ಮಂಗಳವಾರ, ಜೂನ್ 19, 2012

ಅಲನ್ ಟ್ಯೂರಿಂಗ್ ನೆನಪಿನಲ್ಲಿ...

ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ಕಂಡುಹಿಡಿದದ್ದು ಇಂಥವರೇ ಎಂದು ಹೇಳಲಾಗುವುದಿಲ್ಲ ನಿಜ. ಆದರೆ ಕಂಪ್ಯೂಟರ್ ತಂತ್ರಜ್ಞಾನದ ಬೆಳೆವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಅನೇಕರು ಇತಿಹಾಸದಲ್ಲಿ ಕಾಣಸಿಗುತ್ತಾರೆ. ಅಂತಹ ಮೇಧಾವಿಗಳಲ್ಲೊಬ್ಬರು ಅಲನ್ ಟ್ಯೂರಿಂಗ್. ಮುಂದಿನ ಶನಿವಾರ (ಜೂನ್ ೨೩) ಅವರ ನೂರನೇ ಜನ್ಮದಿನ. ಈ ವಿಶೇಷ ಲೇಖನ, ಆ ಮಹನೀಯನ ನೆನಪಿಗೆ ಸಮರ್ಪಿತ.
ಎರಡನೇ ವಿಶ್ವಸಮರ ಎಂದಾಕ್ಷಣ ನಮಗೆ ಅದರಿಂದಾದ ಅನಾಹುತಗಳೇ ನೆನಪಿಗೆ ಬರುತ್ತವಲ್ಲ, ಆ ಮಹಾಯುದ್ಧ ಈಗ ನಮ್ಮ ಬದುಕನ್ನೆಲ್ಲ ಆವರಿಸಿಕೊಂಡಿರುವ ಕಂಪ್ಯೂಟರ್ ತಂತ್ರಜ್ಞಾನದ ಬೆಳೆವಣಿಗೆಗೂ ಕಾರಣವಾಯಿತು. ಯುದ್ಧದ ಸಂದರ್ಭದಲ್ಲಿ ಬೆಳೆವಣಿಗೆ ಕಂಡಿತು ಎಂದಾಗಲೇ ಆ ಬೆಳೆವಣಿಗೆ ಲೋಕಕಲ್ಯಾಣಾರ್ಥವಾಗಿಯೇನೂ ಆಗಿರಲಾರದು ಎಂಬ ಅಂಶ ನಮ್ಮ ಮನಸ್ಸಿಗೆ ಬರುತ್ತದೆ. ಅದು ನಿಜವೂ ಹೌದು. ಆ ಸಮಯದಲ್ಲಿ ಬ್ರಿಟನ್ನಿನಲ್ಲಿ ಆದ ಬೆಳೆವಣಿಗೆಯೆಲ್ಲ ಜರ್ಮನಿಯ ಯುದ್ಧತಂತ್ರವನ್ನು ಅರಿಯಲು - ಮುರಿಯಲೇ ಆಯಿತು ಎಂದರೂ ತಪ್ಪಾಗಲಾರದು.

ಜರ್ಮನಿಯ ಸೇನೆ ರಹಸ್ಯವಾಗಿ ಕಳುಹಿಸುತ್ತಿದ್ದ ಸಂದೇಶಗಳು ಅಮೆರಿಕಾ-ಬ್ರಿಟನ್ ನೇತೃತ್ವದ ಮಿತ್ರರಾಷ್ಟ್ರಗಳ ಕೈಗೆ ಸಿಕ್ಕರೂ ಅವನ್ನು ಅರ್ಥಮಾಡಿಕೊಳ್ಳಲು ಪರದಾಡಬೇಕಾಗಿತ್ತು. ಹಾಗೆಯೇ ಮಿತ್ರರಾಷ್ಟ್ರಗಳ ಸೇನೆಯ ಸಂದೇಶಗಳು ಜರ್ಮನ್ನರ ಕೈಗೆ ಸಿಗದಂತೆಯೂ ಎಚ್ಚರವಹಿಸಬೇಕಿತ್ತು. ಈ ಉದ್ದೇಶಕ್ಕಾಗಿ ಕಟ್ಟಲಾಗುತ್ತಿದ್ದ ತಜ್ಞರ ತಂಡಕ್ಕೆ ಸೇರಿಕೊಂಡವರಲ್ಲಿ ಅಲನ್ ಟ್ಯೂರಿಂಗ್ ಒಬ್ಬರು.

ಆ ಸಮಯದಲ್ಲಿ ಬ್ರಿಟಿಷ್ ಸೇನೆಯ ಬೇಹುಗಾರಿಕೆ ವಿಭಾಗ ಬ್ಲೆಚ್‌ಲಿ ಪಾರ್ಕ್ ಎಂಬಲ್ಲಿತ್ತು. ಅಲನ್ ಟ್ಯೂರಿಂಗ್ ಅಲ್ಲಿಗೆ ಬಂದದ್ದು ೧೯೩೯ರ ಸುಮಾರಿಗೆ. ಜರ್ಮನಿಯ ಸೇನೆ ತನ್ನ ಸಂದೇಶಗಳನ್ನು ರಹಸ್ಯವಾಗಿ ಕಳುಹಿಸಲು ಎನಿಗ್ಮಾ ಎಂಬ ಯಂತ್ರವನ್ನು ಬಳಸುತ್ತಿತ್ತು. ಸಂದೇಶ ಆ ಯಂತ್ರವನ್ನು ಹಾಯ್ದು ಬಂದಿತೆಂದರೆ ಅದು ಯಾರಿಗೆ ಸೇರಬೇಕಿತ್ತೋ ಅವರಿಗೆ ಮಾತ್ರ ಅರ್ಥವಾಗುವ ರೂಪಕ್ಕೆ ಬದಲಾಗಿಬಿಡುತ್ತಿತ್ತು. ಅಂತಹ ಸಂದೇಶಗಳನ್ನು ಪತ್ತೆಮಾಡಿ ಅರ್ಥಮಾಡಿಕೊಳ್ಳಲು ಬೇಕಾದ ವಿಧಾನಗಳನ್ನು ಟ್ಯೂರಿಂಗ್ ಮತ್ತವರ ಸಂಗಡಿಗರು ರೂಪಿಸಿದರು. ಹಾಗೆಯೇ ತಮ್ಮ ಸೇನೆ ಕಳುಹಿಸಬೇಕಾದ ಸಂದೇಶಗಳನ್ನು ಬೇರೆಯವರಿಗೆ ಅರ್ಥವಾಗದಂತೆ ರಹಸ್ಯವಾಗಿ ಕಳುಹಿಸಲು ಬೇಕಾದ ತಂತ್ರಜ್ಞಾನವನ್ನೂ ಅವರು ರೂಪಿಸಿದರು. ಬ್ರಿಟಿಷ್ ಪ್ರಧಾನಿ ಹಾಗೂ ಅಮೆರಿಕಾದ ಅಧ್ಯಕ್ಷರ ನಡುವೆ ರಹಸ್ಯ ಸಂವಹನಕ್ಕೆ ಆಗ ಬಳಕೆಯಾಗುತ್ತಿದ್ದ ಐವತ್ತು ಟನ್ ತೂಕದ ಯಂತ್ರಕ್ಕೆ ಪರ್ಯಾಯವಾಗಿ ಅದೆಷ್ಟೋ ಪಟ್ಟು ಸಣ್ಣದಾದ, ಸಾಗಿಸಲು ಸುಲಭವಾದ ಹಾಗೂ ಹೆಚ್ಚು ಪರಿಣಾಮಕಾರಿಯಾದ ಯಂತ್ರವನ್ನು ಟ್ಯೂರಿಂಗ್ ರೂಪಿಸಿಕೊಟ್ಟರು. ಈ ಸಾಧನೆಗಳು ಯುದ್ಧದ ಗತಿಯನ್ನೇ ಬದಲಿಸಿದವೆಂದರೂ ಸರಿಯೇ.

