ಶುಕ್ರವಾರ, ಜೂನ್ 14, 2013

ಬದುಕು ಮತ್ತು ತಂತ್ರಜ್ಞಾನ

ಟಿ. ಜಿ. ಶ್ರೀನಿಧಿ

ನಮ್ಮ ಬದುಕಿನಲ್ಲಿ ತಂತ್ರಜ್ಞಾನದ ಪಾತ್ರ ಈಚಿನ ಕೆಲವರ್ಷಗಳಲ್ಲಿ ತೀವ್ರವೇ ಎನಿಸುವ ಮಟ್ಟದ ಬದಲಾವಣೆ ಕಂಡಿದೆ. ತಂತ್ರಜ್ಞಾನ ಅಂದಾಕ್ಷಣ ಕಂಪ್ಯೂಟರ್, ಫೋನ್, ಟ್ಯಾಬ್ಲೆಟ್ ಎಂದೆಲ್ಲ ಬೇರೆಬೇರೆ ಗ್ಯಾಜೆಟ್‌ಗಳತ್ತ ಕೈತೋರಿಸುತ್ತಿದ್ದ ನಮ್ಮ ಮೈಮೇಲೆಯೇ ಈಗ ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಕಾಣಿಸಿಕೊಳ್ಳುತ್ತಿವೆ. ಬಟ್ಟೆ-ಚಪ್ಪಲಿ-ಬೆಲ್ಟುಗಳಷ್ಟೇ ಸಹಜವಾಗಿ ನಮ್ಮ ಉಡುಪಿನ ಅಂಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಈ ಆವಿಷ್ಕಾರಗಳದು 'ವೇರಬಲ್ ಟೆಕ್' ಎಂಬ ಹೊಸದೇ ಆಗ ಗುಂಪು.

ಸದಾಕಾಲವೂ ನಮ್ಮೊಂದಿಗೇ ಇದ್ದು ಬೇರೆಬೇರೆ ರೀತಿಯಲ್ಲಿ ನಮ್ಮ ಬದುಕಿನ ಕುರಿತ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುವುದು ಈ ಸಾಧನಗಳ ಮೂಲ ಉದ್ದೇಶ. ಬೆಳಗಿನಿಂದ ರಾತ್ರಿಯವರೆಗೆ ನಾವು ಏನೇನೆಲ್ಲ ಮಾಡುತ್ತೇವೆ ಎನ್ನುವುದನ್ನು ಚಿತ್ರಗಳಲ್ಲೋ ವೀಡಿಯೋ ರೂಪದಲ್ಲೋ ದಾಖಲಿಸಿಕೊಳ್ಳುವುದರಿಂದ ಪ್ರಾರಂಭಿಸಿ ರಾತ್ರಿ ಮಲಗಿದಾಗ ನಮಗೆ ಗಾಢನಿದ್ರೆ ಬರುತ್ತದೋ ಇಲ್ಲವೋ ಎಂದು ಗಮನಿಸುವುದರ ತನಕ ವೇರಬಲ್ ಟೆಕ್ ಸಾಧನಗಳ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿರುತ್ತದೆ. ಬೆಳಗಿನಿಂದ ಸಂಜೆಯವರೆಗೆ ನಾನು ಎಷ್ಟು ದೈಹಿಕ ಚಟುವಟಿಕೆಗಳಲ್ಲಿ ತೊಡಗಿದ್ದೆ, ಆ ಚಟುವಟಿಕೆಗಳಿಂದಾಗಿ ಎಷ್ಟು ಕ್ಯಾಲರಿ ಖರ್ಚಾಯಿತು ಎಂದೆಲ್ಲ ಗಮನಿಸಿ ಹೇಳುವ ಸಾಧನಗಳೂ ಇವೆ. ವೇರಬಲ್ ಟೆಕ್ನಾಲಜಿ ಕ್ಷೇತ್ರದ ಈವರೆಗಿನ ಅತ್ಯುನ್ನತ ಆವಿಷ್ಕಾರ ಎಂದು ಹೊಗಳಿಸಿಕೊಂಡಿರುವ ಗೂಗಲ್ ಗ್ಲಾಸ್ ಅಂತೂ ಸದಾ ಸುದ್ದಿಮಾಡುತ್ತಲೇ ಇರುತ್ತದೆ.

ಇಷ್ಟಕ್ಕೂ ಈ ಸಾಧನಗಳು ಸಂಗ್ರಹಿಸುವ ಮಾಹಿತಿಯೆಲ್ಲ ನಮಗೆ ಯಾಕಾದರೂ ಬೇಕು ಎನ್ನುವುದು ಒಳ್ಳೆಯ ಪ್ರಶ್ನೆ.
ಇದಕ್ಕೆ ಉತ್ತರ ಹುಡುಕಲು ಹೊರಟರೆ ಪರಸ್ಪರ ತದ್ವಿರುದ್ಧವಾದ ಎರಡು ಅಭಿಪ್ರಾಯಗಳು ನಮಗೆ ಕಾಣಸಿಗುತ್ತವೆ. ಸುಲಭವಾಗಿ ಊಹಿಸಬಹುದಾದಂತೆ ಇದು ಶುದ್ಧ ನಿಷ್ಪ್ರಯೋಜಕ ಕೆಲಸ ಎನ್ನುವುದು ಮೊದಲ ಅಭಿಪ್ರಾಯ; ಇಂತಹ ಮಾಹಿತಿ ನಿಜಕ್ಕೂ ಉಪಯುಕ್ತ, ನಮ್ಮನ್ನೇ ನಾವು ಪೂರ್ಣವಾಗಿ ಅರಿಯುವಲ್ಲಿ ಅದು ಸಹಾಯಮಾಡುತ್ತದೆ ಎನ್ನುವುದು ಎರಡನೇ ಅಭಿಪ್ರಾಯ.

ಹೀಗಾಗಿ ಈ ನಿಟ್ಟಿನತ್ತ ಸಂಶೋಧಕರೂ ಗಮನಹರಿಸಿದ್ದಾರೆ. ನಮ್ಮ ಬದುಕಿನ ಬಗ್ಗೆ ಮಾಹಿತಿ ಕಲೆಹಾಕುವ ಯಾವುದೋ ಒಂದು ವೇರಬಲ್ ಟೆಕ್ ಸಾಧನವನ್ನು ಒಂದಷ್ಟು ಜನ ಬಳಕೆದಾರರಿಗೆ ಕೊಟ್ಟು ಅವರ ಅನಿಸಿಕೆ ತಿಳಿದುಕೊಳ್ಳುವುದು ಈ ಸಂಶೋಧನೆಯ ಒಂದು ಮಜಲು. ಹೀಗೆ ವೇರಬಲ್ ಟೆಕ್ ಸಾಧನವನ್ನು ಪಡೆದುಕೊಂಡು ಬಳಸಿನೋಡಿದವರಲ್ಲಿ ಅನೇಕರು ಅವುಗಳ ಉಪಯುಕ್ತತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಹಗಲುಹೊತ್ತಿನಲ್ಲಿ ನಮ್ಮ ಚಟುವಟಿಕೆಗಳು ಹಾಗೂ ರಾತ್ರಿವೇಳೆಯಲ್ಲಿ ನಮ್ಮ ನಿದ್ದೆಯ ಸ್ವರೂಪವನ್ನು ಗಮನಿಸುವ ಕೈಗಡಿಯಾರದಂತಹ ಸಾಧನವನ್ನು ಬಳಸಿನೋಡಿದವರಲ್ಲಿ ಕೆಲವರು ಆ ಸಾಧನ ನಮಗೆ ತಿಳಿಸುವ ಸಂಗತಿಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನಮ್ಮ ಅಭ್ಯಾಸಗಳ ಬಗ್ಗೆ ನಮ್ಮಲ್ಲಿ ಇರಬಹುದಾದಂತಹ ಭ್ರಮೆಗಳನ್ನು (ಉದಾ: ನಾನು ಬಹಳ ವ್ಯಾಯಾಮ ಮಾಡುತ್ತೇನೆ ಎನ್ನುವಂತಹ ತಪ್ಪುಕಲ್ಪನೆ) ಹೋಗಲಾಡಿಸುವಲ್ಲೂ ಇದು ನೆರವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ತಮ್ಮ ಉದ್ಯೋಗಿಗಳಿಗೆ ವೇರಬಲ್ ಟೆಕ್ ಸಾಧನಗಳನ್ನು ಕೊಡುವ ಅಭ್ಯಾಸವನ್ನೂ ಹಲವು ಸಂಸ್ಥೆಗಳು ಬೆಳೆಸಿಕೊಳ್ಳುತ್ತಿವೆ ಎಂದು ಇತ್ತೀಚೆಗೆ ಬಿಬಿಸಿಯಲ್ಲಿ ಪ್ರಕಟವಾದ ಲೇಖನವೊಂದು ಹೇಳಿತ್ತು. ಇಂತಹುದೊಂದು ಉದಾಹರಣೆಯಲ್ಲಿ ವೈಯಕ್ತಿಕ ಆಹಾರ ಅಭ್ಯಾಸಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆ ಮೂಲಕ ಉದ್ಯೋಗಿಗಳಲ್ಲಿ ಆರೋಗ್ಯಕರ ಆಹಾರ ಹಾಗೂ ವ್ಯಾಯಾಮದ ಮಹತ್ವದ ಬಗ್ಗೆ ಎಚ್ಚರಮೂಡಿಸುವುದು ಸಾಧ್ಯವಾಗಿತ್ತಂತೆ.

