ಬುಧವಾರ, ಆಗಸ್ಟ್ 26, 2015

ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

'ಸೇಡಿಯಾಪು' ತಂತ್ರಾಂಶ
ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡ ಮೊದಲಿಗೆ ಬಳಕೆಯಾಗಿದ್ದು ಇಂಗ್ಲಿಷ್ ಲಿಪಿಯ ಮೂಲಕ. ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡವನ್ನು ಮೂಡಿಸುವ ಈ ವಿಧಾನ 'ಕಂಗ್ಲಿಷ್' ಭಾಷೆ ಎಂದೇ ಜನಪ್ರಿಯ. ಕನ್ನಡದ 'ನಮಸ್ಕಾರ'ವನ್ನು ಇಂಗ್ಲಿಷಿನಲ್ಲಿ 'namaskaara' ಎಂದು ಲಿಪ್ಯಂತರ ಮಾಡಿ ಬರೆಯುವ ಈ ವಿಧಾನವನ್ನು ಇನ್ನೂ ಇಮೇಲ್-ಚಾಟ್-ಎಸ್ಸೆಮ್ಮೆಸ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.

ಕನ್ನಡದ ಪದಸಂಸ್ಕಾರಕ, ಅಂದರೆ ವರ್ಡ್ ಪ್ರಾಸೆಸರ್ ತಂತ್ರಾಂಶಗಳು ಬಂದಾಗ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಬಳಕೆಗೆ ಮೊದಲ ಪ್ರೋತ್ಸಾಹ ದೊರಕಿತು. ಈ ತಂತ್ರಾಂಶಗಳಿಂದಾಗಿ ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದು, ಕಂಪ್ಯೂಟರ್ ಸಹಾಯದಿಂದ ಅವನ್ನು ಮುದ್ರಿಸಿಕೊಳ್ಳುವುದು ಸಾಧ್ಯವಾಯಿತು.


ಶ್ರೀ ಕೆ. ಪಿ. ರಾವ್
ಕನ್ನಡ ಮೊದಲ ಪದಸಂಸ್ಕಾರಕಗಳ ಪೈಕಿ ಗಮನಾರ್ಹವಾದ ಹೆಸರು 'ಸೇಡಿಯಾಪು' ತಂತ್ರಾಂಶದ್ದು. ೧೯೮೬ರಷ್ಟು ಹಿಂದೆಯೇ ಈ ತಂತ್ರಾಂಶವನ್ನು ರೂಪಿಸಿ ಅದನ್ನು ಮುಕ್ತ ಬಳಕೆಗೆ ನೀಡಿದ ಸಾಧನೆ ಶ್ರೀ ಕೆ. ಪಿ. ರಾವ್ ಅವರದ್ದು. ಭಾಷೆಯ ಉಚ್ಚಾರಣೆಯಲ್ಲಿರುವ ತರ್ಕವನ್ನೇ  ಬಳಸಿ ಅವರು ರೂಪಿಸಿದ ಕೀಲಿಮಣೆ ವಿನ್ಯಾಸ ಅನೇಕ ಭಾರತೀಯ ಭಾಷೆಗಳನ್ನು ಕಂಪ್ಯೂಟರ್ ಲೋಕಕ್ಕೆ ಪರಿಚಯಿಸಿತು. ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸಕ್ಕೂ ಶ್ರೀ ಕೆ. ಪಿ. ರಾವ್ ಅವರ ವಿನ್ಯಾಸವೇ ಮೂಲ.

ಪ್ರಾರಂಭದ ಸಮಯದ ಸಾಧನೆಗಳ ಬಗ್ಗೆ ಹೇಳುವಾಗ ಶ್ರೀಲಿಪಿ, ಆಕೃತಿ, ಶಬ್ದರತ್ನ, ವಿನ್‌ಕೀ ಸೇರಿದಂತೆ ಇನ್ನೂ ಹಲವಾರು ಕನ್ನಡ ಪದಸಂಸ್ಕಾರಕಗಳನ್ನು ನೆನಪಿಸಿಕೊಳ್ಳಬಹುದು. ಆನಂತರ ಕಂಪ್ಯೂಟರುಗಳಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿ ಬೆಳೆಯುವಲ್ಲಿ 'ಬರಹ' ಹಾಗೂ 'ನುಡಿ' (ಹಿಂದಿನ ಹೆಸರು 'ಕಲಿತ') ತಂತ್ರಾಂಶಗಳ ಪಾತ್ರ ಮಹತ್ವದ್ದು. ಸಾಫ್ಟ್‌ವೇರ್ ತಜ್ಞ ಶೇಷಾದ್ರಿವಾಸು ಚಂದ್ರಶೇಖರನ್ 'ಬರಹ'ವನ್ನು ರೂಪಿಸಿದರೆ ಕನ್ನಡ ಗಣಕ ಪರಿಷತ್ತು ಕರ್ನಾಟಕ ಸರಕಾರದ ಸಹಯೋಗದಲ್ಲಿ 'ನುಡಿ' ತಂತ್ರಾಂಶವನ್ನು ಪರಿಚಯಿಸಿತು. ಮೊದಲಿಗೆ ಇವೆರಡೂ ತಂತ್ರಾಂಶಗಳು ಬಳಕೆದಾರರಿಗೆ ಉಚಿತವಾಗಿಯೇ ದೊರಕಿದ್ದವಾದರೂ ಬರಹ ತಂತ್ರಾಂಶ ಬಳಸಲು ಈಚೆಗೆ ಶುಲ್ಕ ನಿಗದಿಪಡಿಸಲಾಗಿದೆ; 'ನುಡಿ' ಈಗಲೂ ಉಚಿತವೇ.

ಬಹುತೇಕ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲೂ ನೇರವಾಗಿ ಕನ್ನಡ ಅಕ್ಷರಗಳನ್ನು ಮೂಡಿಸುವ ಸವಲತ್ತು ಲಭ್ಯವಾದದ್ದು ಕಂಪ್ಯೂಟರುಗಳಲ್ಲಿ ಕನ್ನಡ ಬಳಕೆ ಜಾಸ್ತಿಯಾಗಲು ಕಾರಣವಾದ ಇನ್ನೊಂದು ಅಂಶ. ಕುವೆಂಪು ತಂತ್ರಾಂಶ, 'ಪದ' ಸೇರಿದಂತೆ ಹಲವಾರು ಪದಸಂಸ್ಕಾರಕ ತಂತ್ರಾಂಶಗಳ ಪರಿಚಯವಾದ್ದರಿಂದ ಬಳಕೆದಾರರಿಗೆ ಇನ್ನಷ್ಟು ಆಯ್ಕೆಗಳು ದೊರೆತವು.

ಅಂತರಜಾಲದ ಬಳಕೆ ಹೆಚ್ಚಿದಂತೆ ಪ್ರತ್ಯೇಕ ತಂತ್ರಾಂಶದ ಅಗತ್ಯವಿಲ್ಲದೆ ಜಾಲತಾಣಗಳಲ್ಲೇ ನೇರವಾಗಿ ಕನ್ನಡ ಟೈಪಿಸುವ ಹಲವು ಸೌಕರ್ಯಗಳೂ ರೂಪುಗೊಂಡಿವೆ -  ಗೂಗಲ್ ಟ್ರಾನ್ಸ್‌ಲಿಟರೇಟ್, ಕ್ವಿಲ್‌ಪ್ಯಾಡ್, ಕನ್ನಡ ಸ್ಲೇಟ್ ಮುಂತಾದವು ಈ ಬಗೆಯ ತಾಣಗಳಿಗೆ ಕೆಲ ಉದಾಹರಣೆಗಳು. ಇಲ್ಲಿ ಕಂಗ್ಲಿಷ್‌ನಲ್ಲಿ ಬರೆದದ್ದು ತನ್ನಷ್ಟಕ್ಕೆ ತಾನೇ ಕನ್ನಡ ಲಿಪಿಯಲ್ಲಿ ಮೂಡಿಬರುತ್ತದೆ. ನಿಮ್ಮಲ್ಲಿ ಯಾವುದೇ ಕನ್ನಡ ತಂತ್ರಾಂಶ ಇಲ್ಲದಿದ್ದರೂ ಚಿಂತೆಯಿಲ್ಲ, ಇಲ್ಲಿ ಟೈಪಿಸಿದ ಕನ್ನಡ ಪಠ್ಯವನ್ನು ಬೇಕಾದ ಕಡೆಗೆ ಸುಲಭವಾಗಿ ಕಾಪಿ-ಪೇಸ್ಟ್ ಮಾಡಿಕೊಳ್ಳಬಹುದು. ಜಿಮೇಲ್, ವಿಕಿಪೀಡಿಯಾ ಸೇರಿದಂತೆ ಹಲವು ತಾಣಗಳಲ್ಲಿ ನೇರವಾಗಿ ಕನ್ನಡದಲ್ಲೇ ಬೆರಳಚ್ಚಿಸುವುದು ಸಾಧ್ಯವಿರುವುದರಿಂದ ನಾವು ಬಾಹ್ಯ ತಂತ್ರಾಂಶಗಳನ್ನು ಅವಲಂಬಿಸಬೇಕಾದ ಅಗತ್ಯವೂ ನಿಧಾನಕ್ಕೆ ಕಡಿಮೆಯಾಗುತ್ತಿದೆ ಎನ್ನಬಹುದು.

ಕೀಲಿಮಣೆ ಇಲ್ಲದ ಸ್ಮಾರ್ಟ್‌ಫೋನುಗಳಲ್ಲಿ ಸ್ಪರ್ಶಸಂವೇದಿ ಪರದೆಯೇ (ಟಚ್‌ಸ್ಕ್ರೀನ್) ಕೀಲಿಮಣೆಯ ಕೆಲಸ ಮಾಡುತ್ತದಲ್ಲ, ಅಂತಹ ಬಹುತೇಕ ಫೋನುಗಳಲ್ಲಿ ನಮಗೆ ಬೇಕಾದ ಭಾಷೆಯ ಕೀಬೋರ್ಡ್ ಆಪ್ ಅಳವಡಿಸಿಕೊಳ್ಳುವುದು ಸಾಧ್ಯ. ಕನ್ನಡ ಅಕ್ಷರಗಳನ್ನು ಬೆಂಬಲಿಸುವ (ಯುನಿಕೋಡ್ ಸೌಲಭ್ಯವಿರುವ) ಮೊಬೈಲುಗಳಲ್ಲಿ ಕನ್ನಡದಲ್ಲಿ ಟೈಪಿಸಲು ಇಂತಹ ಹಲವು ಆಪ್‌ಗಳನ್ನು ಬಳಸಬಹುದು. ಜಸ್ಟ್ ಕನ್ನಡ, ಪದ, ಸ್ವಿಫ್ಟ್‌ಕೀ ಮುಂತಾದವು ಆಂಡ್ರಾಯ್ಡ್ ಫೋನುಗಳಿಗೆ ಲಭ್ಯವಿರುವ ಇಂತಹ ಕೆಲ ಆಪ್‌ಗಳು. ಇವನ್ನು ಬಳಸಿಕೊಂಡು ಕನ್ನಡದಲ್ಲೇ ಇಮೇಲ್, ಎಸ್ಸೆಮ್ಮೆಸ್, ವಾಟ್ಸ್‌ಆಪ್ ಮೆಸೇಜುಗಳನ್ನೆಲ್ಲ ಟೈಪಿಸುವುದು ಸಾಧ್ಯ. ಅಕ್ಷರಗಳನ್ನು ಗಮನಿಸಿಕೊಂಡು ನಾವು ಟೈಪಿಸಲು ಹೊರಟಿರುವ ಪದವನ್ನು ಊಹಿಸಿ ತೋರಿಸುವ ಸೌಲಭ್ಯ ಇಂತಹ ಬಹುತೇಕ ಆಪ್‌ಗಳಲ್ಲಿ ಇದೆ.

ಅಕ್ಷರಗಳನ್ನು ಟೈಪಿಸುವುದು ಹಳೆಯ ಫ್ಯಾಶನ್ ಆಯಿತು ಎನ್ನುವಿರಾ? ಕನ್ನಡ ತಂತ್ರಾಂಶಗಳ ಲೋಕದಲ್ಲಿ ನಿಮಗೂ ಉತ್ತರ ಸಿದ್ಧವಿದೆ: ಗೂಗಲ್ ಸಂಸ್ಥೆ ಹೊರತಂದಿರುವ 'ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್' ಆಪ್ ನಮ್ಮ ಕೈಬರಹವನ್ನೇ ಗುರುತಿಸಬಲ್ಲದು! ನಿಮ್ಮ ಆಂಡ್ರಾಯ್ಡ್ ಮೊಬೈಲ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಇದನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಸಾಕು, ಎಸ್ಸೆಮ್ಮೆಸ್ಸನ್ನೋ ವಾಟ್ಸಾಪ್ ಸಂದೇಶವನ್ನೋ ಟೈಪಿಸಲು ಅಕ್ಷರಗಳನ್ನು ಕುಟ್ಟುವ ಬದಲು ಪರದೆಯ ಮೇಲೆ ನಮ್ಮ ಕೈಬೆರಳಿನಿಂದ (ಅಥವಾ ಸ್ಟೈಲಸ್ ಕಡ್ಡಿ ಬಳಸಿ) ಕನ್ನಡ ಪದಗಳನ್ನು ಬರೆಯುವುದು ಸಾಧ್ಯವಾಗುತ್ತದೆ. ನಮ್ಮ ಕೈಬರಹವನ್ನು ಗ್ರಹಿಸಿ ಯಾವ ಪದ ಬರೆಯಲು ಹೊರಟಿರಬಹುದು ಎಂದು ಸೂಚಿಸುವ ಸೌಲಭ್ಯ (ಹಲವು ಕೀಬೋರ್ಡ್ ಆಪ್‌ಗಳಲ್ಲಿರುವಂತೆ) ಇದರಲ್ಲೂ ಇದೆ. ಪಠ್ಯದ ನಡುವೆ ಇಂಗ್ಲಿಷ್ ಪದವನ್ನೋ ನಗುಮುಖವನ್ನೋ (ಸ್ಮೈಲಿ) ಬರೆದರೆ ಅದನ್ನು ಗ್ರಹಿಸುವ ಚಾಕಚಕ್ಯತೆಯೂ ಉಂಟು!

ಪದಸಂಸ್ಕಾರಕಗಳು:
ಜಾಲಲೋಕದಲ್ಲಿ ಕನ್ನಡ ಟೈಪಿಸಲು:
ಕನ್ನಡ ಮೂಡಿಸುವ ಆಪ್‌ಗಳು (ನಿಮ್ಮ ಮೊಬೈಲಿನ ಆಪ್ ಸ್ಟೋರಿನಲ್ಲಿ ಹುಡುಕಿ):
  • ಆಂಡ್ರಾಯ್ಡ್ ಬಳಸುವ ಸಾಧನಗಳಿಗೆ: Just Kannada Keyboard, Pada Kannada
  • ಗೂಗಲ್ ಕೈಬರಹ (ಆಂಡ್ರಾಯ್ಡ್): Google Handwriting Input
  • ವಿಂಡೋಸ್ ಸಾಧನಗಳಿಗೆ: Type Kannada
  • ಐಫೋನ್-ಐಪ್ಯಾಡ್‌ಗಳಿಗೆ (ಐಓಎಸ್): iKanType Kannada, Kannada for iPhone
ಈ ಸರಣಿಯಲ್ಲಿ ನೀವು ನೋಡುವುದು ಉದಾಹರಣೆಗಳನ್ನಷ್ಟೇ ಹೊರತು ಕನ್ನಡ ತಂತ್ರಾಂಶ ಸವಲತ್ತುಗಳ ಸಮೀಕ್ಷೆಯನ್ನಾಗಲೀ ಪರಿಪೂರ್ಣ ಪಟ್ಟಿಯನ್ನಾಗಲೀ ಅಲ್ಲ ಎಂದು ದಯಮಾಡಿ ಗಮನಿಸಿ.

4 ಕಾಮೆಂಟ್‌ಗಳು:

Aniruddh ಹೇಳಿದರು...

ತುಂಬಾ ಉಪಯುಕ್ತ ಮಾಹಿತಿ. ನನಗೆ ಬರಹ ಮತ್ತು ನುಡಿ ಬಗ್ಗೆ ತಿಳಿದಿತ್ತು. ಅದರೆ ಪದ ಮತ್ತು ಕುವೆಂಪು ತಂತ್ರಾಂಶದ ಬಗ್ಗೆ ತಿಳಿದಿರಲಿಲ್ಲ. ಈ ಕಮೆಂಟ್ ಅನ್ನು ಪದ ತಂತ್ರಾಂಶದ ಸಹಾಯದಿಂದ ಬರೆಯುತ್ತಿದ್ದೇನೆ.

Udaya Shankar Puranik ಹೇಳಿದರು...

ಕನ್ನಡದಲ್ಲಿ ಅನ್ವಯಿಕ ತಂತ್ರಾಂಶಗಳನ್ನು ಕುರಿತು ಮುಂದಿನ ಸಂಚಿಕೆಗಳಲ್ಲಿ ಬರೆಯುವಿರಿ ಎಂದು ಭಾವಿಸುತ್ತೇನೆ.

Chinnamma baradhi ಹೇಳಿದರು...

Manyare,
E-jnanadalli thumba upayukta maahitigalu siguthive.Matte english to kannada techinical dictionary elli sigbauhudu.Exaple.Encryption technology ge kannadada pada hege hudukuvudu.
E-jnanadalli ondu sanna dictionary link kodoke sadhyana.

Harikegalondige.
Chinnamma Baradhi

Holalkere rangarao laxmivenkatesh ಹೇಳಿದರು...

ಪ್ರತಿಸರ್ತಿಯಂತೆ, ಅತ್ಯುತ್ತಮ ಮಾಹಿತಿಗಳನ್ನು ಒದಗಿಸುತ್ತಿದ್ದೀರೆ. ಧನ್ಯವಾದಗಳು.

badge