾಲ್ಕರಿಂದ ಎಂಟು ದಶಲಕ್ಷ ವರ್ಷಗಳ ಅವಧಿಯ ಚರಿತ್ರೆಯನ್ನು ಪುನಾರಚಿಸಲು ತಿಣುಕಾಡುತ್ತಿದ್ದೇವೆ. ಇದು ಜೀವಿ ವಿಜ್ಞಾನದ ಮಿತಿಯೂ ಹೌದು. ವಿಕಾಸವಾದ ಸಂಪೂರ್ಣವಾಗಿ ಸತ್ಯವಲ್ಲ. ಅದು ಶಿಥಿಲ ಬುನಾದಿಯ ಮೇಲೆ ನಿಂತಿದೆ ಎನ್ನುತ್ತಾರೆ. ಮಾನವ ನಿರ್ಮಿತ ವಸ್ತುಗಳ ವಯೋನಿರ್ಧಾರಕ್ಕೆ ಬಳಸುವ ಕಾರ್ಬನ್-೧೪ ತಂತ್ರಜ್ಞಾನ ಕೂಡ ದೋಷಪೂರಿತ. ಮಾದರಿಗಳು ಕಲುಷಿತವಾಗಿರುವುದನ್ನು ಬಹುಮಂದಿ ಕಡೆಗಣಿಸುತ್ತಾರೆ. ಹೀಗಾಗಿ ಪಡೆಯುವ ಫಲಿತಾಂಶವೇ ವೈಪರೀತ್ಯದಿಂದ ಕೂಡಿರುತ್ತದೆ. ಎಂದೇ ವಯೋಮಾನದ ಅಂಕೆಅಂಶಗಳು ನಿಜಕ್ಕೂ ನಂಬುವಂತಹದಲ್ಲ. ಪ್ರಾಚೀನ ಮಾನವ ಶಾಸ್ತ್ರ ಅಧ್ಯಯನದ ಬಹುದೊಡ್ಡ ಕೊರತೆ ಎಂದರೆ ಅದು ವಸ್ತುನಿಷ್ಠವಲ್ಲ, ಬದಲು ವರದಿನಿಷ್ಠ.
ಇಂದಿನ ವಿಜ್ಞಾನದ ಪ್ರಗತಿಯನ್ನು ಬಹು ಗಂಭೀರವಾಗಿಯೇ ಪ್ರಶ್ನಿಸುವ ಕ್ರೆಮೋ ಮತ್ತು ಥಾಮ್ಪ್‌ಸನ್ ಯಾವ ಬಗೆಯ ಮಾಹಿತಿಗಳತ್ತ ಬೊಟ್ಟು ಮಾಡುತ್ತಾರೆ ಎನ್ನುವುದು ಕುತೂಹಲಕರವೇ. ಅಂಗರಚನ ಶಾಸ್ತ್ರದನ್ವಯ ಆಧುನಿಕ ಮಾನವ ಹತ್ತು ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಎಂದು ಭಾವಿಸಿದರೂ ಅಂದರೆ ಡ್ರಯೋಪಿತಿಕಸ್ ನಿರ್ವಂಶವಾಗಿ ೪೦ ಲಕ್ಷ ವರ್ಷಗಳು ಕಳೆದ ಮೇಲೆ ಎಂದು ಒಪ್ಪಿಕೊಂಡರೂ ಇದಿಷ್ಟೇ ಸಾಕು ಮಾನವ ವಿಕಾಸದ ಬಗ್ಗೆ ಅವೆಷ್ಟು ಗೊಂದಲಗಳಿವೆ ಎಂದು ಸಾರಲು. ಡಾರ್ವಿನ್ ‘ಜೀವಿ ಸಂಕುಲಗಳ ಉಗಮ’ ಕೃತಿಯನ್ನು ಬರೆದ ಮೇಲೆ ಅನೇಕ ಹೊಸ ಸಾಕ್ಷಿಗಳು ದೊರೆಯುತ್ತಿವೆ. ಆದರೆ ವಿಜ್ಞಾನಿಗಳ ಅವಜ್ಞೆ ವಾಸ್ತವತೆಯನ್ನು ಮರೆಮಾಡುತ್ತಲೇ ಬಂದಿದೆ. ಸಿಕ್ಕ ಅಪೂರ್ವ ಸಾಕ್ಷಿಗಳು ತಮ್ಮ ಲೆಕ್ಕಾಚಾರಕ್ಕೆ ತಾಳೆಯಾಗದಿದ್ದರೆ ಅವನ್ನು ಆಚೆಗೆ ತಳ್ಳಿಬಿಡುವುದೇ ಒಂದು ವಂಚನೆ. ಬಹುಶಃ ಮನುಷ್ಯನ ಸ್ವಭಾವವೇ ಇದು ಎಂದು ಕಾಣುತ್ತದೆ. ಸರಳ ಸತ್ಯ ಜಾಹೀರು ಮಾಡಲು ಪ್ರಾಗ್ ಮಾನವ ಶಾಸ್ತ್ರಜ್ಞರು ಎಂಥೆಂಥವೋ ಜಟಿಲ ವಿಜ್ಞಾನ ಅನುಸರಿಸುತ್ತಾರೆ. ಇಷ್ಟಾದರೂ ಸಮಸ್ಯೆಗೆ ಪೂರ್ಣ ಪರಿಹಾರ ದೊರೆಯುತ್ತದೆಯೆ? ಎಂದಿಗೂ ಇಲ್ಲ, ಅದು ಮತ್ತಷ್ಟು ಜಟಿಲವಾಗುತ್ತಲೇ ಹೋಗುತ್ತದೆ. ಹಾಗಾದರೆ ಸತ್ಯಾನ್ವೇಷಣೆಗೆ ಬೇರೆ ಮಾರ್ಗವಿಲ್ಲವೆ? ಇದೆ. ಅದು ಬೇರೆ ಬೇರೆ ವರದಿಗಳನ್ನು ನಿಷ್ಪಕ್ಷಪಾತವಾಗಿ ಬಗೆಗಣ್ಣಿನಿಂದ ನೋಡಿ ತೌಲನಿಕವಾಗಿ ಅಧ್ಯಯನ ಮಾಡುವುದರಿಂದ ಸಾಧ್ಯ. ಅಲ್ಲಿನ ಸಾಕ್ಷಿಗಳ ಸಾತತ್ಯವನ್ನು ಪೂರ್ವಗ್ರಹವಿಲ್ಲದೆ ನೋಡುವುದು.
ಪ್ರಾಣಿಗಳ ಮೂಳೆಗಳನ್ನು ಕತ್ತರಿಸಿರುವ ಅನೇಕ ಮಾದರಿಗಳು ಮಾನವನ ಇರುವಿಗೆ ಸಾಕ್ಷಿಯಾಗಿವೆ. ೧೯ನೇ ಶತಮಾನದಿಂದ ಮೊದಲುಗೊಂಡು ಸತತವಾಗಿ ನಡೆಸಿದ ಸಂಶೋಧನೆ ಈ ನಿಟ್ಟಿನಲ್ಲಿ ಹೊಸ ಬೆಳಕನ್ನು ನೀಡಿತು. ಡಾರ್ವಿನ್ನನ ‘ಜೀವಿ ಸಂಕುಲಗಳ ಉಗಮ‘ ಕೃತಿ ಹೊರಬಂದ ನಂತರ ಅನೇಕ ವಿಜ್ಞಾನಿಗಳು ಇಂಥ ಹೊಸ ಪರಿಕರಗಳನ್ನು ಅರಸುತ್ತಾ ಹೊರಟರು. ಪ್ಲಿಯೋಸೀನ್, ಮಯೋಸೀನ್ ಮತ್ತು ಅದಕ್ಕೂ ಹಿಂದಿನ ಇಂಥ ಸಾಕ್ಷಿಗಳು ಏನು ಹೇಳುತ್ತವೆ - ವಿಜ್ಞಾನಿಗಳ ಬಣ ಹೇಳುವುದೇ ಬೇರೆ. ಮಾಂಸಾಹಾರಿ ಪ್ರಾಣಿಗಳು - ಷಾರ್ಕ್ ಮುಂತಾದವು ಈ ಮೂಳೆಗಳನ್ನು ಕತ್ತರಿಸಿರುವ ಸಾಧ್ಯತೆ ಇದೆ. ಭೂಮಿಯಲ್ಲಾಗುವ ಅನೇಕ ಬಗೆಯ ಚಲನೆಗಳು ಮೂಳೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿ ಎಂಥೆಂಥವೋ ಗುರುತುಗಳನ್ನು ಮೂಡಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ನಿಜಸ್ಥಿತಿ ಏನು? ಇಂಥ ಕತ್ತರಿಸಿದ ಮೂಳೆಗಳು ಸಿಕ್ಕಿರುವೆಡೆ ನಿಸ್ಸಂಶಯವಾದ ಕಲ್ಲಿನ ಆಯುಧಗಳೂ ಸಿಕ್ಕಿವೆ. ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಇವು ಮಾನವಕೃತವೆಂದು ದೃಢಪಟ್ಟಿವೆ. ಹಾಗಿದ್ದಲ್ಲಿ ಮಾನವ ೨೫ ದಶಲಕ್ಷ ವರ್ಷಗಳ ಹಿಂದೆ ಮುಂದುವರಿದಿದ್ದ ಎನ್ನುವ ಈ ಸಾಕ್ಷಿಗಳನ್ನು ವಿಜ್ಞಾನಿಗಳು ಏಕೆ ಕಡೆಗಣಿಸುತ್ತಾರೆ. ಫ್ರಾನ್ಸಿನ ಸೇಂಟ್ ಪ್ರಸ್ಟ್, ಕೆನಡದ ಓಲ್ಡ್ ಕ್ರೋ ನದಿ, ಕ್ಯಾಲಿಫೋರ್ನಿಯದ ಅಂಝ - ಬೊರೆಗೋ ಮರುಭೂಮಿ, ಇಟಲಿಯ ಅರ್ನೋ ನದಿದಡ, ಗ್ರೀಸ್‌ನ ಪಿಕೆರ್ಮಿ, ಟರ್ಕಿಯ ಡಾರ್ಡನೆಲಿಸ್ - ಈ ಎಲ್ಲ ಕಡೆಯೂ ಈ ಬಗೆಯ ಸಾಕ್ಷಿಗಳೇ ದೊರೆತಿವೆ ಎಂದರೆ ವಿಜ್ಞಾನಿಗಳ ನಿರ್ಲಕ್ಷ್ಯ ಎದ್ದುಕಾಣುತ್ತವೆ. ಏಕೆಂದರೆ ಮಧ್ಯ ಪ್ಲಿಯೋಸೀನ್ ಕಾಲದಲ್ಲಿ ಮನುಷ್ಯ ಇರಲಿಲ್ಲವೆಂದೇ ಪೂರ್ವಗ್ರಹವಾಗಿ ತೀರ್ಮಾನಿಸಿದರೆ ಸಾಕ್ಷಿಗಳ ಹುಡುಕಾಟವೆಲ್ಲಿರುತ್ತದೆ? ದಿವ್ಯ ನಿರ್ಲಕ್ಷ್ಯ ಹೇಗೆ ಒಂದು ಜ್ಞಾನ ಸಂಪತ್ತನ್ನೇ ಕಡೆಗಣಿಸಿಬಿಡುತ್ತದೆ!
ಕ್ರೆಮೋ ಮತ್ತು ಥಾಮ್ಪ್‌ಸನ್ ಉಲ್ಲೇಖಿಸಿರುವ ಮತ್ತೊಂದು ಪ್ರಸಂಗ ನಮ್ಮ ಗ್ರಹಿಕೆಯನ್ನೇ ಗೇಲಿಮಾಡುತ್ತದೆ. ಅಷ್ಟೇ ಅಲ್ಲ, ಗಾಬರಿ ಹುಟ್ಟಿಸುತ್ತದೆ. ಇಲ್ಲಿ ಉಲ್ಲೇಖಿಸುವ ಪ್ರಸಂಗದ ಸತ್ಯಾಸತ್ಯತೆಯನ್ನು ಅನೇಕ ಮಂದಿ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ. ಅದು ಹೀಗಿದೆ : ಇಲಿನಾಯ್ಸ್‌ನ ಮಾರಿಜನ್‌ವಿಲೇ ಎನ್ನುವ ಬಳಿ ಕಾರ್ಬಾನಿಫೆರಸ್ ಯುಗದ ಅಂದರೆ ೩೬೦ ದಶಲಕ್ಷ ವರ್ಷ ಹಿಂದಿನ ಕಲ್ಲಿದ್ದಲಿನಲ್ಲಿ ಚಿನ್ನದ ಸರ ದೊರೆತ ಪ್ರಸಂಗ.
೧೮೯೧ರ ಜುಲೈ ೧೧, ಮಾರಿಜನ್‌ವಿಲೇ ಟೈಮ್ಸ್ ಪತ್ರಿಕೆ ಪ್ರಕಟಿಸಿದ ವರದಿ : ಶ್ರೀಮತಿ ಕಲ್ ಎಂಬಾಕೆ ವಿಸ್ಮಯಕಾರಿ ವಸ್ತುವೊಂದನ್ನು ಬೆಳಕಿಗೆ ತಂದಿದ್ದಳು. ಒಲೆಗೆ ಕೆಂಡ ಮಾಡಲು ಒಂದು ತುಂಡು ಕಲ್ಲಿದ್ದಲನ್ನು ಹಾಕಬೇಕೆಂದು ಒಡೆದಾಗ ಅದು ಕೈ ಜಾರಿ ಬಿದ್ದುಹೋಯಿತು. ಅತ್ಯಂತ ಕುಸುರಿ ಕೆಲಸ ಮಾಡಿದ, ಹತ್ತು ಅಂಗುಲ ಉದ್ದದ ಚಿನ್ನದ ಸರವೊಂದು ಧೊಪ್ಪನೆ ಅದರೊಳಗಿಂದ ಬಿತ್ತು. ಬಹುಶಃ ಕಲ್ಲಿದ್ದಲು ಗಣಿ ಕಾರ್ಮಿಕರ ಅಚಾತುರ್ಯದಿಂದ ಇದನ್ನು ಬೀಳೀಸಕೊಂಡಿರಬಹುದೆ? ಆಕೆ ಮೊದಲು ಯೋಚನೆ ಮಾಡಿದ್ದು ಹೀಗೆ. ಆದರೆ ಸರ ಇದ್ದ ಭಾಗದಲ್ಲಷ್ಟೇ ಕಲ್ಲಿದ್ದಲು ಸೀಳಿಕೊಂಡಿತ್ತು. ಅದರ ಅರ್ಥ ಬೇಕೆಂದೇ ಯಾರೂ ಅದರಲ್ಲಿ ಹಾಕಿರಲಿಲ್ಲ. ಮಧ್ಯದ ಭಾಗ ಮಾತ್ರ ಕಿತ್ತುಬಂದಿತ್ತು. ಸರದ ಎರಡೂ ಕೊನೆಗಳು ಕಲ್ಲಿದ್ದಲಿಗೇ ಅಂಟಿಕೊಂಡಿದ್ದವು. ಇಲಿನಾಯ್ಸ್ ಸ್ಟೇಟ್ ಜಿಯಾಲಜಿಕಲ್ ಸರ್ವೆ ಈ ಕಲ್ಲಿದ್ದಲು ೨೬೦ - ೩೨೦ ಮಿಲಿನಯ್ ವರ್ಷ ಹಳೆಯದೆಂದು ದೃಢಪಡಿಸಿತು. ಸಾಂಸ್ಕೃತಿಕವಾಗಿ ಲೋಹಜ್ಞಾನವುಳ್ಳ ಮುಂದುವರಿದ ಜನಾಂಗ ಉತ್ತರ ಅಮೆರಿಕದಲ್ಲಿ ಆ ಹೊತ್ತಿಗೆ ಇದ್ದಿತು ಎನ್ನಲು ಇದಕ್ಕಿಂತ ಸಾಕ್ಷಿ ಬೇಕೆ ಎನ್ನುತ್ತಾರೆ ಈ ಲೇಖಕರು.
ನಿವೇಡಾದ ಶಿಲೆಯಲಿ ಬೂಟಿನ ಪಾದದ ಗುರುತು
೧೯೨೨ರ ಅಕ್ಟೋಬರ್ ೮, ನ್ಯೂಯಾರ್ಕ್ ಸಂಡೇ ಸಾಪ್ತಾಹಿಕ ವಿಭಾಗದ ಅಮೆರಿಕನ್ ವೀಕ್ಲಿ ಎಂಬುದರಲ್ಲಿ ಒಂದು ಪ್ರಸಂಗ ವರದಿಯಾಗಿತ್ತು. ಅದರ ಶೀರ್ಷಿಕೆ ‘೫೦ ಲಕ್ಷ ವರ್ಷಗಳ ಹಿಂದಿನ ಶಿಲೆಯಲ್ಲಿ ಬೂಟಿನ ಪಾದದ ಗುರುತು’.
ಕೆಲವು ದಿನಗಳ ಹಿಂದೆ ನಿವೇಡದಲ್ಲಿ ಜೀವ್ಯವಶೇಷ ಸಂಗ್ರಹಮಾಡುತ್ತಿದ್ದ ಟೀ. ರೀಡ್ ಎಂಬ ಖ್ಯಾತ ಭೂವಿಜ್ಞಾನಿಯ ಕಾಲಬಳಿ ವಿಚಿತ್ರವಾದ ಗುರುತುಳ್ಳ ಕಲ್ಲು ಕಾಣಿಸಿತು. ಶಿಲೆಯ ಮುಕ್ಕಾಲು ಭಾಗ ಮಾನವ ಪಾದದ ಗುರುತು; ಅಚ್ಚುಹೊತ್ತಿದಂತೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗಲೂ ಅದು ಸ್ಪಷ್ಟವಾಯಿತು. ಪಾದದ ಗುರುತಿನಲ್ಲಿ ಹಿಮ್ಮಡಿಯ ಭಾಗವಿತ್ತು. ಬೆರಳು ಕಡೆಯ ಭಾಗ ಗೈರಾಗಿತ್ತು. ಅಷ್ಟೇ ಅಲ್ಲ, ಗುರುತಿನ ಅಂಚಿನಲ್ಲಿ ಭದ್ರವಾಗಿ ಹೆಣೆದಿದ್ದ ದಾರದ ಗುರುತೂ ಇತ್ತು. ಆ ಶಿಲೆಯ ವಯಸ್ಸು ೫೦ ಕ್ಷ ವರ್ಷ. ರೀಡ್ ಇಡೀ ಮಾದರಿಯನ್ನೇ ನ್ಯೂಯಾರ್ಕಿಗೆ ಎತ್ತುಕೊಂಡು ಬಂದ. ಕೊಲಂಬಿಯ ವಿಶ್ವವಿದ್ಯಾಲಯದ ಭೂವಿಜ್ಞಾನದ ಅಧ್ಯಾಪಕರಿಗೆ ತೋರಿಸಿದ. ಜೊತೆಗೆ ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಪರಿಣತರು ಕೂಲಂಕಷವಾಗಿ ಪರೀಕ್ಷಿಸಿದರು. ಅದರಲ್ಲೊಬ್ಬ ಪರಿಣತ ‘ನಿಸರ್ಗ ಎಷ್ಟರಮಟ್ಟಿಗೆ ಅನುಕರಣೆ ತೋರಿಸುತ್ತದೆ ಎಂಬುದಕ್ಕೆ ಭವ್ಯ ಸಾಕ್ಷಿ ಇದು. ಇದು ಮನುಷ್ಯಕೃತ ಅಲ್ಲ’ ಎಂದು ಹೇಳಿದ. ರೀಡ್ ಹಠವಾದಿಯಂತೆ ಮತ್ತಷ್ಟು ಶೋಧಕ್ಕೆ ಹೊರಟ. ಸೂಕ್ಷ್ಮ ಛಾಯಾಚಿತ್ರ ತೆಗಿಸಿದ. ವಿಶ್ಲೇಷಣೆ ಮಾಡಿಸಿದ. ಅದು ಮನುಷ್ಯಕೃತವೆಂದು ಖಚಿತಪಡಿಸಿದ. ಇಂಥ ಸಾಕ್ಷಿಗಳನ್ನೇಕೆ ವಿಜ್ಞಾನಿಗಳು ಅಲ್ಲಗಳೆಯುತ್ತಾರೆ. ಹೀಗೆ ಕ್ರೆಮೋ ಮತ್ತು ಥಾಮ್ಪ್‌ಸನ್ ತಮ್ಮ ವಾದವನ್ನು ಮಂಡಿಸಲು ನೂರಾರು ಪ್ರಸಂಗಗಳನ್ನು ಉಲ್ಲೇಖಿಸಿದ್ದಾರೆ. ಎಲ್ಲಿ ತಾರತಮ್ಯ ಇದೆ ಎನ್ನಿಸುತ್ತದೆಯೋ ಅಂಥವುಗಳ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುತ್ತಾರೆ. ಪಿಲ್ಟ್ ಡೌನ್ ಮಾನವ ಎಂದೇ ಕುಖ್ಯಾತವಾದ ಮೋಸದ ಪ್ರಸಂಗವನ್ನೂ ತಮ್ಮ ವಾದಕ್ಕೆ ಬಳಸಿಕೊಳ್ಳುತ್ತಾರೆ. ಮನುಷ್ಯನ ತಲೆಬುರುಡೆ ಆದರೆ ಏಪ್‌ಗಿರುವಂತೆ ದವಡೆ; ಹಿಂದಿನ ಏಪ್ ತರಹದ ಜೀವಿಗೂ ಆಧುನಿಕ ಹೋಮೋಸೇಪಿಯನ್‌ಗೂ ನಡುವಿನ ಕೊಂಡಿಯೆಂದೇ ಇದನ್ನು ಕೊಂಡಾಡಲಾಗಿತ್ತು. ೧೯೦೮-೧೧ರ ನಡುವೆ ಚಾರ್ಲ್ಸ್ ಡಾವ್‌ಸನ್ ಎಂಬಾತ ಬೇಕೆಂದೇ ಕೈಚಳಕದಿಂದ ಇಂಥ ಒಂದು ಮಾದರಿಯನ್ನು ಬಚ್ಚಿಟ್ಟು ಅದನ್ನು ಬಗೆದು ನಂಬಿಸಿದ ಪರಿ ಮುಂದೆ ದೊಡ್ಡ ಹಗರಣವೆಂದೇ ಖ್ಯಾತವಾಯಿತು. ಆ ಹಗರಣದ ವಿವರಗಳ ಎಳೆಗಳನ್ನು ಚಾಚೂ ಬಿಡದ ಹಾಗೆ ದಾಖಲಿಸಿರುವ ಈ ಲೇಖಕರು ಹೇಳುತ್ತಾರೆ ‘ಇಡೀ ಆ ಮೋಸದಾಟವನ್ನು ಬದಿಗಿಟ್ಟು ಒಂದು ಅಂಶವನ್ನು ನಾವು ಸ್ಪಷ್ಟವಾಗಿ ಮನಗಾಣಬೇಕಾಗಿದೆ. ಯಾವ ಜಾಗದಲ್ಲಿ ಪಿಲ್ಟ್ ಡೌನ್ ಮಾನವನ ಬುರುಡೆಯನ್ನು ಉತ್ಖನನ ಮಾಡಲಾಯಿತೋ ಅಲ್ಲೇ ನಿಜವಾದ ಮಾನವ ಬುರುಡೆಯೂ ಸಿಕ್ಕಿದೆ. ಅದು ಮಧ್ಯ ಪ್ಲಿಯೋಸೀನ್ ಕಾಲದ ಶಿಲೆಯಲ್ಲಿ - ೨೦ ಲಕ್ಷ ವರ್ಷಗಳ ಹಿಂದಿನ ತಲೆ ಬುರುಡೆ ಅದು’. ಈ ಬಗೆಯ ಸಾಕ್ಷಿಗಳನ್ನು ವೈಜ್ಞಾನಿಕವಾಗಿ ಕ್ರೋಡೀಕರಿಸಿ ಮಾನವ ವಿಕಾಸದ ಇತಿಹಾಸವನ್ನು ಮತ್ತಷ್ಟು ಹಿಂದಕ್ಕೆ ಒಯ್ಯಲು ಏಕೆ ಮಾನವ ಶಾಸ್ತ್ರಜ್ಞರಿಗೆ ಹಿಂಜರಿಕೆ?
‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮೆನ್ ರೇಸ್’ ಕೃತಿಯಲ್ಲಿ ಕಂಡುಬರುವ ಮಾಹಿತಿಗಳ ಮಹಾಪೂರ ಹೆಸರಿಸಲೇ ಬೇಕಾದ್ದು. ಈಗಿನ ಸಿದ್ಧಾಂತಗಳನ್ನು ಅಲ್ಲಗಳೆಯುವ ನೂರಾರು ಪ್ರಸಂಗಗಳನ್ನು ಒಂದೆಡೆ ರಾಶಿ ಮಾಡಿರುವುದೇ ಈ ಕೃತಿಯ ಸೊಬಗು. ಇಂಥ ಸಾಕ್ಷಿಗಳನ್ನೆಲ್ಲ ಲೇಖಕರು ವೈಪರೀತ್ಯಗಳು ಎಂದು ವರ್ಗೀಕರಿಸುತ್ತಾರೆ. ಕೃತಿಯ ಕೊನೆಯಲ್ಲಿ ನೀಡಿರುವ ೨೦ ಪುಟಗಳಷ್ಟು ಸಾಕ್ಷಿಗಳನ್ನು ಗಮನಿಸಿದರೆ ಈ ವೈಪರೀತ್ಯದ ಪರಿಮಾಣ ಅರ್ಥವಾದೀತು. ೨೮೦೦ ಮಿಲಿಯನ್ ವರ್ಷಗಳ ಹಿಂದಿನ ಶಿಲೆಯಲ್ಲಿ ದಕ್ಷಿಣ ಆಫ್ರಿಕದಲ್ಲಿ ೧೯೮೨ರಲ್ಲಿ ಪತ್ತೆಹಚ್ಚಿತು ಎನ್ನಲಾದ ಲೋಹದಿಂದ ತಯಾರಿಸಿದ ಭರ್ಜಿಯ ಉಲ್ಲೇಖವಿದೆ. ೧೮೫೨ರಲ್ಲಿ ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯಲ್ಲಿ ೬೦೦ ಮಿಲಿಯನ್ ವರ್ಷಗಳ ಹಿಂದಿನ ಶಿಲೆಯಲ್ಲಿ ಲೋಹದ ಹೂದಾನಿ ಪತ್ತೆಯಾದುದರ ಉಲ್ಲೇಖವಿದೆ. ಈ ಜಗತ್ತಿನಲ್ಲಿ ಮತ್ಸ್ಯ ಸಾಮ್ರಾಜ್ಯವೆನ್ನಿಸಿದ ೩೬೦ - ೪೦೮ ದಶಲಕ್ಷ ವರ್ಷಗಳ ಹಿಂದಿನ ಡಿವೋನಿಯನ್ ಕಾಲದ ಕಲ್ಲುಗಣಿಯೊಂದರಿಂದ ಕಬ್ಬಿಣದ ಮೊಳೆಯನ್ನು ೧೮೪೪ರಲ್ಲೇ ಸಂಗ್ರಹಿಸಿದ ಬಗ್ಗೆ ಮತ್ತೊಂದು ಉಲ್ಲೇಖವಿದೆ. ೨೮೦ ರಿಂದ ೩೨೦ ದಶಲಕ್ಷ ವರ್ಷಗಳ ಶಿಲೆಯಲ್ಲಿ ಅಕ್ಲಾಹೋಮ್‌ನಲ್ಲಿ ಪತ್ತೆಹಚ್ಚಿದ ಬೆಳ್ಳಿವಸ್ತುವಿನ ಬಗ್ಗೆ ಉಲ್ಲೇಖವಿದೆ. ಪೆಡಂಭೂತಗಳ ಸುವರ್ಣಕಾಲ ಎನ್ನಲಾದ ೫೫ ದಶಲಕ್ಷ ವರ್ಷಗಳ ಹಿಂದಿನ ಶಿಲೆಗಳಲ್ಲಿ ಕಂಡುಬಂದ ಶಿಲಾಯುಧಗಳ ಬಗ್ಗೆ ವರದಿ ಇದೆ. ಹೀಗೆ ಇಡೀ ಕೃತಿಯಲ್ಲಿ ಬೇರೆ ಬೇರೆ ಮೂಲದಿಂದ ದೊರೆತ ಮಾಹಿತಿಗಳನ್ನು ಅತ್ಯಂತ ಕ್ರಮಬದ್ಧವಾಗಿ ದಾಖಲೆ ಮಾಡಲಾಗಿದೆ. ಶುದ್ಧ ವೈಜ್ಞಾನಿಕ ತಿಳಿವಿನ ಹಿನ್ನೆಲೆ ಇರುವವರಿಗೆ ಈ ಮಾಹಿತಿ ಗೊಂದಲ ಉಂಟುಮಾಡುವುದಂತೂ ನಿಜ. ಲಾಲ್‌ಬಾಗ್ ಕಲ್ಲನ್ನು ಪರೀಕ್ಷೆ ಮಾಡುತ್ತಿರುವಾಗ ದಿಢೀರ್ ಎಂದು ಹುಲಿಯ ಮೂಳೆಗಳು ಅದರಲ್ಲಿ ಅಂಟಿಕೊಂಡು ಸಿಕ್ಕಿದರೆ ಪಡುವ ಗಾಬರಿಯಂತೆ ಈ ಸಾಕ್ಷಿಗಳು.
ಕ್ರೆಮೋ ಮತ್ತು ಥಾಮ್ಪ್‌ಸನ್ ಅವರ ಇರಾದೆಯಾದರೂ ಏನು? ಎನನ್ನೂ ಒತ್ತಿಹೇಳಲು ಅವರು ಬಯಸಿದ್ದಾರೆ ತಮ್ಮ ಈ ವಿವಾದಿತ ಪುಸ್ತಕದಲ್ಲಿ? ಅವರ ಮಾತಿನಲ್ಲೇ : ‘ಬಹು ಪ್ರಾಚೀನ ಕಾಲದಲ್ಲಷ್ಟೇ ಅಲ್ಲ, ಈಗಲೂ ನಮ್ಮ ಎದುರಿಗೇ ಇರುವ ಸತ್ಯವೊಂದನ್ನು ಮನಗಾಣಬಹುದು. ಆದಿಮ ಮಾನವರೂಪಿ ಜೀವಿ(ಹೋಮಿನಿಡ್) ಹಾಗೂ ಅಂಗರಚನೆಯ ದೃಷ್ಟಿಯಿಂದ ಈಗಿನ ಆಧುನಿಕ ಮಾನವ ಸಹಬಾಳ್ವೆ ಮಾಡಿದ್ದರು ಎಂಬುದಕ್ಕೆ ಇಲ್ಲಿನ ಸಾಕ್ಷಿಗಳೇ ಸಾಕು. ಜೈಂಗಾಟೋಪಿತಿಕಸ್, ಅಸ್ಟ್ರಲೋಪಿತಿಕಸ್, ಹೋಮೋಎರಕ್ಟಸ್ ಮತ್ತು ನಿಯಾಂಡ್ರತಲ್ ಮಾನವ ಈಗಲೂ ದಟ್ಟ ಅರಣ್ಯಗಳಲ್ಲಿ ಭೂಮಿಯ ಬೇರೆ ಬೇರೆ ಭಾಗದಲ್ಲಿ ಬಾಳಿದ್ದಾರೆ. ಉತ್ತರ ಅಮೆರಿಕದಲ್ಲಿ ಈ ಬಗೆಯ ಪ್ರಾಣಿಗಳನ್ನು ಸ್ಯಾಸ್ಕ್ವಾಚ್ ಎಂದರೆ ಮಧ್ಯ ಏಷ್ಯದಲ್ಲಿ ಅವನ್ನು ಅಲ್ಮಾಸ್ ಎನ್ನುತ್ತಾರೆ. ಆಫ್ರಿಕ, ಚೀನ, ಆಗ್ನೇಯ ಏಷ್ಯ, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ ಇಲ್ಲೂ ಈ ಬಗೆಯ ಜೀವಿಗಳಿಗೆ ಬೇರೆ ಬೇರೆ ಹೆಸರಿದೆ. ಕಾಡು ಮನುಷ್ಯ ಎಂಬ ಹೆಸರಿನಿಂದ ಇವನ್ನೆಲ್ಲ ಕೆಲವು ತಜ್ಞರು ಗುರುತಿಸುತ್ತಾರೆ. ಈಗಿನ ವಿಜ್ಞಾನ ಹೇಳುವಂತೆ ಮನುಷ್ಯನ ಅವತಾರ ಭೂ ಇತಿಹಾಸದಲ್ಲಿ ತೀರ ಇತ್ತೀಚಿನ ವಿದ್ಯಮಾನವಲ್ಲ; ಬಹು ಪುರಾತನವಾದ್ದು. ಭಾರತದ ಪುರಾಣಗಳು ಹೇಳುವಂತೆ ಏಪ್ ತರಹದ ಅಥವಾ ಮನುಷ್ಯ ಚಹರೆಯ ಕಪಿಗಳು ಮನುಷ್ಯರೊಡನೆ ಸಹಬಾಳ್ವೆ ಮಾಡಿರುವುದೂ ಉಂಟು. ಇವಕ್ಕೆ ವೈಜ್ಞಾನಿಕ ಆಧಾರ ಒದಗಿಸುವುದು ನಮ್ಮ ಈ ಪ್ರಯತ್ನದ ಗುರಿ.’
ಬೌದ್ಧಿಕ ಜಗತ್ತು ಇವರ ಈ ಪ್ರಯತ್ನವನ್ನು ಹೇಗೆ ಸ್ವೀಕರಿಸಿದೆ. ಈ ಹಂತದಲ್ಲಿ ಅದನ್ನು ಕಾಣಿಸುವುದೂ ಇಲ್ಲಿ ಅತ್ಯವಶ್ಯ.
ಬಹುಮಂದಿ ವಿದ್ವಾಂಸರು ಈ ಕೃತಿಯನ್ನು ಕಣ್ಣು ತೆರೆಸುವ ಕೃತಿ ಎಂದಿದ್ದಾರೆ. ವಿಕಾಸವಾದದ ವಿರುದ್ಧ ಅವೆಷ್ಟೋ ಬಗೆಯ ಪುಸ್ತಕಗಳು ಬಂದಿವೆ. ವಿಕಾಸವಾದಕ್ಕೆ ತಿರುಗಿಬಿದ್ದ ಸೃಷ್ಟಿವಾದಿಗಳ ವಿಚಾರಸರಣಿಯೇ ಬೇರೆ. ಇಲ್ಲಿನ ಪ್ರತಿಪಾದನೆಯಾಗಲಿ, ಶೈಲಿಯಾಗಲಿ, ಲೇಖಕರು ಮಾಹಿತಿಯನ್ನು ಕಲೆಹಾಕಿ ಅದನ್ನು ಒಪ್ಪಿಸಿರುವ ರೀತಿಯಾಗಲಿ ಅನನ್ಯ. ಮೂಲವಿಜ್ಞಾನ, ಪುರಾತತ್ತ್ವ ಮಾಹಿತಿಗಳನ್ನು ವಿಶ್ಲೇಷಿಸುತ್ತಲೇ ತಮ್ಮ ವಾದ ಸರಣಿಯನ್ನು ಮಂಡಿಸುತ್ತಾರೆ. ವಿವಾದಿತ ಅಂಶವನ್ನು ಇಷ್ಟೊಂದು ಪರಿಪಕ್ವವಾಗಿ ನಿಭಾಯಿಸಿರುವುದು ವಿಸ್ಮಯವೇ ಸರಿ. ಯಾವುದಕ್ಕಾದರೂ ಈ ಬಗೆಯ ಮಾಹಿತಿಗಳನ್ನು ಬಳಸಿಕೊಳ್ಳಬಹುದು. ಇಲ್ಲಿ ಎತ್ತಿರುವ ಮೂಲ ಪ್ರಶ್ನೆಗಳು ಮತ್ತು ಸಾಕ್ಷಿಗಳ ವಿಚಾರ ಬಂದಾಗ ಇನ್ನಾದರೂ ಅಂಥವನ್ನು ಕಡೆಗಣಿಸುವುದು ಬೇಡ ಎಂದು ಬರೆದಿದ್ದಾನೆ ಸ್ಕಾಟ್‌ಲೆಂಡಿನ ರಾಯಲ್ ಮ್ಯೂಸಿಯಂನ ನೈಸರ್ಗಿಕ ಚರಿತ್ರೆಯ ಪರಿಣತ.
ಮಾನವ ಚರಿತ್ರೆಯನ್ನು ಒಂದು ಬೃಹತ್ ಮ್ಯೂಸಿಯಂ ಎಂದು ಭಾವಿಸುವುದಾದರೆ ಇಡೀ ಕಟ್ಟಡವೇ ಜ್ಞಾನದಿಂದ ತುಂಬಿದೆ ಎನ್ನುವುದಾದರೆ ಈಗಿನ ಸ್ಥಿತಿ ಹೇಗಿದೆಯೆಂದರೆ ಇಂಥ ಮ್ಯೂಸಿಯಂನ ಕೊಠಡಿಗಳ ಬಾಗಿಲಿಗೆ ಬೀಗ ಜಡಿದಿದ್ದಾರೆ. ವಿಜ್ಞಾನಿಗಳು ಸ್ವಯಂಪ್ರೇರಿತರಾಗಿ ಆ ಸಾಕ್ಷಿಗಳನ್ನು ತೆರೆದಿಡಬೇಕಾಗಿತ್ತು. ಬದಲು ಬೀಗ ಹಾಕುವುದರಲ್ಲೇ ಕೃತಕೃತ್ಯರಾಗಿರುವುದು ಇಂದಿನ ದುರಂತ. ತಾವು ನಂಬಿದ ಸಾಮಾನ್ಯ ನಂಬಿಕೆಗಳ ವಿರುದ್ಧ ಯಾರು ದನಿ ಎತ್ತಿದರೂ ಅವರಿಗಾಗದು. ಕ್ರೆಮೋ ಮತ್ತು ಥಾಮ್ಪ್‌ಸನ್ ಜ್ಞಾನಭಂಡಾರದ ಕೊಠಡಿಗಳಿಗೆ ಹಾಕಿದ್ದ ಬೀಗಗಳನ್ನು ಒಡೆಯುವ ಧೈರ್ಯ ತೋರಿದ್ದಾರೆ. ಇದರ ಲಾಭವೆಂದರೆ ವಿಜ್ಞಾನಿಗಳಿಗಷ್ಟೇ ಅಲ್ಲ, ಈಗ ಶ್ರೀಸಾಮಾನ್ಯನಿಗೂ ಜ್ಞಾನದ ಕೊಠಡಿಗೆ ಪ್ರವೇಶ ದೊರೆತಂತಾಗಿದೆ. ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮರ್ ರೇಸ್’ ಕೃತಿ ವಿಜ್ಞಾನಕ್ಕೆ ಆಹ್ವಾನವನ್ನು ನೀಡಿ ಹೊಸ ದಿಗಂತವನ್ನು ಪ್ರವೇಶಿಸಿ ಎಂದು ಬೊಟ್ಟುಮಾಡಿ ತೋರಿಸುತ್ತಿದೆ. ಮನುಷ್ಯನ ಉಗಮದ ಬಗ್ಗೆ ಪೂರ್ವಗ್ರಹವನ್ನು ತಿದ್ದಿಕೊಳ್ಳಿ ಎನ್ನುತ್ತದೆ ಆಫ್ರಿಕದ ‘ಪ ದ ಮ್ಯಾಗಜೈನ್’. ಇಂಥ ಅಭಿಪ್ರಾಯಗಳು ನೂರಾರಿವೆ. ಇದು ವಿಜ್ಞಾನಿಗಳನ್ನು ವಿಶೇಷವಾಗಿ ಮಾನವ ಶಾಸ್ತ್ರಜ್ಞರನ್ನು ಕೆಣಕಿದೆ, ಕೆರಳಿಸಿದೆ ಕೂಡ. ಆ ಕ್ಷೇತ್ರದಿಂದ ಟೀಕೆಗಳ ಮಹಾಪೂರವೇ ಹರಿದು ಬಂದದ್ದೂ ಉಂಟು. ಅದಕ್ಕೆ ಉತ್ತರವಾಗಿ ಇದೇ ಲೇಖಕರು ‘ಫರ್‌ಬಿಡನ್ ಆರ್ಕಿಯಾಲಜೀಸ್ ಇಂಪ್ಯಾಕ್ಟ್’ ಎನ್ನುವ ಇನ್ನೊಂದು ಹೊತ್ತಿಗೆಯನ್ನೇ ಹೊರತಂದಿದ್ದಾರೆ. ವಿಜ್ಞಾನಿಗಳ ಬಣ ಇಲ್ಲಿ ಎತ್ತಿರುವ ಪ್ರಶ್ನೆಗಳನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸದಿದ್ದರೂ ಮಾನವನ ಉಗಮವನ್ನು ಕ್ರೆಮೋ ಮತ್ತು ಥಾಮ್ಪ್‌ಸನ್ ೨೮೦೦ ದಶಲಕ್ಷ ವರ್ಷ ಹಿಂದಕ್ಕೆ ಒಯ್ಯುವುದನ್ನು ಸರ್ವಥಾ ಒಪ್ಪುವುದಿಲ್ಲ. ಭೂಮಿಯಲ್ಲಿ ಜೀವಿಯ ಉಗಮದ ಬಗ್ಗೆ ಪೃಥ್ವಿ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಪ್ರಿಕೇಂಬ್ರಿಯನ್ ಕಲ್ಪದಲ್ಲಿ ಮೊದಲು ಕಾಣಿಸಿಕೊಂಡಿದ್ದು ಬ್ಯಾಕ್ಟರೀಯ ಮತ್ತು ಪಾಚಿಯಂತಹ ಕೆಳವರ್ಗದ ಜೀವಿಗಳೇ. ನಿಜವಾದ ಅರ್ಥದಲ್ಲಿ ಇವೇ ಜೀವದ ಉಗಮದ ಪ್ರಾರಂಭಿಕ ಪ್ರತಿನಿಧಿಗಳು. ಮನುಷ್ಯರಂತಿರಲಿ, ಕೆಳವರ್ಗದ ಜೀವಿಗಳು ಹುಟ್ಟುವ ಸುಳಿವೂ ಇರಲಿಲ್ಲ. ಆದ್ದರಿಂದ ಮನುಷ್ಯನ ಪ್ರಾಚೀನತೆಯನ್ನು ಆ ಕಾಲಕ್ಕೆ ಒಯ್ಯುವುದು ಅಪರಿಪಕ್ವತೆಯ ಸಂಕೇತ. ವಿಜ್ಞಾನಿಗಳು ಹೇಳುತ್ತಾರೆ ಈ ಕೃತಿಯನ್ನು ಓದುವುದು ಒಂದು ವಿಶಿಷ್ಟ ಅನುಭವವಾಗಬೇಕಾಗಿತ್ತು ಬದಲು ಪುಟಪುಟದಲ್ಲೂ ನಿರಾಶೆ ಎದುರಾಗುತ್ತದೆ. ವೇದಶಾಸ್ತ್ರದ ಹಿನ್ನೆಲೆ ಪಡೆದು ಪುರಾತತ್ತ್ವ, ಪ್ರಾಗ್ ಮಾನವ ಶಾಸ್ತ್ರ ಕ್ಷೇತ್ರಗಳಿಂದ ಅಸಂಗತ ಸಾಕ್ಷಿಗಳನ್ನು ಉಲ್ಲೇಖಿಸುತ್ತ ವಿಕಾಸವನ್ನು ವಿವರಿಸುವ ಪರಿ ಬಾಲಿಶವಾಗಿ ಕಾಣುತ್ತದೆ. ವಿಚಿತ್ರವೆಂದರೆ ಅತ್ಯಂತ ಕೌಶಲದಿಂದ ವಿಜ್ಞಾನಿಗಳ ಸಂಶೋಧನೆಗಳನ್ನು ಧಾರಾಳವಾಗಿ ಅಲ್ಲಲ್ಲಿ ಉಲ್ಲೇಖಿಸುತ್ತಾರೆ. ವಾಸ್ತವವಾಗಿ ವಿಜ್ಞಾನಿಗಳ ಮೂಲ ಆಶಯವನ್ನು ಇವರೇ ಬೇರೆಡೆಗೆ ತಿರುಗಿಸಿದ್ದಾರೆ. ಸಾಕ್ಷಿಗಳನ್ನು ಒದಗಿಸುವ ಅಮಿತೋತ್ಸಾಹದಲ್ಲಿ ಈ ಲೇಖಕರು ಎಲ್ಲೆಲ್ಲಿ ಮಾನವ ವಿಕಾಸದಲ್ಲಿ ವೈಪರೀತ್ಯ ಎಂಬ ನಿಲವು ತಳೆಯುತ್ತಾರೋ, ಅಂಥ ಸಂದರ್ಭಗಳಲ್ಲಿ ಇದು ಹೀಗಿರಬೇಕಿತ್ತು ಎಂದು ಪರ್ಯಾಯ ಸೂಚಿಸದೆ ತೇಲಿಸಿಬಿಡುತ್ತಾರೆ. ಇದೊಂದು ಅನುಕೂಲಸಿಂಧು ಸಾಹಿತ್ಯ. ನಿಜವಾಗಿ ಪುರಾತತ್ತ್ವ ಕ್ಷೇತ್ರಕ್ಕೆ ಹೊಸ ಕೊಡುಗೆ ಕೊಟ್ಟಿದೆಯೇ ಎಂದು ಒಳಹೊಕ್ಕು ನೋಡಿದರೆ ಈ ಲೇಖಕದ್ವಯರಿಗೆ ಪುರಾತತ್ತ್ವದ ಬಗ್ಗೆಯಾಗಲಿ, ಮಾನವ ಶಾಸ್ತ್ರದ ಬಗ್ಗೆಯಾಗಲಿ ಪ್ರಾಥಮಿಕ ತಿಳಿವಳಿಕೆಯೇ ಇಲ್ಲ.
೧೭೮೬-೮೮ರ ನಡುವೆ ಫ್ರಾನ್ಸಿನ ಸುಣ್ಣಶಿಲೆಯ ಗಣಿಯೊಂದರಲ್ಲಿ ಸುತ್ತಿಗೆ, ನಾಣ್ಯ ಹಾಗೂ ಇತರ ಮಾನವಕೃತ ವಸ್ತುಗಳು ದೊರೆತುವೆಂದು ೧೮೨೦ರ ‘ಅಮೆರಿಕನ್ ಜರ್ನಲ್ ಆಫ್ ಸೈನ್ಸ್’ ನಲ್ಲಿ ಪ್ರಕಟಿಸಲಾಗಿದೆ ಎಂದು ಇಲ್ಲಿ ಉಲ್ಲೇಖಿಸುತ್ತಾರೆ. ಅದಷ್ಟು ಮಾತ್ರಕ್ಕೆ ಮಹತ್ವ ಬರುತ್ತದೆಯೆ? ಇಂದು ಅಂಥ ಸಂಗತಿಗಳನ್ನು ಯಾವ ವಿಜ್ಞಾನ ಪತ್ರಿಕೆಗಳು ಪ್ರಕಟಿಸುತ್ತಿವೆ? ೧೮೦೦ರ ಸುಮಾರಿನಲ್ಲಿ ಇನ್ನೂ ಎಂಥೆಂಥ ಸುದ್ದಿಗಳೋ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಸಾಗರಕನ್ಯೆ, ಸಮುದ್ರಸರ್ಪ, ನೀರು ಪತ್ತೆ ಮಾಡಲು ಬಳಸುತ್ತಿದ್ದ ಕವೆಕಡ್ಡಿ, ಇಂಥ ಸಂಗತಿಗಳಿಗೆಲ್ಲ ಪುಟ ಕೊಡುತ್ತಿದ್ದುದೂ ಉಂಟು. ಈಗ ಸಾಧ್ಯವೆ? ಜೀವಂತ ಏಪ್ ಮಾನವ ಎಂಬುದಕ್ಕೆ ಕೃತಿಯಲ್ಲಿ ಇಡೀ ಅಧ್ಯಾಯವನ್ನೇ ಮೀಸಲಾಗಿಟ್ಟಿದ್ದಾರೆ. ಬೃಹತ್‌ಪಾದಿ ಇರುವುದಾಗಿ ಈ ಲೇಖಕರು ಮತ್ತೆ ಮತ್ತೆ ವಾದಿಸುತ್ತಾರೆ. ಒಂದುವೇಳೆ ಇದ್ದರೂ ಮನುಷ್ಯನ ವಿಕಾಸ ಕುರಿತು ಅವು ಹೊಸ ಅಂಶವನ್ನು ಸಾರುತ್ತವೆಯೆ? ಇನ್ನು ೨೦೦ ಮಿಲಿಯನ್ ವರ್ಷಗಳ ಹಳೆಯ ಶಿಲೆಯಲ್ಲಿ ಬೂಟಿನ ತಳದ ಗುರುತು ಸಿಕ್ಕಿದೆ ಎಂದು ಬೊಟ್ಟುಮಾಡುವ ಈ ಲೇಖಕರಿಗೆ ಭೂವಿಜ್ಞಾನ ಅರ್ಥವಾಗಿಲ್ಲ. ಶಿಲೆಗಳು ಶಿಥಿಲಗೊಂಡರೆ ಎಂಥೆಂಥವೋ ಆಕೃತಿಗಳು ಮೈದಳೆಯುತ್ತವೆ. ಯಾವುದೋ ಕಲ್ಲು ಆನೆಯ ತರಹ ಕಾಣಿಸಬಹುದು, ತಿಮಿಂಗಿಲದ ತರಹ ಕಾಣಬಹುದು, ಮನುಷ್ಯ, ಬೆಕ್ಕಿನ ರೂಪದಲ್ಲೂ ಕಾಣಬಹುದು. ನಾವು ಚೋದ್ಯ ಪಡಬೇಕಾದುದು ನಿಸರ್ಗದ ಶಿಲ್ಪಕಲೆಗೆ. ಅವನ್ನು ತಪ್ಪಾಗಿ ಅರ್ಥೈಸಿದರೆ ಇಂಥ ಅಧ್ವಾನದ ವಿವರಣೆಯಲ್ಲಿ ಪರ್ಯಾವಸಾನವಾಗುತ್ತದೆ. ಈ ದಾಟಿಯಲ್ಲಿ ವಿಜ್ಞಾನಿಗಳ ಒಂದು ಬಣ ವಾದಿಸುತ್ತಿದೆ.
ಹಾಗಿದ್ದಲ್ಲಿ ಒಬ್ಬ ಸಾಮಾನ್ಯ ಓದುಗನಿಗೆ ಏನಿದೆ ಆಯ್ಕೆ? ಬಹುಶಃ ಹೀಗೆ ಕೇಳುವುದೇ ಅಬದ್ಧ ಎನ್ನಿಸುತ್ತದೆ. ಏಕೆಂದರೆ ಆಯ್ಕೆಗಳು ನೂರಾರಿವೆ. ಭಗವದ್ಗೀತೆಯನ್ನು ಓದಬಹುದು, ಬೈಬಲ್ಲನ್ನು ಓದಬಹುದು, ಕುರ್ ಆನ್ ಅನ್ನೂ ಓದಬಹುದು. ಡಾರ್ವಿನ್ನನ ವಿಕಾಸವಾದವನ್ನು ಓದಿ ತಲೆದೂಗಬಹುದು, ಸೃಷ್ಟಿವಾದಿಗಳ ವಾದಸರಣಿಯನ್ನು ಮೆಚ್ಚಬಹುದು. ಯಾವ ವಿಚಾರವನ್ನು ತರ್ಕಬದ್ಧವಾಗಿ ಮನಸ್ಸಿಗೊಪ್ಪುವಂತೆ ಪ್ರತಿಪಾದಿಸಲಾಗುತ್ತದೆಯೋ ಅಂಥವು ಬೇಗ ಮನದಾಳದಲ್ಲಿ ನೆಲೆಯಾಗಿಬಿಡುತ್ತವೆ. ಈ ಹಿನ್ನೆಲೆಯಲ್ಲಿ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಓದಬಹುದು. ಇಲ್ಲಿ ವೈಜ್ಞಾನಿಕ ಸಂಶೋಧನೆಗಳ ಉಲ್ಲೇಖವಿದೆ, ಚರಿತ್ರೆ ಇದೆ, ಮಾನವ ಶಾಸ್ತ್ರವಿದೆ, ಪುರಾತತ್ತ್ವವಿದೆ, ಭೂವಿಜ್ಞಾನವಿದೆ. ಆದರೆ ಇವು ಸ್ಪಂದಿಸುವ ಮಜಲುಗಳು ಮಾತ್ರ ಬೇರೆಯದೇ ಆಗಿದೆ. ‘ನೂರಾರು ಮತವಿಹುದು ಲೋಕದುಗ್ರಾಣದಲಿ, ಆರಿಸಿಕೋ ನಿನ್ನ ರುಚಿಗೊಪ್ಪುವುದನದರೊಳ್’ ಡಿ.ವಿ.ಜಿ. ಅವರ ಈ ಸಾಲುಗಳೇ ನಿಮ್ಮ ಓದಿನ ಆಯ್ಕೆಗೂ ಅನ್ವಯಿಸುತ್ತದೆ.

ಕಾಮೆಂಟ್‌ಗಳಿಲ್ಲ:

badge