ಹೀಗೆ ಸಂಗ್ರಹವಾಗುತ್ತದಲ್ಲ ಅಷ್ಟೆಲ್ಲ ಭಾರೀ ಪ್ರಮಾಣದ ಮಾಹಿತಿ, ಅದರ ಒಡೆತನ ಯಾರದ್ದು ಎನ್ನುವುದು ಇನ್ನೊಂದು ಪ್ರಶ್ನೆ. ನನ್ನ ವೈಯಕ್ತಿಕ ಅಭ್ಯಾಸಗಳ ಮಾಹಿತಿಯೆಲ್ಲ ವ್ಯಾಪಾರಿ ಸಂಸ್ಥೆಗಳ ಕೈಗೆ ಸಿಕ್ಕರೆ ಅದನ್ನು ಅವರು ಲಾಭಕ್ಕಾಗಿ ಬಳಸಿಕೊಳ್ಳಬಹುದಲ್ಲ!

ಮಾಹಿತಿಯ ಒಡೆತನ ಯಾರದ್ದೇ ಆದರೂ ಆ ಮಾಹಿತಿಯನ್ನು ಎಷ್ಟು ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತದೆ ಎನ್ನುವುದೂ ಯೋಚಿಸಬೇಕಾದ ವಿಷಯವೇ. ಉದಾಹರಣೆಗೆ ದೈನಂದಿನ ಘಟನೆಗಳೆಲ್ಲವನ್ನೂ ಚಿತ್ರಗಳಾಗಿ ಸೆರೆಹಿಡಿಯುವ ಲೈಫ್‌ಲಾಗಿಂಗ್ ಕ್ಯಾಮೆರಾಗಳಿವೆಯಲ್ಲ, ಆ ಕ್ಯಾಮೆರಾ ಬಳಸುವವರು ಎಲ್ಲಿ ಯಾರದೆಲ್ಲ ಫೋಟೋ ತೆಗೆಯಬಹುದು? ಆ ಫೋಟೋಗಳ ಮೇಲೆ ಫೇಸ್ ರೆಕಗ್ನಿಶನ್‌ನಂತಹ ತಂತ್ರಜ್ಞಾನದ ಪ್ರಯೋಗವೂ ಆದರೆ ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎನ್ನುವಂತಹ ಅಪ್ಪಟ ಖಾಸಗಿ ಮಾಹಿತಿಯೆಲ್ಲ ಜಗಜ್ಜಾಹೀರಾಗಿಬಿಡುವುದಿಲ್ಲವೆ? ಲೈಫ್ ಲಾಗಿಂಗ್ ಹೆಸರಿನಲ್ಲಿ ಎಲ್ಲೆಲ್ಲೋ ಫೋಟೋತೆಗೆಯುವುದು ಕೂಡ ಎಷ್ಟರಮಟ್ಟಿಗೆ ಸರಿ?

ಸದ್ಯಕ್ಕೆ ವೇರಬಲ್ ಟೆಕ್ ಸಾಧನಗಳ ಬಳಕೆ ಇನ್ನೂ ಈಚೆಗಷ್ಟೆ ಪ್ರಾರಂಭವಾಗಿರುವುದರಿಂದ ನಮ್ಮ ಬದುಕಿನ ಮೇಲೆ ಅವುಗಳ ಪ್ರಭಾವ ಎಷ್ಟರಮಟ್ಟಿಗೆ ಇರಲಿದೆ ಎಂದು ಈಗಲೇ ಅಂದಾಜಿಸುವುದು, ಅವುಗಳ ಪರಿಣಾಮಗಳ ಬಗ್ಗೆ ಊಹಾತ್ಮಕವಾಗಿ ಮಾತನಾಡುವುದು ತಪ್ಪಾಗಬಹುದು. ಅಷ್ಟೇ ಏಕೆ, ಇಂತಹ ಸಾಧನಗಳು ವಾಣಿಜ್ಯ ದೃಷ್ಟಿಯಿಂದ ಯಶಸ್ವಿಯಾಗುತ್ತವೋ ಇಲ್ಲವೋ ಎಂದು ಹೇಳುವುದು ಕೂಡ ಕಷ್ಟವೇ. ಹಾಗಿದ್ದರೂ ಕೂಡ ವೇರಬಲ್ ಟೆಕ್ ಸಾಧನಗಳ ಬಳಕೆ ವ್ಯಾಪಕವಾಗಿ ಮುಂದೊಂದು ದಿನ ನಾವೆಲ್ಲರೂ ತಂತ್ರಜ್ಞಾನವನ್ನೇ ಧರಿಸುವಂತಾದರೆ ಆಗ ಅನುಸರಿಸಬೇಕಾದ ನಿಯಮ ನಿಬಂಧನೆ ಶಿಷ್ಟಾಚಾರಗಳ ಕುರಿತು ಈಗಲೇ ಒಮ್ಮೆಯಾದರೂ ಯೋಚಿಸುವುದಂತೂ ಖಂಡಿತಾ ಒಳ್ಳೆಯದು.

ಜೂನ್ ೧೪, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge