ಮಂಗಳವಾರ, ನವೆಂಬರ್ 16, 2010

ಟ್ಯಾಬ್ಲೆಟ್ ಕದನ

ಟಿ ಜಿ ಶ್ರೀನಿಧಿ

ಈಚಿನ ಕೆಲ ತಿಂಗಳುಗಳಿಂದ ಗಣಕ ಲೋಕದಲ್ಲೆಲ್ಲ ಟ್ಯಾಬ್ಲೆಟ್‌ಗಳದ್ದೇ ಸುದ್ದಿ. ಮೊದಲಿಗೆ ಈ ಸಂಚಲನ ಹುಟ್ಟುಹಾಕಿದ್ದು ವರ್ಷದ ಪ್ರಾರಂಭದಲ್ಲಿ ಮಾರುಕಟ್ಟೆಗೆ ಬಂದ ಆಪಲ್ ಸಂಸ್ಥೆಯ ಐಪ್ಯಾಡ್. ಆಮೇಲಂತೂ ಸಾಲುಸಾಲಾಗಿ ಟ್ಯಾಬ್ಲೆಟ್‌ಗಳು ಸುದ್ದಿಯಲ್ಲಿವೆ - ಬ್ಲಾಕ್‌ಬೆರಿಯ ಪ್ಲೇಬುಕ್, ಎಚ್‌ಪಿ ಸ್ಲೇಟ್, ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ ಎಲ್ಲ ಸೇರಿಕೊಂಡು ದೊಡ್ಡಪ್ರಮಾಣದ ಟ್ಯಾಬ್ಲೆಟ್ ಸಮರಕ್ಕೆ ನಾಂದಿಹಾಡಿವೆ.

ಏನಿದು ಟ್ಯಾಬ್ಲೆಟ್?
ಸ್ಪರ್ಶ ಸಂವೇದನೆ ಹೊಂದಿರುವ ಒಂದೇ ಫಲಕದಲ್ಲಿ (ಟಚ್-ಸ್ಕ್ರೀನ್) ಅಡಕವಾಗಿರುವ ಸಂಪೂರ್ಣ ಗಣಕವೇ ಟ್ಯಾಬ್ಲೆಟ್. ಸಾಮಾನ್ಯ ಗಣಕಗಳನ್ನು ಬಳಸಿ ಏನೆಲ್ಲ ಮಾಡಬಹುದೋ ಅದನ್ನೆಲ್ಲ ಟ್ಯಾಬ್ಲೆಟ್ ಕೂಡ ಮಾಡಬಲ್ಲದು. ಸಾಮಾನ್ಯವಾಗಿ ಇವುಗಳಲ್ಲಿ ಕೀಲಿಮಣೆ ಇರುವುದಿಲ್ಲ; ಕೈಬೆರಳು ಅಥವಾ ಸ್ಟೈಲಸ್ ಕಡ್ಡಿ ಉಪಯೋಗಿಸಬೇಕಾಗುತ್ತದೆ. ನಾವೆಲ್ಲ ಚಿಕ್ಕವಯಸ್ಸಿನಲ್ಲಿ ಉಪಯೋಗಿಸಿದ್ದ ಸ್ಲೇಟನ್ನು ನೆನಪಿಸಿಕೊಳ್ಳಿ. ಟ್ಯಾಬ್ಲೆಟ್ ಗಣಕವನ್ನು ಅದರ ಮಾಡರ್ನ್ ಅವತಾರ ಎಂದು ಕರೆಯಬಹುದು.