ಯುದ್ಧದಲ್ಲಿ ಅರಳಿದ ಕಂಪ್ಯೂಟರ್
ಅಲನ್ ಟ್ಯೂರಿಂಗ್ ಸಾಧನೆ ಇದಿಷ್ಟೇ ಆಗಿದ್ದರೆ ಅದರ ಪರಿಣಾಮ ಜರ್ಮನಿಯ ವಿರುದ್ಧ ಮಿತ್ರಸೇನೆಗಳಿಗೆ ಜಯ ತಂದುಕೊಡುವುದಕ್ಕಷ್ಟೆ ಸೀಮಿತವಾಗುತ್ತಿತ್ತೇನೋ. ಆದರೆ ಟ್ಯೂರಿಂಗರ ಅಂದಿನ ಐಡಿಯಾಗಳು ನಮ್ಮ ಇಂದಿನ ಬದುಕನ್ನೂ ರೂಪಿಸುವಷ್ಟು ಪ್ರಭಾವಶಾಲಿಗಳಾಗಿದ್ದವು. ಆತ ರೂಪಿಸಿದ ಯೂನಿವರ್ಸಲ್ ಟ್ಯೂರಿಂಗ್ ಮಷೀನ್ ಎಂಬ ಪರಿಕಲ್ಪನೆ ಇಂದಿನ ಕಂಪ್ಯೂಟರುಗಳ ವಿನ್ಯಾಸಕ್ಕೆ ಸ್ಫೂರ್ತಿಯಾಯಿತು. ಕಾಗದದ ಪಟ್ಟಿಯಲ್ಲಿದ್ದ ಸಂಕೇತಗಳನ್ನು ಓದಬಲ್ಲದಾಗಿದ್ದ ಈ ಸೈದ್ಧಾಂತಿಕ ಯಂತ್ರ ಆ ಮೂಲಕವೇ ತನ್ನ ಇನ್‌ಪುಟ್ ಅನ್ನು ಪಡೆದುಕೊಳ್ಳುತ್ತಿತ್ತು. ಅಷ್ಟೇ ಅಲ್ಲ, ಆ ಸಂಕೇತಗಳ ಮೂಲಕವೇ ಟ್ಯೂರಿಂಗ್ ಮಷೀನ್‌ಗೆ ತಂತ್ರಾಂಶವನ್ನೂ ಊಡಿಸಬಹುದಿತ್ತು. ನಾವೀಗ ಒಂದೇ ಕಂಪ್ಯೂಟರಿನಲ್ಲಿ ಬೇರೆಬೇರೆ ತಂತ್ರಾಂಶಗಳನ್ನು ಬಳಸಿ ಬೇರೆಬೇರೆ ಕೆಲಸಗಳನ್ನು ಮಾಡುತ್ತೇವಲ್ಲ, ಅಂತಹ ಸಾಧ್ಯತೆಯನ್ನು ಮೊತ್ತಮೊದಲಬಾರಿಗೆ ತೋರಿಸಿಕೊಟ್ಟ ಶ್ರೇಯ ಟ್ಯೂರಿಂಗ್‌ಗೆ ಸಲ್ಲುತ್ತದೆ. ಕಂಪ್ಯೂಟರ್ ಸರ್ವಶಕ್ತವೇನಲ್ಲ, ಎಲ್ಲ ಕೆಲಸಗಳಿಗೂ ಅದನ್ನು ಬಳಸುವುದು ಅಸಾಧ್ಯ ಎಂದು ಪುರಾವೆಗಳಿಂದ ಸಿದ್ಧಪಡಿಸಿದ್ದು ಕೂಡ ಟ್ಯೂರಿಂಗ್ ಸಾಧನೆಯೇ.

ಬರಿಯ ಸಿದ್ಧಾಂತಗಳಲ್ಲಷ್ಟೆ ಅಲ್ಲ, ಯುದ್ಧಕಾಲದಲ್ಲಿ ರೂಪುಗೊಂಡ ಕೊಲಾಸಸ್ ಕಂಪ್ಯೂಟರಿನ ವಿನ್ಯಾಸದಲ್ಲೂ ಟ್ಯೂರಿಂಗ್ ಪಾತ್ರ ಇತ್ತು. ಕೃತಕ ಬುದ್ಧಿಮತ್ತೆಯ (ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಎಐ) ಕ್ಷೇತ್ರಕ್ಕೂ ಟ್ಯೂರಿಂಗ್ ಕೆಲಸವೇ ಬುನಾದಿಯಾಯಿತು. ಯಂತ್ರಗಳು ಎಷ್ಟರ ಮಟ್ಟಿಗೆ ಮಾನವ ಬುದ್ಧಿಮತ್ತೆಯ ಸಮೀಪಕ್ಕೆ ಬಂದಿವೆ ಎಂದು ಪರೀಕ್ಷಿಸಲು ಅವರು ರೂಪಿಸಿದ ಟ್ಯೂರಿಂಗ್ ಟೆಸ್ಟ್ ಇಂದಿಗೂ ಪ್ರಸ್ತುತ. ಮನುಷ್ಯ ಯಾರು, ಯಂತ್ರ ಯಾವುದು ಎಂಬ ಅಂಶವನ್ನು ಮುಚ್ಚಿಟ್ಟು ಒಬ್ಬ ಮನುಷ್ಯ ಹಾಗೂ ಒಂದು ಯಂತ್ರದ ಜೊತೆಗೆ ಏಕಕಾಲಕ್ಕೆ ಸಂವಹನೆ ನಡೆಸುವುದು ಈ ಪರೀಕ್ಷೆಯ ವಿಧಾನ. ಬರುವ ಉತ್ತರಗಳನ್ನಷ್ಟೆ ಗಮನಿಸಿ ಅವುಗಳಲ್ಲಿ ಮನುಷ್ಯ ಕೊಟ್ಟ ಉತ್ತರ ಯಾವುದು ಯಂತ್ರ ಕೊಟ್ಟ ಉತ್ತರ ಯಾವುದು ಎಂದು ಪತ್ತೆಮಾಡಲು ಸಾಧ್ಯವಾಗದೆ ಹೋದರೆ ಯಂತ್ರವನ್ನು ಬುದ್ಧಿವಂತನೆಂದು ಕರೆಯಬಹುದು ಎಂದು ಟ್ಯೂರಿಂಗ್ ಪ್ರತಿಪಾದಿಸಿದ್ದರು. ಇತ್ತೀಚೆಗೆ ಭಾರೀ ಸುದ್ದಿಮಾಡಿದ ಐಫೋನ್ ತಂತ್ರಾಂಶ 'ಸಿರಿ' ಸೇರಿದಂತೆ ಯಾವ ಎಐ ಉತ್ಪನ್ನವೂ ಈವರೆಗೆ ಟ್ಯೂರಿಂಗ್ ಪರೀಕ್ಷೆಯನ್ನು ಪರಿಪೂರ್ಣವಾಗಿ ಪಾಸು ಮಾಡಿಲ್ಲ ಎನ್ನುವುದು ಗಮನಾರ್ಹ.

ದುರಂತ ಬದುಕು
ಟ್ಯೂರಿಂಗ್ ಸಾಧನೆಗಳೆಲ್ಲ ಆದದ್ದು ವಿಶ್ವಯುದ್ಧದ ಸಂದರ್ಭದಲ್ಲಿ; ಹೀಗಾಗಿ ಅವೆಲ್ಲವೂ 'ಟಾಪ್ ಸೀಕ್ರೆಟ್' ಕಡತಗಳೊಳಗೆ ಸೇರಿಕೊಂಡು ಬಹಳ ವರ್ಷಗಳವರೆಗೂ ಆಚೆಗೇ ಬಂದಿರಲಿಲ್ಲ. ಇನ್ನು ಕೆಲವು ಪರಿಕಲ್ಪನೆಗಳಂತೂ ಆಗಿನ ಕಾಲಕ್ಕೆ ತೀರಾ ಆಧುನಿಕವಾಗಿದ್ದರಿಂದ ಅವನ್ನು ಅರ್ಥಮಾಡಿಕೊಳ್ಳಲಾಗದೆ ಬದಿಗೊತ್ತಲಾಗಿದ್ದ ಉದಾಹರಣೆಗಳೂ ಉಂಟು.

ಇನ್ನು ಅಲನ್ ಟ್ಯೂರಿಂಗರ ವೈಯಕ್ತಿಕ ಅಭ್ಯಾಸಗಳೂ ಅವರ ಬದುಕಿನ ಮೇಲೆ ನೇರ ಪರಿಣಾಮ ಬೀರಿದವು. ಆಗಿನ ಕಾಲದ ಕಾನೂನಿನ ಪ್ರಕಾರ ಸಲಿಂಗಕಾಮದ ಆರೋಪದ ಮೇಲೆ ಆತ ಶಿಕ್ಷೆ ಅನುಭವಿಸಬೇಕಾಯಿತು. ಕ್ರಿಮಿನಲ್ ಶಿಕ್ಷೆ ಅನುಭವಿಸಿದ ವ್ಯಕ್ತಿಯೆಂದು ಅವರ ಸಂಶೋಧನೆಗಳಿಗೂ ಸಾಕಷ್ಟು ಅಡ್ಡಿಯಾಯಿತು. ಇದಾದ ಸ್ವಲ್ಪವೇ ಸಮಯದಲ್ಲಿ, ೧೯೫೪ರ ಜೂನ್ ೮ರಂದು ಅಲನ್ ಟ್ಯೂರಿಂಗ್ ಮೃತದೇಹ ಪತ್ತೆಯಾಯಿತು. ಮರಣ ಸಂಭವಿಸಿದ್ದು ಸಯನೈಡ್ ವಿಷಪ್ರಾಶನದಿಂದ ಎಂದು ತಿಳಿದುಬಂತಾದರೂ ಅದು ಆತ್ಮಹತ್ಯೆಯೋ ಅಲ್ಲವೋ ಎಂಬ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ. ಆಗಿನ್ನೂ ಟ್ಯೂರಿಂಗ್‌ಗೆ ನಲವತ್ತೊಂದೇ ವರ್ಷ.

ಅವರಿಗೆ ಸಲ್ಲಬೇಕಾದ ಗೌರವ ಸಂದಿದ್ದು ಅವರ ಸಂಶೋಧನೆಯ ವಿವರಗಳೆಲ್ಲ ಪ್ರಕಟವಾದ ಮೇಲೆ, ಅದೂ ೧೯೬೦-೭೦ರ ದಶಕದ ನಂತರವೇ. ೨೦೦೯ರಲ್ಲಿ ಅಂತರಜಾಲದಲ್ಲಿ ನಡೆದ ಅಭಿಯಾನವೊಂದರ ನಂತರ ಬ್ರಿಟನ್ನಿನ ಸರಕಾರ ಟ್ಯೂರಿಂಗ್‌ಗೆ ಆದ ಅವಮಾನಗಳಿಗಾಗಿ ಅಧಿಕೃತ ಕ್ಷಮಾಪಣೆ ಕೇಳಿಕೊಂಡಿತು (ಅವರು ಶಿಕ್ಷೆ ಅನುಭವಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಅವರಿಗೆ ಕ್ಷಮಾದಾನ ನೀಡಬೇಕೆಂಬ ಬೇಡಿಕೆಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ). ಟ್ಯೂರಿಂಗ್ ಜನ್ಮಶತಮಾನೋತ್ಸವವಾದ ಈ ವರ್ಷವನ್ನು ಅಲನ್ ಟ್ಯೂರಿಂಗ್ ವರ್ಷವೆಂದು ಆಚರಿಸುವ ಯೋಜನೆ ಸಿದ್ಧವಾಗಿದೆ; ಅವರ ಗೌರವಾರ್ಥ ಹಲವು ಅಂಚೆಚೀಟಿಗಳು ಈಗಾಗಲೇ ಬಿಡುಗಡೆಯಾಗಿವೆ.

ಈ ವ್ಯಕ್ತಿ ಇನ್ನಷ್ಟು ವರ್ಷ ಬದುಕಿದ್ದರೆ ನಮ್ಮ ಬದುಕು ಇನ್ನೆಷ್ಟು ಬದಲಾಗುತ್ತಿತ್ತೋ ಎಂಬ ಪ್ರಶ್ನೆ ಕೂಡ, ಅದೆಷ್ಟನೆಯ ಬಾರಿಯೋ, ಮತ್ತೆ ಕೇಳಿಬರುತ್ತಿದೆ.

ಜೂನ್ ೧೯, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge