ಸೋಮವಾರ, ಮೇ 25, 2015

ವಿಶ್ವಕೋಶಗಳಿಗಾಗಿ ಬರೆವಣಿಗೆ

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಯು. ಬಿ. ಪವನಜ

ವಿಜ್ಞಾನಬರೆವಣಿಗೆಯಲ್ಲಿ ಹಲವು ವಿಭಾಗಗಳಿವೆ. ಅವುಗಳನ್ನು ಸ್ಥೂಲವಾಗಿ ಎರಡು ವಿಭಾಗಗಳಾಗಿ ಮಾಡಬಹುದು. ಮೊದಲನೆಯದು ಜನಪ್ರಿಯ ವಿಜ್ಞಾನ ಬರೆವಣಿಗೆ. ಎರಡನೆಯದು ವಿಶ್ವಕೋಶ ನಮೂನೆಯ ಬರೆವಣಿಗೆ. ವಿಶ್ವಕೋಶಗಳಿಗೆ ಬರೆಯುವುದು ಹೇಗೆ ಎಂಬುದು ಈ ಲೇಖನದ ವಿಷಯ.

ವಿಶ್ವಕೋಶ ಎಂದರೇನು?
ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದಲ್ಲಿ ವಿಶ್ವಕೋಶದ ಬಗೆಗೆ ಈ ರೀತಿ ವಿವರಣೆ ನೀಡಲಾಗಿದೆ:
ಜ್ಞಾನದ ವಿವಿಧ ಶಾಖೆಗಳ ಬಗೆಗಿನ ಮಾಹಿತಿಗಳನ್ನು ಸಂಪಾದಿಸಿ, ಸಂಸ್ಕರಿಸಿ, ಬಿಡಿಲೇಖನಗಳನ್ನು ಅಕಾರಾದಿಯಾಗಿ ಅಳವಡಿಸಿರುವ ಪರಾಮರ್ಶನ ಗ್ರಂಥ (ಎನ್‌ಸೈಕ್ಲೊಪೀಡಿಯ).
ಎನ್‌ಸೈಕ್ಲೊಪೀಡಿಯ ಎಂಬ ಪದ ಗ್ರೀಕ್ ಮೂಲದ್ದು. ಇದರ ಅರ್ಥ “ಸಂಪೂರ್ಣ ಶಿಕ್ಷಣ.” ಮಾಹಿತಿಗಳು ಒಂದು ವಿಷಯಕ್ಕೆ ಸೀಮಿತವಾಗಿದ್ದರೆ ಅದು ವಿಷಯ ವಿಶ್ವಕೋಶವೆನಿಸುತ್ತದೆ, ಎಲ್ಲ ವಿಷಯಗಳನ್ನೂ ಒಳಗೊಂಡಿದ್ದರೆ ಸಾಮಾನ್ಯ ವಿಶ್ವಕೋಶವೆನಿಸುತ್ತದೆ. ಹಿಂದೆ ವಿದ್ವಾಂಸರು ತಮಗೆ ಬೇಕಾದ ಮಾಹಿತಿಗಳ್ನು ಅಲ್ಲಿ ಇಲ್ಲಿ ಹಂಚಿ ಹರಡಿಹೋಗಿದ್ದ ಹಸ್ತಪ್ರತಿಗಳು, ತಾಳೆಯ ಸುರುಳಿಗಳು ಮುಂತಾದವುಗಳಿಂದ ಹುಡುಕಿ ತೆಗೆಯುತ್ತಿದ್ದರು. ಕೆಲವರು ಪ್ರಪಂಚದ ಇತರ ಭಾಗಗಳಲ್ಲಿ ನಡೆದ ಅಧ್ಯಯನಗಳ ಮಾಹಿತಿ ಆಧಾರದ ಮೇಲೆ ವಿಷಯವನ್ನು ಸಂಗ್ರಹಿಸುತ್ತಿದ್ದರು. ಮತ್ತೆ ಕೆಲವರು ಸಂಶೋಧನೆಗಳನ್ನೂ ಕ್ಷೇತ್ರಾಧ್ಯಯನಗಳನ್ನೂ ನಡೆಸಿ ವಿಷಯನಿರೂಪಣೆ ಮಾಡುತ್ತಿದ್ದರು. ಈ ಎಲ್ಲವೂ ವಿಶ್ವಕೋಶದ ಮೂಲ ರೂಪಗಳು ಅಥವಾ ಪ್ರಾಚೀನರೂಪಗಳು. ಆದರೆ ಆಧುನಿಕ ವಿಶ್ವಕೋಶದಿಂದ ಅವು ಹಲವು ರೀತಿ ಭಿನ್ನವಾಗಿವೆ. ಪ್ರಾಚೀನ ವಿದ್ವಾಂಸರು ಮಾಹಿತಿಗಳನ್ನು ಜೋಡಿಸುತ್ತಿದ್ದ ಕ್ರಮ ಅವರಿಗಿಷ್ಟಬಂದಂತೆ ಇರುತ್ತಿದ್ದುದಲ್ಲದೆ  ನಿಖರತೆಯನ್ನು ಪರಿಶೀಲಿಸುವ ಮಾರ್ಗಗಳೂ ಸೀಮಿತವಾಗಿದ್ದುವು. ಜೊತೆಗೆ ಅವರ ಓದುಗರ ಚೌಕಟ್ಟೂ ಸೀಮಿತವಾಗಿರುತ್ತಿತ್ತು. ವಿಶ್ವಕೋಶಗಳು ಹಾಗಲ್ಲ. ಇಲ್ಲಿ ಲೇಖನಗಳು ಹಾಗೂ ಮಾಹಿತಿಗಳು ನಿರ್ದುಷ್ಟವೂ ಸ್ಪಷ್ಟವೂ ನಿಖರವೂ ಆಗಿದ್ದು ಕ್ರಮಬದ್ಧ ಜೋಡಣೆಗೆ ಒಳಪಟ್ಟಿರುತ್ತವೆ. 
ಮುಖ್ಯವಾದ ವಿಷಯವೆಂದರೆ ವಿಶ್ವಕೋಶಕ್ಕೆ ಸೇರಿಸುವ ಮಾಹಿತಿಗಳು ನಿಖರವಾಗಿರಬೇಕು. ವಿಶ್ವಕೋಶಕ್ಕೆ ಮಾಹಿತಿ ಸೇರಿಸಿಬೇಕಾದರೆ ಅವುಗಳನ್ನು ಆರು ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಸಂಗ್ರಹಿಸಬೇಕು. ಆ ಆರು ಪ್ರಶ್ನೆಗಳೆಂದರೆ “ಏನು, ಏಕೆ, ಎಲ್ಲಿ, ಯಾವಾಗ, ಯಾರು ಮತ್ತು ಹೇಗೆ”. ವಿಶ್ವಕೋಶಗಳಲ್ಲಿ ಮುದ್ರಿತ ವಿಶ್ವಕೋಶ ಮತ್ತು ಅಂತರಜಾಲದಲ್ಲಿರುವ ಆನ್‌ಲೈನ್ ವಿಶ್ವಕೋಶ ಎಂದು ಎರಡು ನಮೂನೆಗಳಿವೆ. ಅಂತರಜಾಲಾಧಾರಿತ ವಿಶ್ವಕೋಶಕ್ಕೆ ತುಂಬ ಪ್ರಖ್ಯಾತ ಉದಾಹರಣೆಯೆಂದರೆ ವಿಕಿಪೀಡಿಯ. ಮುದ್ರಿತ ವಿಶ್ವಕೋಶಗಳು ಒಮ್ಮೆ ಮುದ್ರಣಗೊಂಡರೆ ಹಲವು ವರ್ಷಗಳ ಕಾಲ ನವೀಕರಣಗೊಳ್ಳುವ ಸಾಧ್ಯತೆಗಳು ಕಡಿಮೆ. ಅಂತರಜಾಲದಲ್ಲಿರುವ ವಿಶ್ವಕೋಶಗಳು ನಿಜಸಮಯದಲ್ಲಿ ನವೀಕರಣಗೊಳ್ಳುತ್ತವೆ.

ವಿಶ್ವಕೋಶಕ್ಕೆ ಬರೆಯುವುದು
ಈಗಾಗಲೇ ತಿಳಿಸಿರುವಂತೆ ವಿಶ್ವಕೋಶಕ್ಕೆ ಬರೆಯುವಾಗ ಮಾಹಿತಿಯ ನಿಖರತೆ ಅತೀ ಅಗತ್ಯ. ವಿಶ್ವಕೋಶವನ್ನು ಎಲ್ಲರೂ ಮಾಹಿತಿಯ ಆಕರವಾಗಿ ಬಳಸುವುದರಿಂದ ಅದರಲ್ಲಿ ನೀಡಿರುವ ಮಾಹಿತಿಯು ನಿಖರವಾಗಿದ್ದು ಪರಿಪೂರ್ಣವೂ ಆಗಿರತಕ್ಕದ್ದು.ಮುದ್ರಿತ ವಿಶ್ವಕೋಶಗಳಿಗೆ ಸಂಪಾದಕ ಮಂಡಳಿ ಇರುತ್ತದೆ. ಈ ಮಂಡಳಿಯು ತುಂಬ ದೊಡ್ಡದಿದ್ದು ಬೇರೆ ಬೇರೆ ವಿಷಯಗಳಿಗೆ ಆಯಾ ವಿಷಯಗಳಲ್ಲಿ ಪರಿಣತರು ಸಂಪಾದಕರಾಗಿರುತ್ತಾರೆ. ಸಾಮಾನ್ಯವಾಗಿ ಪರಿಣತರಿಂದ ಲೇಖನಗಳನ್ನು ಆಹ್ವಾನಿಸಲಾಗುತ್ತದೆ. ಲೇಖಕರುಗಳಿಗೆ ಲೇಖನದಲ್ಲಿ ಅಡಕವಾಗಬೇಕಾದ ವಿಷಯದ ವ್ಯಾಪ್ತಿ, ಬಳಸಬೇಕಾದ ಭಾಷೆ, ಪಾರಿಭಾಷಿಕ ಪದಗಳು, ಇತ್ಯಾದಿಗಳನ್ನೆಲ್ಲ ಲೇಖನ ಆಹ್ವಾನಿಸುವಾಗ ನೀಡುವ ಪರಿಪಾಠ ಇರುತ್ತದೆ. ಹೀಗೆ ಮಾಡುವುದರಿಂದ ಇಡಿಯ ವಿಶ್ವಕೋಶದಲ್ಲಿ ಬಳಸಿದ ಪದಗಳು ಮತ್ತು ಮಾನಕಗಳಲ್ಲಿ ಏಕರೂಪ ಇರುತ್ತದೆ. ಒಬ್ಬರು ಅಡಿ, ಇಂಚು ಎಂದು ಮತ್ತೊಬ್ಬರು ಮೀಟರು, ಸೆಂಟಿಮೀಟರು ಎಂದು ಬರೆಯುವುದು ತಪ್ಪುತ್ತದೆ. ಎಲ್ಲ ಲೇಖನಗಳನ್ನು ಅಂತಿಮವಾಗಿ ಒಂದೇ ಭಾಷೆ ಮತ್ತು ಮಾನಕಗಳಿಗೆ ತರುವುದು ಸಂಪಾದಕ ಮಂಡಳಿಯ ಕೆಲಸ.

ಮಾಹಿತಿ ಸಂಗ್ರಹಣೆ ಒಂದು ಪ್ರಮುಖವಾದ ಹಾಗೂ ಸ್ವಲ್ಪ ಕ್ಲಿಷ್ಟವಾದ ಕೆಲಸ. ಹಿಂದಿನ ಕಾಲದಲ್ಲಿ ಮಾಹಿತಿಗಳ ಆಕರವೆಂದರೆ ಗ್ರಂಥಾಲಯಗಳು, ಅಲ್ಲಿರುವ ಪುಸ್ತಕಗಳು ಮತ್ತು ಸಂಶೋಧನೆಯ ನಿಯತಕಾಲಿಕಗಳಾಗಿದ್ದವು. ಅವು ಈಗಲೂ ಪ್ರಸ್ತುತವೇ. ಇವೆಲ್ಲವುಗಳ ಜೊತೆ ಜಾನಪದ, ಇತಿಹಾಸ, ಸಂಸ್ಕೃತಿ, ಕಲೆ, ಇತ್ಯಾದಿ ವಿಷಯಗಳ ಮಾಹಿತಿ ಸಂಗ್ರಹಣೆಗೆ ಆಯಾ ಕ್ಷೇತ್ರದಲ್ಲಿ ಪಾಂಡಿತ್ಯ ಇರುವವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಾಗುತ್ತದೆ. ಈಗಿನ ಕಾಲದಲ್ಲಿ ಅಂತರಜಾಲವನ್ನು ಬಳಸಿ ಹಲವು ಮಾಹಿತಿಗಳನ್ನು ಅಷ್ಟೇನೂ ಕಷ್ಟಪಡದೆ ಪಡೆಯಬಹುದು.ಹಲವು ಸಂಶೋಧನಾ ನಿಯತಕಾಲಿಕೆಗಳ ಜಾಲತಾಣಗಳು, ವಿಜ್ಞಾನದ ಹೊಸ ಹೊಸ ಸಂಶೋಧಧನೆಗಳ ವರದಿಗೆಂದೇ ಮೀಸಲಾದ ವಿಶೇಷ ಜಾಲತಾಣಗಳು, ವಿಶ್ವಕೋಶಗಳು ಇವೆಲ್ಲ ಅಂತರಜಾಲದಲ್ಲಿವೆ. ಇವುಗಳಿಂದ ಮಾಹಿತಿ ಪಡೆಯಬಹುದು. ಆದರೂ ಅಂತರಜಾಲದಿಂದ ಮಾಹಿತಿಯನ್ನು ಪಡೆಯುವಾಗ ಎಚ್ಚರವೂ ಅಗತ್ಯ. ವಿಜ್ಞಾನಿ, ವಿಶೇಷಜ್ಞರುಗಳ ಬ್ಲಾಗ್‌ಗಳು ನಂಬಲರ್ಹವಾಗಿದ್ದರೂ ಕೆಲವು ಬ್ಲಾಗ್‌ಗಳು ಅಷ್ಟೇನೂ ನಂಬಲರ್ಹವಾಗಿರಬೇಕಾಗಿಲ್ಲ.

ವಿಷಯ ನಿರೂಪಣೆ ಮತ್ತು ಭಾಷೆ
ವಿಶ್ವಕೋಶಕ್ಕೆ ಬರೆಯುವುದಕ್ಕೂ ಜನಪ್ರಿಯ ವಿಜ್ಞಾನ ಲೇಖನ ಬರೆಯುವುದಕ್ಕೂ ಇರುವ ಪ್ರಮುಖ ವ್ಯತ್ಯಾಸವೆಂದರೆ ವಿಷಯ ನಿರೂಪಣೆ ಮತ್ತು ಬಳಸುವ ಭಾಷೆ. ಜನಪ್ರಿಯ ವಿಜ್ಞಾನ ಲೇಖನದ ಭಾಷೆ ರಂಜನೀಯವಾಗಿದ್ದು ಆಕರ್ಷಕವಾಗಿದ್ದರೆ ಒಳ್ಳೆಯದು. ಸಾಕಷ್ಟು ಸ್ವಾರಸ್ಯಕರ ಉದಾಹರಣೆಗಳನ್ನು ನೀಡಬಹುದು. ಸ್ವಲ್ಪ ಕಥಾರೂಪವನ್ನೂ ತಾಳಬಹುದು. ಆದರೆ ವಿಶ್ವಕೋಶಕ್ಕೆ ಇವು ಯಾವುವೂ ಸಲ್ಲದು. ವಿಶ್ವಕೋಶಕ್ಕೆ ಬರೆಯುವಾಗ ಯಾವುದೇ ರಂಜನೀಯವಾದ ಭಾಷೆ ಬಳಸುವಂತಿಲ್ಲ. ಹೊಗಳಿಕೆ, ತೆಗಳಿಕೆ, ವಿಶೇಷಣಗಳೆಲ್ಲ ಇಲ್ಲಿ ಸಲ್ಲವು. ಕೇವಲ ಮಾಹಿತಿಗಳ ನಿರೂಪಣೆ ಅಷ್ಟೆ. ಮಾಹಿತಿಯ ನಿರೂಪಣೆಯಲ್ಲಿ ಒಂದು ವ್ಯವಸ್ಥಿತ ಕ್ರಮ ಅಗತ್ಯ. ವಿಷಯಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ಸೂಕ್ತ ವಿಭಾಗಗಳನ್ನು ಮಾಡಿ ಅವುಗಳಿಗೆ ಶೀರ್ಷಿಕೆ ನೀಡಬೇಕು. ವಿಭಾಗಗಳ ಶೀರ್ಷಿಕೆಗಳಲ್ಲಾಗಲೀ ಲೇಖನದ ಶೀರ್ಷಿಕೆಯಲ್ಲಾಗಲೀ ವಿಶೇಷಣ, ಕಾವ್ಯಮಯ ಭಾಷೆ ಬಳಸುವಂತಿಲ್ಲ. ಉದಾಹರಣೆಗೆ ಆಗುಂಬೆಯ ಬಗೆಗಿನ ಲೇಖನಕ್ಕೆ “ಪಶ್ಚಿಮ ಘಟ್ಟದ ಸುಂದರ ರಮಣೀಯ ಸೂರ್ಯಾಸ್ತ ವೀಕ್ಷಣೆಯ ತಾಣ” ಎಂಬ ಶೀರ್ಷಿಕೆ ನಿಡುವಂತಿಲ್ಲ. ವ್ಯಕ್ತಿಗಳ ಬಗ್ಗೆ ಬರೆಯುವಾಗ ಅವರ ಸಾಧನೆಗಳ ಪಟ್ಟಿ ನೀಡಬಹುದು ಆದರೆ ಅವುಗಳ ಬಗ್ಗೆ ಬರೆಯುವಾಗ ಯಾವುದೇ ವಿಶೇಷಣ ಬಳಸುವಂತಿಲ್ಲ. “ದೈವಾಂಶ ಸಂಭೂತ ವ್ಯಕ್ತಿ”, “ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಜೀವಿಸುತ್ತಿರುವ ವ್ಯಕ್ತಿ”, ಇತ್ಯಾದಿ ಹೊಗಳಿಕೆಯ ಭಾಷೆ ಬಳಸುವಂತಿಲ್ಲ. ಲೇಖನ ಬರೆಯುವವರ ವೈಯಕ್ತಿಕ ಅಭಿಪ್ರಾಯಗಳು ಲೇಖನದಲ್ಲಿ ಎಲ್ಲೂ ನುಸುಳುವಂತಿಲ್ಲ.

ವಿಕಿಪೀಡಿಯ
ಅಂತರಜಾಲದಲ್ಲಿರುವವಿಶ್ವಕೋಶಗಳಲ್ಲಿ ತುಂಬ ಪ್ರಖ್ಯಾತ ಮತ್ತು ಅತಿ ಜನಪ್ರಿಯವಾಗಿರುವುದು ವಿಕಿಪೀಡಿಯ. ವಿಕಿಪೀಡಿಯ (wikipedia.org) ಅಂತರಜಾಲದ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು, ವಿಶ್ವದ ಲಕ್ಷಾಂತರ ಮಂದಿ ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ ಸಹಕಾರ ಮನೋಭಾವದಿಂದ ಸಂಪಾದಿಸಿದ್ದಾಗಿದೆ. ವಿಕಿಮೀಡಿಯ ಫೌಂಡೇಷನ್ ಎಂಬ ಲಾಭರಹಿತ ಸಂಸ್ಥೆ ಇದನ್ನು ನಡೆಸುತ್ತಿದೆ. ವಿಕಿಪೀಡಿಯ ಜಗತ್ತಿನ ೨೮೮ ಭಾಷೆಗಳಲ್ಲಿ ಲಭ್ಯವಿದೆ.ಭಾರತದ ೨೦ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಕಿಪೀಡಿಯ ಇದೆ. ಕನ್ನಡ ಭಾಷೆಯ ವಿಕಿಪೀಡಿಯ ೨೦೦೩ ರಲ್ಲಿ ಪ್ರಾರಂಭವಾಯಿತು. ಅಂತರಜಾಲ ಸಂಪರ್ಕವಿರುವ ಯಾರು ಬೇಕಾದರೂ ವಿಶ್ವದ ಯಾವುದೇ ಮೂಲೆಯಿಂದ ಯಾವುದೇ ವಿಷಯದ ಲೇಖನಗಳ ಸಂಪಾದನೆಗೆ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ.

ಎಲ್ಲ ವಿಕಿಪೀಡಿಯಗಳಂತೆ ಕನ್ನಡ ವಿಕಿಪೀಡಿಯವೂ ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಸಂಪಾದಕರಾಗಿ ಲೇಖನ ಸೇರಿಸಬಹುದು, ಇರುವ ಲೇಖನ ತಿದ್ದಬಹುದು. ಇನ್ನೊಬ್ಬರು ಬರೆದ ಲೇಖನದಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಅಥವಾ ಮಾಹಿತಿಯ ಕೊರತೆ ಇದ್ದಲ್ಲಿ ಆ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ಅದನ್ನು ನೀವೇ ತಿದ್ದಬಹುದು ಮತ್ತು ಹೆಚ್ಚಿನ ಮಾಹಿತಿ ಸೇರಿಸಬಹುದು. ನಿಮಗೆ ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಆ ವಿಷಯದ ಬಗ್ಗೆ ವಿಕಿಪೀಡಿಯದಲ್ಲಿ ಲೇಖನ ಇಲ್ಲ ಎಂದಾದಲ್ಲಿ ಆ ಬಗ್ಗೆ ಒಂದು ಹೊಸ ಲೇಖನವನ್ನು ನೀವೇ ಸೇರಿಸಬಹುದು. ನಿಮ್ಮ ಲೇಖನ ಯಾರೋ ಒಬ್ಬರು ಒಪ್ಪಿದ ನಂತರ ಅದು ಪ್ರಕಟವಾಗುವ ಪರಿಪಾಠ ಇಲ್ಲಿಲ್ಲ. ನೀವು ಲೇಖನ ಬರೆದು “ಪುಟವನ್ನು ಉಳಿಸಿ” ಎಂಬುದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಲೇಖನ ಕನ್ನಡ ವಿಕಿಪೀಡಿಯಕ್ಕೆ ಸೇರ್ಪಡೆಯಾಗುತ್ತದೆ. ಪ್ರಪಂಚಾದ್ಯಂತ ಹಬ್ಬಿರುವ ಕನ್ನಡಿಗರಿಗೆ ಅದು ಕ್ಷಣಮಾತ್ರದಲ್ಲಿ ದೊರೆಯುವಂತಾಗುತ್ತದೆ.

ವಿಕಿಪೀಡಿಯದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ನಾವು ತಜ್ಞರು ಆಗಿರಬೇಕು ಎನ್ನುವ ಒಂದು ತಪ್ಪು ಕಲ್ಪನೆ ತುಂಬ ಜನರಲ್ಲಿದೆ. ಇದು ಸರಿಯಲ್ಲ. ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರು ಆಗಿರಬೇಕು ಎಂಬ ಕಟ್ಟಳೆಯಿಲ್ಲ. ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ನಿಮಗೆ ತಿಳಿದಷ್ಟು ನೀವು ಸೇರಿಸಿ. ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರು ಸೇರಿಸುತ್ತಾರೆ. ಕನ್ನಡ ವಿಕಿಪೀಡಿಯದ ಜಾಲತಾಣ ವಿಳಾಸ - kn.wikipedia.org.

ನೆನಪಿಡಿ. ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಅದರಲ್ಲೂ ವಿಜ್ಞಾನ ತಂತ್ರಜ್ಞಾನ ವಿಷಯಗಳ ಲೇಖನಗಳ ಅತೀ ಅಗತ್ಯ ಇದೆ. ಅವುಗಳನ್ನು ಸೇರಿಸುವ ಕಡೆಗೆ ಗಮನ ಹರಿಸಬಹುದು. ಹೊಸ ಲೇಖನ ಸೇರಿಸುವ ಮೊದಲು ಆ ವಿಷಯದ ಬಗ್ಗೆ ಈಗಾಗಲೇ ಲೇಖನ ಇದೆಯೇ ಎಂಬುದನ್ನು ಪರಿಶೀಲಿಸಿ. ಹುಡುಕುವಾಗ ಬೇರೆ ಬೇರೆ ಶೀರ್ಷಿಕೆಗಳಲ್ಲೂ ಹುಡುಕುವುದು ಅತೀ ಅಗತ್ಯ. ಉದಾಹರಣೆಗೆ ದ. ರಾ. ಬೇಂದ್ರೆ ಎಂಬ ಲೇಖನ ಇದೆ. ಹಾಗಿರುವಾಗ ಅಂಬಿಕಾತನಯದತ್ತ ಎಂಬ ಲೇಖನ ಸೃಷ್ಟಿಸುವಂತಿಲ್ಲ.ನೀವು ಬರೆಯಬೇಕೆಂದಿರುವ ವಿಷಯದ ಬಗ್ಗೆ ಯಾವ ಶೀರ್ಷಿಕೆಯಲ್ಲೂ ಲೇಖನ ಇಲ್ಲ ಎಂದು ಖಾತ್ರಿಯಾದ ನಂತರ ಮಾತ್ರವೇ ಆ ವಿಷಯದ ಬಗ್ಗೆ ಲೇಖನ ಸೇರಿಸಬಹುದು.  ವಿಕಿಪೀಡಿಯದಲ್ಲಿ ಸೇರಿಸುವ ಪ್ರತಿಯೊಂದು ಲೇಖನಕ್ಕೂ ಸೂಕ್ತ ಉಲ್ಲೇಖಗಳನ್ನು ಸೇರಿಸುವುದು ಕಡ್ಡಾಯ. ಉಲ್ಲೇಖಗಳಿಲ್ಲದ ಲೇಖನಗಳನ್ನು ಅಳಿಸುವ ಸಾಧ್ಯತೆಗಳಿರುತ್ತದೆ. ಉಳಿದಂತೆ ವಿಶ್ವಕೋಶಕ್ಕೆ ಬರೆಯುವಾಗ ಪಾಲಿಸಬೇಕಾದ ಎಲ್ಲ ನಿಯಮಗಳು ಇಲ್ಲೂ ಸಲ್ಲುತ್ತವೆ.

ಕಾಮೆಂಟ್‌ಗಳಿಲ್ಲ:

badge