ಆಪಲ್ ಐಪ್ಯಾಡ್ ಈ ವರ್ಷ ಮಾರುಕಟ್ಟೆಗೆ ಬಂತು ಎಂದಮಾತ್ರಕ್ಕೆ ಟ್ಯಾಬ್ಲೆಟ್ ತಂತ್ರಜ್ಞಾನ ನಿನ್ನೆಮೊನ್ನೆ ಹುಟ್ಟಿದ್ದೇನೂ ಅಲ್ಲ. ಕೈಯಲ್ಲಿ ಹಿಡಿದುಕೊಳ್ಳಬಹುದಾದ (ಹ್ಯಾಂಡ್‌ಹೆಲ್ಡ್) ಗಣಕಗಳ ಸೃಷ್ಟಿಗೆ ಸುಮಾರು ನೂರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದ ಬಗ್ಗೆ ದಾಖಲೆಗಳಿವೆ. ಆದರೆ ಟ್ಯಾಬ್ಲೆಟ್ ಗಣಕಕ್ಕೆ ನಾಮಕರಣವಾದದ್ದು ಮಾತ್ರ ೨೦೦೦ದಲ್ಲಿ, ಮೈಕ್ರೋಸಾಫ್ಟ್ ಸಂಸ್ಥೆ ತನ್ನ 'ಟ್ಯಾಬ್ಲೆಟ್ ಪಿಸಿ'ಯನ್ನು ಪರಿಚಯಿಸಿದಾಗ. ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಟ್ಯಾಬ್ಲೆಟ್‌ಗಳು ಹೆಚ್ಚಿನ ಜನಪ್ರಿಯತೆ ಕಾಣಲಿಲ್ಲ. ಹೆಚ್ಚಿನ ತೂಕ, ಬಳಕೆದಾರ ಸ್ನೇಹಿಯಲ್ಲದ ತಂತ್ರಾಂಶಗಳು - ಹೀಗೆ ಅನೇಕ ಕಾರಣಗಳಿಂದ ಟ್ಯಾಬ್ಲೆಟ್ ಮಾರುಕಟ್ಟೆ ಅಷ್ಟಾಗಿ ಬೆಳೆದಿರಲಿಲ್ಲ.

ಟ್ಯಾಬ್ಲೆಟ್ ಸಮರ
ಆದರೆ ೨೦೧೦ರಲ್ಲಿ ಆಪಲ್ ಐಪ್ಯಾಡ್ ಮಾರುಕಟ್ಟೆಗೆ ಬಂದಾಗ ಈ ಪರಿಸ್ಥಿತಿ ಬಹುಮಟ್ಟಿಗೆ ಬದಲಾಗಿತ್ತು. ಸುಲಭವಾಗಿ ಬಳಸಬಹುದಾದ ತಂತ್ರಾಂಶಗಳು, ಉತ್ತಮ ಗುಣಮಟ್ಟದ ಟಚ್-ಸ್ಕ್ರೀನ್, ಕಡಿಮೆ ತೂಕ, ಜೊತೆಗೆ ಆಪಲ್‌ನ ಬ್ರಾಂಡ್ ನೇಮ್ ಎಲ್ಲ ಸೇರಿಕೊಂಡು ಟ್ಯಾಬ್ಲೆಟ್‌ಗಳಿಗೊಂದು ಪುನರ್ಜನ್ಮ ದೊರೆಯಿತು.

ಐಪ್ಯಾಡ್ ಜನಪ್ರಿಯವಾಗುತ್ತಿದ್ದಂತೆಯೇ ಹೊಸ ಟ್ಯಾಬ್ಲೆಟ್ಟುಗಳು ಸಾಲುಸಾಲಾಗಿ ಮಾರುಕಟ್ಟೆಗೆ ಬರುವುದು ಪ್ರಾರಂಭವಾಗಿದೆ. ಬ್ಲಾಕ್‌ಬೆರಿ ನಿರ್ಮಾತೃಗಳಾದ ರೀಸರ್ಚ್ ಇನ್ ಮೋಷನ್ ಸಂಸ್ಥೆ ತನ್ನ 'ಪ್ಲೇಬುಕ್' ಅನ್ನು ಈಗಾಗಲೇ ಪ್ರದರ್ಶಿಸಿದೆ. ಸ್ಯಾಮ್‌ಸಂಗ್‌ನ ಗೆಲಾಕ್ಸಿ ಟ್ಯಾಬ್ ಮತ್ತು ಎಚ್‌ಪಿ ಸ್ಲೇಟ್ ಟ್ಯಾಬ್ಲೆಟ್‌ಗಳು ಇಷ್ಟರಲ್ಲೇ ಮಾರುಕಟ್ಟೆಗೆ ಬರಲಿವೆ.

