ಟಿ ಜಿ ಶ್ರೀನಿಧಿ
ಕಂಪ್ಯೂಟರ್ ಅಥವಾ ಗಣಕವನ್ನು ಬಳಸಿ ಅನೇಕ ಕೆಲಸಗಳನ್ನು ಅತ್ಯಂತ ವೇಗವಾಗಿ ಮಾಡಬಹುದು. ಆದರೆ ಗಣಕಕ್ಕೆ ಸ್ವಂತ ಬುದ್ಧಿ ಇರುವುದಿಲ್ಲ. ಅದು ನಾವು ಹೇಳಿದ ಕೆಲಸ ಮಾತ್ರ ಮಾಡುತ್ತದೆ.
ಈಗ ನಮಗೆ ೧+೧=? ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ ಎಂದುಕೊಳ್ಳೋಣ. ೧+೧ ಎನ್ನುವುದು ನಾವು ಗಣಕಕ್ಕೆ ನೀಡುವ ಮಾಹಿತಿ. ಇದನ್ನು ಇನ್ಪುಟ್ ಎನ್ನುತ್ತಾರೆ. ಈ ಪ್ರಶ್ನೆಯ ಉತ್ತರ ಗಣಕ ನಮಗೆ ನೀಡುವ ಮಾಹಿತಿ. ಇದಕ್ಕೆ ಔಟ್ಪುಟ್ ಎಂದು ಹೆಸರು.
ನಾವು ಕೊಟ್ಟ ಇನ್ಪುಟ್ ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ಔಟ್ಪುಟ್ ಕೊಡಬೇಕು ಎಂದು ಗಣಕಕ್ಕೆ ತಿಳಿಸಿ ಹೇಳುವುದು ಸಾಫ್ಟ್ವೇರ್ ಅಥವಾ ತಂತ್ರಾಂಶದ ಕೆಲಸ.
ಹೀಗೆ ಸಿಕ್ಕ ಔಟ್ಪುಟ್ ಅನ್ನು ಪರದೆಯ ಮೇಲೆ ನೋಡಬಹುದು, ಗಣಕದಲ್ಲೇ ಉಳಿಸಿಡಬಹುದು, ಮುದ್ರಿಸಿಕೊಳ್ಳಲೂಬಹುದು. ಈ ಕೆಲಸದಲ್ಲಿ ಸಹಾಯಮಾಡುವ ಮಾನಿಟರ್, ಹಾರ್ಡ್ಡಿಸ್ಕ್, ಪ್ರಿಂಟರ್ ಮುಂತಾದ ನಮ್ಮ ಕಣ್ಣಿಗೆ ಕಾಣುವ ಭಾಗಗಳನ್ನು ಹಾರ್ಡ್ವೇರ್ ಅಥವಾ ಯಂತ್ರಾಂಶ ಎಂದು ಕರೆಯುತ್ತಾರೆ.
ಇದನ್ನೆಲ್ಲ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಒಂದು ಪ್ರಶ್ನೆ ಕೇಳೋಣ - ಕಾಫಿ ಮಾಡುವುದು ಹೇಗೆ?
ಇದಕ್ಕೆ ಉತ್ತರ ಏನು? ಪಾತ್ರೆಗೆ ಹಾಲು ಹಾಕಿ ಒಲೆಯ ಮೇಲೆ ಇಡು, ಸಕ್ಕರೆ ಹಾಕು, ಚೆನ್ನಾಗಿ ಬಿಸಿ ಮಾಡು, ಡಿಕಾಕ್ಷನ್ ಬೆರೆಸು ಹಾಗೂ ಲೋಟಕ್ಕೆ ಹಾಕಿ ಕೊಡು.
ಇದನ್ನೇ ಕಂಪ್ಯೂಟರ್ ಭಾಷೆಯಲ್ಲಿ ಹೇಳಿದರೆ - ಹಾಲು, ಡಿಕಾಕ್ಷನ್ ಹಾಗೂ ಸಕ್ಕರೆ ಇನ್ಪುಟ್; ಬಿಸಿಬಿಸಿ ಕಾಫಿ ಔಟ್ಪುಟ್. ಕಾಫಿ ಮಾಡುವುದು ಹೇಗೆ ಎಂದು ಹೇಳುವುದು ತಂತ್ರಾಂಶದ ಕೆಲಸ. ಪಾತ್ರೆ, ಒಲೆ, ಲೋಟ ಇವೆಲ್ಲ ಹಾರ್ಡ್ವೇರ್.
ಎಷ್ಟು ಸುಲಭ ಅಲ್ಲವೆ?
1 ಕಾಮೆಂಟ್:
Thank u for thise article.Excellent.
ಕಾಮೆಂಟ್ ಪೋಸ್ಟ್ ಮಾಡಿ