ಶುಕ್ರವಾರ, ಮೇ 29, 2015

ಸ್ಮಾರ್ಟ್‌ಫೋನ್ ಮುಖ ೧: ಪ್ರಪಂಚದ ಜೊತೆಗಿನ ಸಂಪರ್ಕಸೇತು

ಹೊರಪ್ರಪಂಚದೊಡನೆ ಸಂಪರ್ಕ ಬೆಳೆಸುವುದೇ ಮೊಬೈಲಿನ ಕೆಲಸ, ಸರಿ. ಆದರೆ ಅಂತರಜಾಲ ಸೌಲಭ್ಯವಿರುವ ಸ್ಮಾರ್ಟ್‌ಫೋನುಗಳ ದೆಸೆಯಿಂದ ಇದೀಗ ಸಂಪರ್ಕವೆಂಬ ಪರಿಕಲ್ಪನೆಯ ವ್ಯಾಖ್ಯೆಯೇ ಬದಲಾಗಿಬಿಟ್ಟಿದೆ. ಪರಸ್ಪರ ದೂರದಲ್ಲಿದ್ದ ಇಬ್ಬರು ವ್ಯಕ್ತಿಗಳು ಧ್ವನಿಯ ಮೂಲಕವೋ ಪಠ್ಯದ ಮೂಲಕವೋ ಮಾತ್ರವೇ ವ್ಯವಹರಿಸಬೇಕಿದ್ದ ಪರಿಸ್ಥಿತಿ ಈಗಿಲ್ಲ; ದೂರ ಜಾಸ್ತಿಯಿದ್ದಷ್ಟೂ ದೂರವಾಣಿ ಕರೆಯ ಬೆಲೆಯೂ ಜಾಸ್ತಿಯಾಗುತ್ತಿದ್ದ ಪರಿಸ್ಥಿತಿ ಕೂಡ ಇಲ್ಲ. ವಾಟ್ಸ್‌ಆಪ್‌ನಂತಹ ಸೌಲಭ್ಯಗಳು ಪಠ್ಯ, ಚಿತ್ರ ಹಾಗೂ ಧ್ವನಿರೂಪದಲ್ಲಿ ಯಾರ ಜೊತೆಗೆ ಯಾವಾಗ ಬೇಕಿದ್ದರೂ ಸಂಪರ್ಕದಲ್ಲಿರುವುದನ್ನು ಸಾಧ್ಯವಾಗಿಸಿವೆ, ಅದೂ ಅತ್ಯಂತ ಕಡಿಮೆ ವೆಚ್ಚದಲ್ಲಿ! ಕುಟುಂಬದ ಸದಸ್ಯರು ಬೇರೆಬೇರೆ ಊರು-ದೇಶಗಳಲ್ಲಿದ್ದರೂ ಕೂಡ ಇಂತಹ ಸೌಲಭ್ಯಗಳ ಮೂಲಕ ಸದಾಕಾಲ ಪರಸ್ಪರ ಸಂಪರ್ಕದಲ್ಲಿರುವುದು ಸಾಧ್ಯ. ಎಸ್‌ಟಿಡಿ-ಐ‌ಎಸ್‌ಡಿಗಳ ದುಬಾರಿ ಬೆಲೆಯ ಬಗ್ಗೆ ಚಿಂತೆಯಿಲ್ಲದೆ ಮಾತನಾಡಿಕೊಳ್ಳುವುದು ಕೂಡ ಈಗ ಬಹು ಸುಲಭ. ಅಂತೆಯೇ ಇಮೇಲ್ ವ್ಯವಸ್ಥೆಗಳು, ಟ್ವಿಟ್ಟರ್-ಫೇಸ್‌ಬುಕ್‌ನಂತಹ ಸಮಾಜ ಜಾಲಗಳೂ ಮೊಬೈಲ್ ಮೂಲಕ ನಮ್ಮ ಬದುಕಿಗೆ ಇನ್ನಷ್ಟು ಹತ್ತಿರ ಬಂದಿವೆ. ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎನ್ನುವುದನ್ನೆಲ್ಲ ನಮ್ಮ ಆಪ್ತರಿಗೆ ಕ್ಷಣಾರ್ಧದಲ್ಲಿ ತಿಳಿಸುವ ಸೌಲಭ್ಯ ದೊರೆತಿರುವುದೂ ಮೊಬೈಲಿನಿಂದಲೇ!

ಮುಂದಿನ ವಾರ: ಕಂಪ್ಯೂಟರಿಗೊಂದು ಪುಟ್ಟ ಪರ್ಯಾಯ | ಈವರೆಗಿನ ಮುಖಗಳು

ಗುರುವಾರ, ಮೇ 28, 2015

ಮಾಯಾವಿ ಪ್ಲಾಸ್ಟಿಕ್

ಪ್ಲಾಸ್ಟಿಕ್ ಎಂಬ ಮಾಯೆ ಇಂದು ಜಗತ್ತನ್ನೇ ಆವರಿಸಿಕೊಂಡಿದೆ ಮತ್ತು ಇನ್ನೂ ಆವರಿಸಿಕೊಳ್ಳುತ್ತಿದೆ. ಅದರ ಒಳಿತು ಮತ್ತು ಕೆಡುಕುಗಳ ಅವಲೋಕನ 'ಮಾಯಾವಿ ಪ್ಲಾಸ್ಟಿಕ್ ವಸ್ತುಗಳು' ಎಂಬ ಈ ಪುಸ್ತಕದಲ್ಲಿ ಅನಾವರಣಗೊಂಡಿದೆ. ವಿಮಾನೋದ್ಯಮ, ಕೈಗಾರಿಕೆ, ವ್ಯವಸಾಯ, ವಾಹನ ತಯಾರಿಕೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗಿರುವ ಅನುಕೂಲಗಳ ವಿವರ ಈ ಪುಸ್ತಕದಲ್ಲಿದೆ. ಹಾಗೆಯೇ ಪ್ಲಾಸ್ಟಿಕ್‌ನ ಅವ್ಯಾಹತ ಬಳಕೆಯಿಂದ ಪರಿಸರದ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮಗಳು ಮತ್ತು ಅವುಗಳನ್ನು ನಿರ್ವಹಣೆ ಮಾಡುವ ವಿಧಾನಗಳ ಬಗೆಗೂ ಈ ಪುಸ್ತಕ ಗಮನಹರಿಸುತ್ತದೆ. ಬಹುವರ್ಣದ ಚಿತ್ರಗಳು ಈ ಪುಸ್ತಕದ ಅಂದವನ್ನು ಹೆಚ್ಚಿಸಿವೆ.

ಮಾಯಾವಿ ಪ್ಲಾಸ್ಟಿಕ್ ವಸ್ತುಗಳು
ಲೇಖಕರು: ಡಾ. ಟಿ. ನಿರಂಜನ ಪ್ರಭು
ಪುಟಗಳು: xii + 54, ಬೆಲೆ: ರೂ. ೭೦
ಪ್ರಕಾಶಕರು: ಸಂಚಿಕೆ ಪ್ರಕಾಶನ, ಹೊಸಪೇಟೆ (ಮೊದಲ ಮುದ್ರಣ ೨೦೧೨)

ಬುಧವಾರ, ಮೇ 27, 2015

ಸ್ಮಾರ್ಟ್‌ಫೋನ್ ಹತ್ತು ಮುಖಗಳು

ಟಿ. ಜಿ. ಶ್ರೀನಿಧಿ

ಮೊಬೈಲ್ ದೂರವಾಣಿ ನಮ್ಮ ದೇಶಕ್ಕೆ ಕಾಲಿಟ್ಟದ್ದು ಸುಮಾರು ಎರಡು ದಶಕಗಳ ಹಿಂದೆ. ಅಂದಿನ ಹ್ಯಾಂಡ್‌ಸೆಟ್ಟುಗಳು ಇವತ್ತಿನ ಕಾರ್ಡ್‌ಲೆಸ್ ಫೋನುಗಳಿಗಿಂತ ದೊಡ್ಡದಾಗಿದ್ದವು. ಇನ್ನು ಫೋನಿನಲ್ಲಿ ಮಾತನಾಡಬೇಕು ಎಂದರಂತೂ ಅದು ನಿಮಿಷಕ್ಕೆ ಹತ್ತಾರು ರೂಪಾಯಿಗಳ ವ್ಯವಹಾರವಾಗಿತ್ತು. ಆ ದಿನಗಳಲ್ಲಿ ನಾವು ಮಾಡುವ ಕರೆಗಷ್ಟೇ ಅಲ್ಲ, ನಮಗೆ ಯಾರಾದರೂ ಕರೆಮಾಡಿದರೆ ಅದಕ್ಕೂ ನಾವೇ ದುಡ್ಡುಕೊಡಬೇಕಿತ್ತು. ಹೀಗೊಮ್ಮೆ ನಮ್ಮ ಪರಿಚಿತರೊಬ್ಬರಿಗೆ ಕೊರಿಯರ್ ಮೂಲಕ ಏನನ್ನೋ ಕಳುಹಿಸುವುದಿತ್ತು. ಲಕೋಟೆಯ ಮೇಲೆ ಅವರ ವಿಳಾಸದ ಜೊತೆಗೆ ಮೊಬೈಲ್ ಸಂಖ್ಯೆಯನ್ನೂ ಬರೆದದ್ದಕ್ಕಾಗಿ ಹೀಗೆಲ್ಲ ನನ್ನ ನಂಬರ್ ಬರೆಯುತ್ತೀಯಲ್ಲ, ಅವರು ವಿಳಾಸ ಕೇಳಿ ಫೋನು ಮಾಡಿದರೆ ನನಗೆಷ್ಟು ದುಡ್ಡು ಖರ್ಚಾಗುತ್ತೆ ಗೊತ್ತಾ? ಅಂತ ಬೈಸಿಕೊಂಡ ನೆನಪು ಇನ್ನೂ ಇದೆ!

ಪ್ರಾರಂಭಿಕ ವರ್ಷಗಳಲ್ಲಿ ಮೊಬೈಲಿನ ಉಪಯೋಗಗಳು ಬಹು ಸೀಮಿತವಾಗಿಯೇ ಇದ್ದವು. ದೂರವಾಣಿ ಕರೆ, ಎಸ್ಸೆಮ್ಮೆಸ್ - ಇವೆರಡೇ ಅಂದಿನ ಮುಖ್ಯ ಉಪಯೋಗಗಳಾಗಿದ್ದವು ಎಂದರೂ ಸರಿಯೇ.

ಮುಂದೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿಯಾಯಿತು, ಮೊಬೈಲ್ ಸಂಪರ್ಕ ಪಡೆಯುವುದು ಸುಲಭವಷ್ಟೇ ಅಲ್ಲ, ಬಹಳ ಅಗ್ಗವೂ ಆಯಿತು. ಮೊಬೈಲ್ ಸಂಪರ್ಕಕ್ಕಾಗಿ ಮಾಡಬೇಕಾದ ಖರ್ಚು ಕಡಿಮೆಯಾಗುತ್ತಿದ್ದಂತೆ ಅದರ ಜನಪ್ರಿಯತೆಯೂ ತಾನೇತಾನಾಗಿ ಏರಿತು. ಆಮೇಲೆ ಬಂದ ಸ್ಮಾರ್ಟ್‌ಫೋನುಗಳಂತೂ ಕ್ರಾಂತಿಯನ್ನೇ ತಂದವು; ಅವುಗಳ ಮೂಲಕ ಮೊಬೈಲುಗಳೆಲ್ಲ ಕಂಪ್ಯೂಟರುಗಳಾಗಿ ಜಗತ್ತೇ ನಮ್ಮ ಅಂಗೈಗೆ ಬಂತು.

ಸೋಮವಾರ, ಮೇ 25, 2015

ವಿಶ್ವಕೋಶಗಳಿಗಾಗಿ ಬರೆವಣಿಗೆ

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಯು. ಬಿ. ಪವನಜ

ವಿಜ್ಞಾನಬರೆವಣಿಗೆಯಲ್ಲಿ ಹಲವು ವಿಭಾಗಗಳಿವೆ. ಅವುಗಳನ್ನು ಸ್ಥೂಲವಾಗಿ ಎರಡು ವಿಭಾಗಗಳಾಗಿ ಮಾಡಬಹುದು. ಮೊದಲನೆಯದು ಜನಪ್ರಿಯ ವಿಜ್ಞಾನ ಬರೆವಣಿಗೆ. ಎರಡನೆಯದು ವಿಶ್ವಕೋಶ ನಮೂನೆಯ ಬರೆವಣಿಗೆ. ವಿಶ್ವಕೋಶಗಳಿಗೆ ಬರೆಯುವುದು ಹೇಗೆ ಎಂಬುದು ಈ ಲೇಖನದ ವಿಷಯ.

ವಿಶ್ವಕೋಶ ಎಂದರೇನು?
ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದಲ್ಲಿ ವಿಶ್ವಕೋಶದ ಬಗೆಗೆ ಈ ರೀತಿ ವಿವರಣೆ ನೀಡಲಾಗಿದೆ:
ಜ್ಞಾನದ ವಿವಿಧ ಶಾಖೆಗಳ ಬಗೆಗಿನ ಮಾಹಿತಿಗಳನ್ನು ಸಂಪಾದಿಸಿ, ಸಂಸ್ಕರಿಸಿ, ಬಿಡಿಲೇಖನಗಳನ್ನು ಅಕಾರಾದಿಯಾಗಿ ಅಳವಡಿಸಿರುವ ಪರಾಮರ್ಶನ ಗ್ರಂಥ (ಎನ್‌ಸೈಕ್ಲೊಪೀಡಿಯ).

ಬುಧವಾರ, ಮೇ 20, 2015

ಮಕ್ಕಳ ವಿಜ್ಞಾನಕ್ಕೊಂದು ಮಾದರಿ

ಡಾ. ಎಮ್. ಜೆ. ಸುಂದರ್ ರಾಮ್ ಅವರ 'ಮಕ್ಕಳ ವಿಜ್ಞಾನ' ಕೃತಿಯ ಪರಿಚಯ
ಕೆ.ಎಸ್. ನವೀನ್

ಹೀಗೆ ಯೋಚಿಸಿ: ಜೀವಂತ ವ್ಯಕ್ತಿಯೊಬ್ಬನ ಜಠರಕ್ಕೊಂದು ರಂಧ್ರ ಕೊರೆದು ರೊಟ್ಟಿಯ ಚೂರಿಗೆ ದಾರ ಕಟ್ಟಿ ಅದರ ಮೂಲಕ ಜಠರದೊಳಗೆ ಇಳಿಬಿಟ್ಟು ಪದೇ ಪದೇ ಹೊರಕ್ಕೆ ತೆಗೆದು ಅದೆಷ್ಟು ಜೀರ್ಣವಾಗಿದೆ ಎಂದು ಪರೀಕ್ಷಿಸಿದರೆ...? ಇದ್ಯಾವ ರಾಕ್ಷಸ ಸಂಶೋಧನೆ ಎನ್ನುವಿರಾ? ಇರಿ ಇರಿ ಇದು ಇಂದಿನದಲ್ಲ ವೈದ್ಯ ಜಗತ್ತು ಆಹಾರ ಹೇಗೆ ಜೀರ್ಣವಾಗುತ್ತದೆ ಎಂಬುದು ತಿಳಿಯದಿದ್ದ ಕಾಲದಲ್ಲಿ ವೈದ್ಯವಿಜ್ಞಾನಿಯೊಬ್ಬರು ಅಕಸ್ಮಾತ್ ಆಗಿ ಗುಂಡು ತಗುಲಿ ಜಠರಕ್ಕೆ ಕಿಟಕಿ ಮೂಡಿತೇನೋ ಎಂಬಂತಾಗಿದ್ದ ವ್ಯಕ್ತಿಯ ಮೇಲೆ ಪ್ರಯೋಗ ನಡೆಸಿ ಜೀರ್ಣಕ್ರಿಯೆಯನ್ನು ಕುರಿತ ಅನೇಕ ಆವರೆಗೂ ತಿಳಿಯದಿದ್ದ ಸಂಗತಿಗಳನ್ನು ಕಂಡುಹಿಡಿಯುತ್ತಾನೆ! ಈ ವಿವರಗಳು ಡಾ. ಸುಂದರ್ ರಾಮ್ ಮಕ್ಕಳಿಗಾಗಿ ಬರೆದಿರುವ "ಮಕ್ಕಳ ವಿಜ್ಞಾನ" ಎಂಬ ಪುಸ್ತಕದಲ್ಲಿದೆ. ಒಂದು ಪತ್ತೆದಾರಿ ಕತೆಗಿಂತಲೂ ರೋಚಕವಾಗಿ ಆದರೆ ವಿಜ್ಞಾನಕ್ಕೆ ಒಂದಿನಿತೂ ಚ್ಯುತಿಬರದಂತೆ ಮಕ್ಕಳಿಗೆ ವಿಜ್ಞಾನ ಹೇಗೆ ಬರೆಯಬೇಕು ಎನ್ನುವುದಕ್ಕೊಂದು ಉತ್ತಮ ಉದಾಹರಣೆಯನ್ನು ಡಾ. ಸುಂದರ್ ರಾಮ್ ನಿರ್ಮಿಸಿಕೊಟ್ಟಿದ್ದಾರೆ.

"ಮಕ್ಕಳ ವಿಜ್ಞಾನ" ಎಂಬ ಈ ಪುಸ್ತಕದಲ್ಲಿ ಒಟ್ಟು ಒಟ್ಟು ೨೦ ಅಧ್ಯಾಯಗಳಿವೆ. ಪಠ್ಯಪುಸ್ತಕ ಸಂಘದ ಸಂಯೋಜಕರಾದ ಜಿ.ಎಸ್. ಮುಡಂಬಡಿತ್ತಾಯ ಅವರ ಮುನ್ನುಡಿಯೊಂದಿಗೆ ಅಧ್ಯಾಯಗಳನ್ನು ಯಥೋಚಿತವಾಗಿ ಜೋಡಿಸಲಾಗಿದೆ.

ಪ್ರತಿಯೊಂದು ಅಧ್ಯಾಯದಲ್ಲಿ ಇದರ ಓದುಗರು ಮಕ್ಕಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಬರೆದಿರುವುದು ಗೋಚರವಾಗುತ್ತದೆ.

ಸೋಮವಾರ, ಮೇ 18, 2015

ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳು

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಟಿ. ಜಿ. ಶ್ರೀನಿಧಿ

ವಿಜ್ಞಾನ ತಂತ್ರಜ್ಞಾನದ ಪ್ರಪಂಚದಲ್ಲಿ ದಿನವೂ ಹೊಸ ಸಂಗತಿಗಳು ಘಟಿಸುತ್ತಿರುತ್ತವೆ. ಈ ಪೈಕಿ ಕೆಲವು ನಮ್ಮ ಪಾಲಿಗೆ ಮಾಹಿತಿಯಷ್ಟೇ ಆಗಿದ್ದರೆ ಇನ್ನು ಕೆಲವು ನಮ್ಮ ನೇರ ಸಂಪರ್ಕಕ್ಕೂ ಬರುವಂತಿರುತ್ತವೆ. ಇಂತಹ ಪ್ರತಿಯೊಂದು ಸಂಗತಿ ಘಟಿಸಿದಾಗಲೂ ಅದನ್ನು ಸಾಮಾನ್ಯ ಜನತೆಗೆ ತಿಳಿಸುವ ಕೆಲಸ ವಿಜ್ಞಾನ ಸಂವಹನಕಾರರದ್ದು. ಹೀಗೆ ವಿಜ್ಞಾನ-ತಂತ್ರಜ್ಞಾನವನ್ನು ಜನರಿಗೆ ತಲುಪಿಸುವ ಮಾರ್ಗಗಳಲ್ಲಿ ಪತ್ರಿಕೆಗಳಿಗೆ ಲೇಖನ ಬರೆಯುವುದು ಕೂಡ ಒಂದು. ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳನ್ನು ಬರೆಯುವಾಗ ಗಮನದಲ್ಲಿಟ್ಟುಕೊಳ್ಳಬಹುದಾದ ಕೆಲವು ಅಂಶಗಳು ಇಲ್ಲಿವೆ.

ವಿಷಯದ ಆಯ್ಕೆ ಹೊಸ ಆವಿಷ್ಕಾರ, ಈಗಷ್ಟೆ ಘಟಿಸಿದ ಯಾವುದೋ ಸಂಗತಿ, ಪ್ರಮುಖ ಘಟನೆಯೊಂದರ ವಾರ್ಷಿಕೋತ್ಸವ ಅಥವಾ ಯಾವುದೋ ದಿನಾಚರಣೆಯ ಸಂದರ್ಭ - ಇವೆಲ್ಲವೂ ವಿಜ್ಞಾನ ಲೇಖನಕ್ಕೆ ಸೂಕ್ತ ವಿಷಯ ಒದಗಿಸಬಲ್ಲವು.

ಇಂತಹ ಯಾವುದೇ ವಿಷಯವನ್ನು ಥಟ್ಟನೆ ಗುರುತಿಸಬೇಕಾದರೆ ಸಂವಹನಕಾರರಾದ ನಾವು ನಿರಂತರವಾಗಿ ಅಧ್ಯಯನಶೀಲರಾಗಿರಬೇಕು, ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿರಬೇಕು. ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಸಿಗುವಂತೆ ಇಟ್ಟುಕೊಳ್ಳಬೇಕಾದ್ದೂ ಅತ್ಯಗತ್ಯ.

ಭಾನುವಾರ, ಮೇ 17, 2015

ವಿಜ್ಞಾನ ಸಾಹಿತ್ಯದ ಮಾರ್ಗ ಪ್ರವರ್ತಕ ಪ್ರೊ. ಜೆ.ಆರ್. ಲಕ್ಷ್ಮಣರಾವ್

ಟಿ.ಆರ್. ಅನಂತರಾಮು

ಇದು 1937ರ ಸಂಗತಿ. ಕುವೆಂಪು ಅವರು ತಾರುಣ್ಯದಲ್ಲಿದ್ದ ಘಟ್ಟ; 32ರ ಹರೆಯ. ಮೈಸೂರಿನಲ್ಲಿ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಅವರು ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ವನ್ನು ಬೋಧಿಸುವ ಮೊದಲು ವಿಜ್ಞಾನ ವಿದ್ಯಾರ್ಥಿಗಳನ್ನು ಕುರಿತು ‘ನಿಮ್ಮಲ್ಲಿ ಬಹುಪಾಲು ಜನ ಗ್ರಿಗೊರಿ ಮತ್ತು ಹಾಡ್ಜಸ್ ಪುಸ್ತಕದಲ್ಲಿ ಏನಿದೆಯೋ ಅದೇ ವಿಜ್ಞಾನ ಎಂದು ತಿಳಿದಿರುವಿರಿ.

ಅದು ಸರಿಯಲ್ಲ, ಪಠ್ಯಕ್ರಮದಲ್ಲಿ ಎರಡೋ, ಮೂರೋ ವಿಜ್ಞಾನ ಶಾಖೆಗಳನ್ನು ನಿಮ್ಮ ವ್ಯಾಸಂಗಕ್ಕೆ ನಿಗದಿ ಮಾಡಬಹುದು ಅಷ್ಟೇ. ಇನ್ನೂ ಉನ್ನತ ವ್ಯಾಸಂಗ ಕೈಗೊಂಡಾಗ ನಿಮ್ಮ ವ್ಯಾಸಂಗ ಯಾವುದಾದರೂ ಒಂದು ವಿಜ್ಞಾನ ಶಾಖೆಗೆ ಸೀಮಿತವಾಗುತ್ತದೆ. ಆದರೆ ನಿಮ್ಮ ವ್ಯಾಸಂಗವನ್ನು ಆ ಒಂದು ಶಾಖೆಗೆ ಸೀಮಿತಗೊಳಿಸಿ ನೀವು ಕೂಪಕೂರ್ಮ ಗಳಾಗಬಾರದು.

ಇತರ ಶಾಖೆಗಳ ಪರಿಚಯವನ್ನು ಸ್ಥೂಲವಾಗಿಯಾದರೂ ಮಾಡಿಕೊಳ್ಳಬೇಕು. ವಿಜ್ಞಾನದ ವ್ಯಾಪ್ತಿಯನ್ನರಿತು, ವಿಜ್ಞಾನ ಮಾರ್ಗದ ಪರಿಚಯ ಮಾಡಿಕೊಂಡು ವೈಜ್ಞಾನಿಕ ದೃಷ್ಟಿಯನ್ನು ಮೈಗೂಡಿಸಿಕೊಳ್ಳುವುದು ಬಹುಮುಖ್ಯ. ತಜ್ಞರಲ್ಲದ ಸಾಮಾನ್ಯ ಓದುಗರಿಗಾಗಿಯೇ ರಚಿಸಿದ ಪುಸ್ತಕಗಳಿರುತ್ತವೆ.

ಅಂಥ ಪುಸ್ತಕಗಳನ್ನೋದುವುದರಿಂದ ಇತರ ವಿಜ್ಞಾನ ಶಾಖೆಗಳ ಪರಿಚಯ ಮಾಡಿಕೊಳ್ಳಬಹುದು’ ಎಂದು ಹೇಳಿ ಪ್ರಖ್ಯಾತ ಖಗೋಳ ವಿಜ್ಞಾನಿ ಸರ್ ಜೇಮ್ಸ್ ಜೀನ್ಸ್ ಬರೆದಿರುವ ‘ಮೀಸ್ಟೀರಿಯಸ್ ಯೂನಿವರ್ಸ್’ ಎಂಬ ಪುಸ್ತಕವನ್ನು ತೋರಿಸಿದರು. ‘ಇದು ತುಂಬಾ ಸ್ವಾರಸ್ಯಕರವಾಗಿದೆ. ನಮ್ಮಂಥಹವರು ಸಹ ಇದನ್ನು ಓದಿ ಅರ್ಥಮಾಡಿಕೊಳ್ಳಬಹುದು’ ಎಂದು ಒಳ್ಳೆಯ ಪೀಠಿಕೆಯನ್ನೇ ಹಾಕಿದರು.

ಕುವೆಂಪು ಮಾತುಗಳು ಯಾರ ಮೇಲೆ ಹೇಗೆ ಪ್ರಭಾವ ಬೀರಿದವೋ, ವಿದ್ಯಾರ್ಥಿ ಜೆ.ಆರ್. ಲಕ್ಷ್ಮಣರಾವ್ ಅವರಂತೂ ಆ ಮಾತುಗಳ ಮೋಡಿಗಂತೂ ಸಿಲುಕಿದರು.

ಸೋಮವಾರ, ಮೇ 11, 2015

ಟ್ಯಾಬ್ಲೆಟ್ಟೂ ಹೌದು, ಲ್ಯಾಪ್‌ಟಾಪೂ ಹೌದು: ಇದು ಟೂ-ಇನ್-ಒನ್ ಕಂಪ್ಯೂಟರ್!

ಟಿ. ಜಿ. ಶ್ರೀನಿಧಿ

ಈಚಿನ ವರ್ಷಗಳಲ್ಲಿ ನಾವು ಸ್ಪರ್ಶಸಂವೇದಿ ಪರದೆಗಳಿಗೆ (ಟಚ್‌ಸ್ಕ್ರೀನ್), ಅದನ್ನು ಬಳಸುವ ಟ್ಯಾಬ್ಲೆಟ್ಟಿನಂತಹ ಸಾಧನಗಳಿಗೆ ಚೆನ್ನಾಗಿಯೇ ಒಗ್ಗಿಕೊಂಡಿದ್ದೇವೆ. ವಾಟ್ಸಾಪ್‌ನಲ್ಲಿ ಟೈಪಿಸಲಿಕ್ಕೆ, ಬ್ರೌಸಿಂಗ್ ಮಾಡಲಿಕ್ಕೆಲ್ಲ ಟಚ್‌ಸ್ಕ್ರೀನ್ ಉಪಯೋಗ ನಮಗೆ ಬಹಳ ಸಲೀಸು. ಸೋಫಾಗೆ ಒರಗಿಕೊಂಡೋ ಮಂಚದ ಮೇಲೆ ಮಲಗಿಕೊಂಡೋ ಯೂಟ್ಯೂಬ್ ನೋಡುವುದಕ್ಕೆ-ಕತೆಪುಸ್ತಕ ಓದುವುದಕ್ಕೂ ಟ್ಯಾಬ್ಲೆಟ್ಟುಗಳು ಹೇಳಿ ಮಾಡಿಸಿದ ಜೋಡಿ.

ಆದರೆ ಉದ್ದನೆಯದೊಂದು ಇಮೇಲನ್ನೋ ಬ್ಲಾಗಿನ ಬರಹವನ್ನೋ ಟೈಪಿಸಬೇಕೆಂದು ಹೇಳಿ, ಟ್ಯಾಬ್ಲೆಟ್ಟಿನ ಕಟ್ಟಾ ಅಭಿಮಾನಿಗಳೂ ಡೆಸ್ಕ್‌ಟಾಪೋ ಲ್ಯಾಪ್‌ಟಾಪೋ ಇದ್ದರೆ ಚೆನ್ನಾಗಿತ್ತಲ್ಲ ಎಂದು ಗೊಣಗಿಕೊಳ್ಳುತ್ತಾರೆ. ಈ ಕೆಲಸವನ್ನೆಲ್ಲ ಟಚ್‌ಸ್ಕ್ರೀನಿನಲ್ಲಿ ಮಾಡುವುದು ಸಾಧ್ಯವಿಲ್ಲ ಎಂದಲ್ಲ, ಕೀಲಿಮಣೆಯಲ್ಲಿ ಟೈಪಿಸಿದಷ್ಟು ವೇಗವಾಗಿ ಟಚ್‌ಸ್ಕ್ರೀನನ್ನು ಕುಟ್ಟುವುದು ಕಷ್ಟ ಎನ್ನುವುದು ಅವರ ಗೊಣಗಾಟಕ್ಕೆ ಕಾರಣ.

ನಿಜ, ಟ್ಯಾಬ್ಲೆಟ್ಟುಗಳನ್ನು ಸಣ್ಣಪುಟ್ಟ ಕೆಲಸಗಳಿಗೆ ಅಥವಾ ಮನರಂಜನೆಯ ಅಗತ್ಯಗಳಿಗೆ ಬಳಸಿದಷ್ಟು ಸುಲಭವಾಗಿ ಹೆಚ್ಚಿನ ಟೈಪಿಂಗ್ ನಿರೀಕ್ಷಿಸುವ ಕೆಲಸಗಳಿಗೆ ಬಳಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಬಹಳಷ್ಟು ಬಳಕೆದಾರರು ಟ್ಯಾಬ್ಲೆಟ್ಟನ್ನು ತಮ್ಮಲ್ಲಿರುವ ಡೆಸ್ಕ್‌ಟಾಪ್-ಲ್ಯಾಪ್‌ಟಾಪುಗಳ ಜೊತೆಗೆ ಬಳಸುತ್ತಾರೆ: ಇಂತಿಷ್ಟು ಕೆಲಸಕ್ಕೆ ಟ್ಯಾಬೆಟ್ಟು, ಮಿಕ್ಕಿದ್ದಕ್ಕೆ ಲ್ಯಾಪ್‌ಟಾಪು ಎನ್ನುವುದು ಅನೇಕರು ಪಾಲಿಸುವ ಸೂತ್ರ.

ಹಿಂದಿನ ಕಾಲದಲ್ಲಿ ಎಲ್ಲ ಮನೆಗಳಲ್ಲೂ ರೇಡಿಯೋ ಇರುತ್ತಿತ್ತು, ದೊಡ್ಡ ಪೆಟ್ಟಿಗೆಯ ಗಾತ್ರದ್ದು. ಆಮೇಲೆ ಯಾವಾಗಲೋ ಟೇಪ್ ರೆಕಾರ್ಡರ್ ಮಾರುಕಟ್ಟೆಗೆ ಬಂತು; ರೇಡಿಯೋದಲ್ಲಿ ಬರುವ ಹಾಡನ್ನಷ್ಟೇ ಕೇಳಬೇಕಾದ ಅನಿವಾರ್ಯತೆ ಹೋಗಿ ನಮಗಿಷ್ಟವಾದ ಹಾಡನ್ನು ಬೇಕಾದಾಗ ಬೇಕಾದಷ್ಟು ಸಲ ಕೇಳುವುದು ಸಾಧ್ಯವಾಯಿತು. ರೇಡಿಯೋ ಜೊತೆಗೆ ಈ ಹೊಸ ಸಾಧನವನ್ನೂ ಮನೆಯಲ್ಲಿಟ್ಟುಕೊಳ್ಳುವುದು ಒಂದಷ್ಟು ದಿನದ ಮಟ್ಟಿಗೆ ಫ್ಯಾಶನಬಲ್ ಅನಿಸಿತೇನೋ ಸರಿ; ಆದರೆ ಕೊಂಚ ಸಮಯದ ನಂತರ ಎರಡೆರಡು ಪೆಟ್ಟಿಗೆಗಳೇಕಿರಬೇಕು ಎನ್ನುವ ಯೋಚನೆ ಶುರುವಾಯಿತು. ಆಗ ಬಂದದ್ದು ರೇಡಿಯೋ ಸೌಲಭ್ಯವೂ ಇರುವ ಟೇಪ್‌ರೆಕಾರ್ಡರ್, ಅರ್ಥಾತ್ 'ಟೂ-ಇನ್-ಒನ್'.

ಕಂಪ್ಯೂಟರ್ ಲೋಕದ ಸದ್ಯದ ಪರಿಸ್ಥಿತಿ ಹೆಚ್ಚೂಕಡಿಮೆ ಹೀಗೆಯೇ ಇದೆ. ಲ್ಯಾಪ್‌ಟಾಪ್ - ಟ್ಯಾಬ್ಲೆಟ್ ಎರಡನ್ನೂ ನಿಭಾಯಿಸುವುದು ಬಲು ಕಿರಿಕಿರಿಯ ಸಂಗತಿ ಎಂಬ ಅಭಿಪ್ರಾಯ ಈಗಾಗಲೇ ಕೇಳಿಬರುತ್ತಿದೆ. ಎರಡೆರಡು ಸಾಧನಗಳಲ್ಲಿ ತಂತ್ರಾಂಶಗಳನ್ನು ನಿಭಾಯಿಸುವುದು, ಸದಾಕಾಲ ಚಾರ್ಜ್ ಇರುವಂತೆ ನೋಡಿಕೊಳ್ಳುವುದು ಮುಂತಾದ ತಲೆಬಿಸಿಯೆಲ್ಲ ಏಕೆ, ಇಲ್ಲೂ ಒಂದು ಟೂ-ಇನ್-ಒನ್ ಬರಬಹುದಲ್ಲ ಎನ್ನುವುದು ಅನೇಕರ ಮನಸ್ಸಿನಲ್ಲಿರುವ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರ, ಟೂ-ಇನ್-ಒನ್ ಅಥವಾ ಹೈಬ್ರಿಡ್ ಕಂಪ್ಯೂಟರುಗಳ ರೂಪದಲ್ಲಿ ಈಗಾಗಲೇ ಸಿದ್ಧವಾಗಿಬಿಟ್ಟಿದೆ

ಬುಧವಾರ, ಮೇ 6, 2015

ಕಂಪ್ಯೂಟರ್ ವಿಜ್ಞಾನ ಮತ್ತು ನಾವು

ಕಂಪ್ಯೂಟರ್ ವಿಜ್ಞಾನದ ಪರಿಚಯ ಆ ಕ್ಷೇತ್ರದಲ್ಲಿ ಕೆಲಸಮಾಡುವವರಿಗಷ್ಟೆ ಸೀಮಿತವಾಗಿರಬೇಕೇ? ಹೀಗೊಂದು ಯೋಚನಾಲಹರಿ...
ಟಿ. ಜಿ. ಶ್ರೀನಿಧಿ

ನಮ್ಮ ದಿನನಿತ್ಯದ ಬದುಕಿನ ಹತ್ತಾರು ಕೆಲಸಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕಂಪ್ಯೂಟರುಗಳನ್ನು ಬಳಸುತ್ತೇವೆ. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳಿಂದ ಪ್ರಾರಂಭಿಸಿ ಅಂಗೈಯಲ್ಲಿನ ಸ್ಮಾರ್ಟ್‌ಫೋನುಗಳವರೆಗೆ ಹಲವು ಬಗೆಯ ಕಂಪ್ಯೂಟರುಗಳ ಪರಿಚಯ ನಮ್ಮೆಲ್ಲರಿಗೂ ಇದೆ.

ಕಂಪ್ಯೂಟರ್ ಬಳಕೆಯಾಗುತ್ತಿರುವುದು ನಮ್ಮ ವೈಯಕ್ತಿಕ ಕೆಲಸಗಳಲ್ಲಷ್ಟೇ ಅಲ್ಲ. ಕಚೇರಿಗಳಿಂದ ಕಾರ್ಖಾನೆಗಳವರೆಗೆ, ರಸ್ತೆಸಾರಿಗೆಯಿಂದ ರಾಕೆಟ್ಟುಗಳವರೆಗೆ ಅದೆಷ್ಟೋ ಕ್ಷೇತ್ರಗಳ ಅಸಂಖ್ಯ ವಿದ್ಯಮಾನಗಳು ಕಂಪ್ಯೂಟರುಗಳನ್ನು ಬಳಸುತ್ತಿವೆ. ಕಂಪ್ಯೂಟರುಗಳಿಂದಾಗಿ ನಮ್ಮ ಪ್ರಪಂಚ ಕೆಲಸಮಾಡುವ ವಿಧಾನವೇ ಬದಲಾಗುತ್ತಿದೆ ಎಂದರೂ ಸರಿಯೇ.

ಕಂಪ್ಯೂಟರುಗಳು ಇಷ್ಟೆಲ್ಲ ಕೆಲಸಮಾಡುತ್ತವೆ ಎಂದಮಾತ್ರಕ್ಕೆ ಅವಕ್ಕೆ ಸ್ವಂತ ಬುದ್ಧಿಯಿದೆ ಎಂದಾಗಲೀ, ಮಾಡುತ್ತಿರುವ ಕೆಲಸದ ಪರಿಣಾಮ ಅವಕ್ಕೆ ಅರ್ಥವಾಗುತ್ತದೆ ಎಂದಾಗಲೀ ಭಾವಿಸುವಂತಿಲ್ಲ. ತನ್ನಲ್ಲಿರುವ ಸಾಫ್ಟ್‌ವೇರ್ ಏನು ಹೇಳುತ್ತದೋ ಅದನ್ನು ಕಣ್ಣುಮುಚ್ಚಿಕೊಂಡು ಪಾಲಿಸುವುದಷ್ಟೇ ಕಂಪ್ಯೂಟರಿನ ಕೆಲಸ.

ಇಂತಿಷ್ಟು ಅಂಶಗಳು ಪೂರಕವಾಗಿದ್ದರೆ ಮಾತ್ರ ಸಾಲ ಮಂಜೂರು ಮಾಡಬೇಕೆಂದು ಸಾಫ್ಟ್‌ವೇರಿನಲ್ಲಿದೆ ಎಂದುಕೊಳ್ಳೋಣ; ಅದರಲ್ಲಿ ಒಂದೇ ಅಂಶ ವ್ಯತಿರಿಕ್ತವಾಗಿದ್ದರೂ ಸಾಲದ ಅರ್ಜಿ ತಿರಸ್ಕೃತವಾಗುತ್ತದೆ. ವಿಮಾನದ ಇಂತಿಷ್ಟು ಟಿಕೇಟುಗಳನ್ನು ಇಂತಿಷ್ಟೇ ಬೆಲೆಗೆ ಮಾರಬೇಕು ಎಂದು ಸಾಫ್ಟ್‌ವೇರ್ ಹೇಳಿದರೆ ಕಂಪ್ಯೂಟರ್ ಅದನ್ನು ಚಾಚೂತಪ್ಪದೆ ಪಾಲಿಸುತ್ತದೆ. ಮಾರಾಟಕ್ಕಿರುವ ವಸ್ತುಗಳ ಮೇಲೆ ಬೇರೆಬೇರೆ ಸಮಯಗಳಲ್ಲಿ ಬೇರೆಬೇರೆ ಪ್ರಮಾಣದ ರಿಯಾಯಿತಿ ನೀಡುವ ಆನ್‌ಲೈನ್ ಅಂಗಡಿಯ ಸಾಫ್ಟ್‌ವೇರ್ ಶೇ. ೨೫ರ ಬದಲು ಶೇ. ೯೫ರ ರಿಯಾಯಿತಿಯನ್ನು - ತಪ್ಪು ಲೆಕ್ಕಾಚಾರದಿಂದಾಗಿ - ಘೋಷಿಸಿದರೆ ಕಂಪ್ಯೂಟರ್ ಅದನ್ನೂ ಮರುಮಾತಿಲ್ಲದೆ ಅನುಷ್ಠಾನಗೊಳಿಸಿಬಿಡುತ್ತದೆ.

ಒಟ್ಟಿನಲ್ಲಿ ಯಾವುದೋ ಕೆಲಸವನ್ನು ಕಂಪ್ಯೂಟರ್ ಮಾಡುತ್ತದೆ ಎನ್ನುವುದಕ್ಕಿಂತ ಸಾಫ್ಟ್‌ವೇರ್ ಆ ಕೆಲಸವನ್ನು ಮಾಡಿಸುತ್ತದೆ ಎನ್ನುವುದೇ ಹೆಚ್ಚು ಸಮಂಜಸ. ಅಲ್ಲಿಗೆ ನಮ್ಮ ಬದುಕಿನ ಮೇಲೆ ಸಾಫ್ಟ್‌ವೇರಿನ ಪ್ರಭಾವ ಸಾಕಷ್ಟು ಪ್ರಮಾಣದಲ್ಲೇ ಇದೆ ಎನ್ನಬಹುದು.

ನಮಗೆ ಬೇಕೋ ಬೇಡವೋ, ಕಂಪ್ಯೂಟರುಗಳು ಮತ್ತು ಅವುಗಳಲ್ಲಿನ ಸಾಫ್ಟ್‌ವೇರ್ ನಮ್ಮ ಅನೇಕ ಕೆಲಸಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡುಬಿಟ್ಟಿವೆ ನಿಜ. ಆದರೆ ನಮಗೆ ಬೇಕಾದ ಕೆಲಸ ಮಾಡಿಕೊಡಲು ಅವುಗಳಿಗೆ ಸಾಧ್ಯವಾಗುವುದು ಹೇಗೆ?
badge