ಬಡವರ ಟ್ಯಾಬ್ಲೆಟ್
ಟ್ಯಾಬ್ಲೆಟ್‌ಗಳದು ಹೆಚ್ಚಿನ ಯಂತ್ರಾಂಶ ಅಗತ್ಯವಿಲ್ಲದ ಸರಳ ವಿನ್ಯಾಸ; ಜೊತೆಗೆ ಅವುಗಳನ್ನು ಉಪಯೋಗಿಸುವುದೂ ಸುಲಭ. ಇದೀಗ ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಕೂಡ ಲಭ್ಯವಿರುವುದರಿಂದ ತಂತ್ರಾಂಶಗಳೂ ದುಬಾರಿಯಲ್ಲ. ಹೀಗಾಗಿ ಅಭಿವೃದ್ಧಿಶೀಲ ದೇಶಗಳ ಮಕ್ಕಳಿಗೆ ಆಧುನಿಕ ಶಿಕ್ಷಣ ಒದಗಿಸಲು ಟ್ಯಾಬ್ಲೆಟ್‌ಗಳೇ ಸರಿಯಾದ ಮಾಧ್ಯಮ ಎಂಬ ಅಭಿಪ್ರಾಯ ಮೂಡಿದೆ.

ಸುಲಭ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ತಯಾರಿಸುವ ಉದ್ದೇಶದೊಡನೆ ಕೆಲಸಮಾಡುತ್ತಿರುವ 'ಒನ್ ಲ್ಯಾಪ್‌ಟಾಪ್ ಪರ್ ಚೈಲ್ಡ್' ಕಾರ್ಯಕ್ರಮ (ಒಎಲ್‌ಪಿಸಿ) ಇದೀಗ ಟ್ಯಾಬ್ಲೆಟ್ ಗಣಕವನ್ನೂ ಸೃಷ್ಟಿಸಲು ಹೊರಟಿದೆ. ಎಕ್ಸ್‌ಒ-೩ ಹೆಸರಿನ ಈ ಟ್ಯಾಬ್ಲೆಟ್ ಅನ್ನು ಐದು ಸಾವಿರ ರೂಪಾಯಿಗಳ ಒಳಗೆ ಲಭ್ಯವಾಗುವಂತೆ ಮಾಡುವುದು ಒಎಲ್‌ಪಿಸಿ ಉದ್ದೇಶ.

ಭಾರತ ಕೂಡ ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇದೇ ವರ್ಷ ಅನಾವರಣಗೊಂಡ 'ಸಾಕ್ಷಾತ್' ವಿಶ್ವದ ಅತ್ಯಂತ ಕಡಿಮೆ ಬೆಲೆಯ ಟ್ಯಾಬ್ಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೂವರೆ ಸಾವಿರ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಟ್ಯಾಬ್ಲೆಟ್ ಅನ್ನು ಭಾರತೀಯ ವಿಜ್ಞಾನ ಮಂದಿರ ಹಾಗೂ ಐಐಟಿಗಳು ಜಂಟಿಯಾಗಿ ರೂಪಿಸಿವೆ. ಎರಡು ಗಿಗಾಬೈಟ್ ಮೆಮೊರಿ, ಅಂತರಜಾಲ ಸಂಪರ್ಕ, ಸ್ಪರ್ಶಸಂವೇದಿ ಪರದೆಗಳನ್ನು ಹೊಂದಿರುವ ಸಾಕ್ಷಾತ್‌ಗಾಗಿಯೇ ಐಐಟಿಗಳು ಅನೇಕ ಶೈಕ್ಷಣಿಕ ತಂತ್ರಾಂಶಗಳನ್ನು ರೂಪಿಸಿವೆ.

ಮುಂದಿನ ವರ್ಷದ ವೇಳೆಗೆ ಇಂತಹ ಹತ್ತು ಲಕ್ಷ ಟ್ಯಾಬ್ಲೆಟ್‌ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ. ಇವುಗಳ ಉತ್ಪಾದನೆ ಹೆಚ್ಚಿದಂತೆ ಬೆಲೆ ಇನ್ನೂ ಕಡಿಮೆಯಾಗಬಹುದು ಎಂಬ ನಿರೀಕ್ಷೆಯೂ ಇದೆ.

ನವೆಂಬರ್ ೧೬, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge